ಹೆಚ್ ಡಿ ದೇವೇಗೌಡರು ಕೆಲವು ವಿಚಾರದಲ್ಲಿ ನ್ಯಾಯ ಒದಗಿಸಿದ್ದಾರೆ. ಆದರೆ ಜಯರಾಮ್ ಕೀಲಾರ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡಲಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೆಚ್ ಡಿ ದೇವೇಗೌಡರು ಅಸಹಾಯಕರಾಗಿದ್ದರು ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಪದವೀಧರ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ರೆಬೆಲ್ ಎಂ ಎಲ್ ಸಿ ಮರಿತಿಬ್ಬೇಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧುಮಾದೇಗೌಡರನ್ನು ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಮರಿತಿಬ್ಬೇಗೌಡ, ಬಿಜೆಪಿ ಅಭ್ಯರ್ಥಿ ಸೋಲಿಗೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ ಎಂದು ಪ್ರತಿಪಾದನೆ ಮಾಡಿದರು. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಯರಾಮ್ ಕೀಲಾರ ಕೂಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಆದ ಗೊಂದಲ. ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರ ಬಗ್ಗೆ ಅವಹೇಳನ ಮಾಡಿದ್ದು ಸೇರಿದಂತೆ ಸರ್ಕಾರದ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತ ಪದವೀಧರ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.