ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ 2023ರ ವಿಧಾನಸಭೆ ಚುನಾವಣೆಯ ಮಿಷನ್ 123 ಯುದ್ಧ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ಧಾರೆ.
ನೆಲಮಂಗಲ ಸಮೀಪದಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಜಲಧಾರೆ ಕಾರ್ಯಕ್ರಮದ ಪೂರ್ವ ಸಿದ್ದತೆ ವೀಕ್ಷಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು. ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಚಾರಗಳ ಚರ್ಚೆ ಜೊತೆಗೆ ಹಲವು ನೀರಾವರಿ ವಿಚಾರಗಳಿಗೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆ ಮಾಡುತ್ತೇವೆ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ತಮ್ಮ ಪಕ್ಷ ಬಂದರೆ ಕಳೆದ 75 ವರ್ಷಗಳ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಹಲವಾರು ಇತಿಹಾಸ ಇರುವ ನದಿಗಳ ನೀರು ಬಳಕೆ ಮಾಡಿಕೊಂಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷದಿಂದ ನದಿಗಳನ್ನು ಉಪಯೋಗ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ..
ಹೀಗಾಗಿ ಜಲಧಾರೆ ದೇಶದಲ್ಲೇ ಮೊದಲನೇ ದೊಡ್ಡ ಕಾರ್ಯಕ್ರಮ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ನನ್ನ ಹಾಗೂ ಪಕ್ಷದ ಸಂಕಲ್ಪಕ್ಕೆ ಗಂಗಾ ಮಾತೆಯ ಆಶೀರ್ವಾದ ಸಿಗಲಿ ಅಂತ ವಾರಣಾಸಿಯಲ್ಲಿ ಗಂಗಾರತಿ ಮಾಡುವ 25 ಜನರ ತಂಡವನ್ನು ಕರೆಸಿ ಅವರ ಮೂಲಕವೇ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸುವ ಮೂಲಕ ಚಾಲನೆ ನೀಡುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ನಾವು ನಮ್ಮ ಅಸ್ತಿತ್ವವನ್ನು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.
ಜೆಡಿಎಸ್ ಪಕ್ಷ ಮುಗಿದೇ ಹೋಯಿತು. ಆ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ ಎಂದು ಬಿಂಬಿಸುತ್ತಿದ್ದವರಿಗೆ, ಜೆಡಿಎಸ್ ಗೆ ಅಸ್ತಿತ್ವ ಇಲ್ಲ ಎಂದು ಹೇಳಿ ನಮ್ಮ ಪಕ್ಷದ ಕೆಲ ಮುಖಂಡರನ್ನು ಸೆಳೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ನವರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇದು ಒಂದು ಭಾಗವಾಗಿದ್ದು ಇದರ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೆಲ ರಾಜಕೀಯ ಸನ್ನಿವೇಶದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿ ಬಂತು. ಆದರೆ ಈ ಬಾರಿ ಜನರ ಆಶೀರ್ವಾದದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಸಂಕಲ್ಪ ಹಾಗೂ ಗುರಿಯನ್ನು ಹೊಂದಿದ್ದೇನೆ. ಜನರ ವಿಶ್ವಾಸ ಗಳಿಸುವುದಕ್ಕೆ ನಾಳೆಯ ಕಾರ್ಯಕ್ರಮ ಪ್ರಮುಖವಾಗಿದೆ ಎಂದಿದ್ದಾರೆ.

ಮತಾಂತರ ಆಗದಂತೆ ಸರಕಾರ ನೋಡಿಕೊಳ್ಳಬೇಕು:
ಮತಾಂತರ ನಿಷೇಧ ಕಾಯಿದೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು,ಇಂತಹ ತರಾತುರಿ ಯಾಕೆ. ಮತಾಂತರ ಯಾಕೆ ಆಗುತ್ತದೆ?. ಮತಾಂತರ ಆಗದೇ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಶೋಷಿತ ಒಂದು ವರ್ಗ ದಬ್ಬಾಳಿಕೆಗೆ ಒಳಗಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಧರ್ಮಾಂತರ ಆದರು. ಸಮಸ್ಯೆಯಿಂದಲೇ ಮತಾಂತರ ಆಗಿರಬೇಕಲ್ಲವೇ?. ಕಾನೂನಿನಿಂದ ಮತಾಂತರ ತಡೆಯುವುದಕ್ಕೆ ಆಗುವುದಿಲ್ಲ. ಅವರಿಗೆ ಬದುಕು ಕಟ್ಟಿಕೊಟ್ಟರೆ ಯಾಕೆ ಮತಾಂತರ ಆಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.