ಪಕ್ಷ ಸಂಘಟನೆ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಜೆಡಿಎಸ್ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತಂದು ಆ ಜನರಿಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟವರು. ಅವಂತವರ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರು. ಮಾಜಿ ಪ್ರಧಾನಿಗಳು ಉತ್ತರ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಇದ್ದೇನೆ ಎಂದು ಸವಾಲು ಹಾಕಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ಲಿಂಗೇಶ್, ಮಾಜಿ ಶಾಸಕ ಶಿವಶಂಕರ್ ಅವರೆಲ್ಲ ಸೇರಿ ಈ ಸಭೆ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಈ ಸಮೂಹ ನೋಡಿ ನನಗಷ್ಟೇ ಅಲ್ಲ, ದೇವೇಗೌಡರಿಗೆ ಕೂಡ ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಎಲ್ಲ ಸಮುದಾಯಗಳನ್ನು ಒಳಗೊಂಡ ಪಕ್ಷ ನಮ್ಮದು. ಎಲ್ಲರೂ ನಮ್ಮವರು ಎನ್ನುವ ತತ್ವ ನಮ್ಮದು. ಬಿಜೆಪಿಯಿಂದ ಸಮುದಾಯವಾರು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಅದೇ ಕೆಲಸ ಮಾಡುತ್ತಿದೆ. ಆದರೆ, ನಮ್ಮ ಪಕ್ಷ ಅಂಥ ಸಭೆಗಳನ್ನು ಮಾಡುತ್ತಿಲ್ಲ, ಬದಲಿಗೆ ಸರ್ವ ಜನರ ಕಲ್ಯಾಣದ ಬಗ್ಗೆ ಕೆಲಸ ಮಾಡುತ್ತಿದೆ ರಾಜ್ಯದ ಒಟ್ಟಾರೆ ಸಮಸ್ಯೆಗಳಿಗೆ ಪರಿಹಾರ ನೀಡಲು ಪಂಚರತ್ನ ರಥಯಾತ್ರೆ ಹಮ್ಮಿಕೊಂಡಿದ್ದೇನೆ. ಪಂಚರತ್ನ ಯೋಜನೆ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳ ನಾಯಕರು ಜನರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಬದಲು ಒಂದೊಂದು ವರ್ಗಗಳ ಸಮಾವೇಶ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನರಿಗೆ ಕೊಟ್ಟಿರುವುದೇನು? ಸಭೆಗೆ ಜನ ಸೇರಿಸೋದು ಮಾತ್ರ ಅವರ ಕೆಲಸವಾ? ಸಮಾವೇಶಗಳ ಮೂಲಕ ಆಯಾ ಸಮಾಜಗಳಿಗೆ ಏನು ಸಂದೇಶ ಕೊಡುತ್ತಾರೆ ಅವರು? ಎಂದು ಅವರು ಕಿಡಿಕಾರಿದರು.
ಸಾಲ ಮನ್ನಾ ಮಾಡಲು ವಿರೋಧ ಮಾಡಿದ್ದ ಕಾಂಗ್ರೆಸ್
ನಾನು ಸಾಲ ಮನ್ನಾ ಮಾಡಬೇಕಾಗಿರಲ್ಲಿಲ್ಲ. ಆದರೆ ರೈತರ ನೋವು ನನ್ನ ಮನಸ್ಸನ್ನ ನೋಯಿಸಿತ್ತು. ಅವತ್ತು ಸಿದ್ದರಾಮಯ್ಯ ಅವರು ತಮ್ಮ ಸರಕಾರ ಜಾರಿಗೆ ತಂದ ಯೋಜನೆಗಳಿಗೆ, ಭಾಗ್ಯಗಳಿಗೆ ಹಣಕಾಸು ತೊಂದರೆ ಆಗಬಾರದು ಅಂತ ಷರತ್ತು ಹಾಕಿದ್ದರು. ಸಾಲಮನ್ನಾ ನಮ್ಮ ಭರವಸೆ ಅಲ್ಲ ಎನ್ನುತ್ತಿದ್ದರು. ಆಗ ನಾನು ಕೂಡ ನನ್ನ ಮಾತು ಉಳಿಸಿಕೊಳ್ಳಬೇಕಾಗಿತ್ತು. ಆ ಕಾರಣಕ್ಕೆ ಸಾಲ ಮನ್ನಾ ಮಾಡಿದೆ. ಉತ್ತರ ಕರ್ನಾಟಕ ಅಸಂಖ್ಯಾತ ರೈತರಿಗೆ ಅನುಕೂಲ ಆಯಿತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಉತ್ತರ ಕರ್ನಾಟಕ ಹೆಚ್ಚಿನ ಭಾಗದ ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಬಿಟಿ ಕಾಟನ್ ಬಂದ ಮೇಲೆ ರೈತರ ಬದುಕು ಹಾಳಾಗುತ್ತಿದೆ. ಹತ್ತಿ, ಸೂರ್ಯಕಾಂತಿ ಬೆಳೆದ ರೈತರ ಪರಿಸ್ಥಿತಿ ಹೈರಾಣಾಗಿದೆ. ಆದರೆ ಜೆಡಿಎಸ್ ಯಾವ ತಪ್ಪನ್ನೂ ಮಾಡಿಲ್ಲ ಎಂದು ಮತನಾಡುವ ವೇಳೆ ಹೇಳಿದ್ದಾರೆ.

ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ವಿವಿ ಸ್ಥಾಪನೆ
ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಬೆಲೆ ಇಳಿಕೆ ಇತ್ಯಾದಿ ಕಾರಣಗಳಿಂದ ರೈತರ ಬವಣೆ ಹೇಳ ತೀರದಾಗಿದೆ. ಈ ಮೊದಲೇ ಕೋವಿಡ್ ನಿಂದ ಜನರು ಅತಿಯಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲಿ ಸರಕಾರ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿಲ್ಲಿಸುತ್ತದೆ ಎಂದರು.
ನಾಡಪ್ರಭುಗಳು ಬೆಂಗಳೂರು ಮಹಾನಗರ ಕಟ್ಟಿದರು. ಜಾತಿ ಧರ್ಮ ಮೀರಿ ಜೀವನೋಪಾಯ ಕಲ್ಪಿಸಿದರು. ಕೌಶಲ್ಯ ಆಧಾರಿತ ಉದ್ಯೋಗ ಸೃಷ್ಟಿ ಮಾಡಿದರು. ಮಾದರಿ ಆಡಳಿತ ನಡೆಸಿದರು. ಆದರೆ ಈ ಸರಕಾರ ಅವರ ಪ್ರತಿಮೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ನರೇಂದ್ರ ಮೋದಿ ಬರುತ್ತಾರೆ ಎಂದು ಸಚಿವರೆಲ್ಲ ಹೋಗಿ ಜಾತ್ರೆ ಮಾಡುತ್ತಿದ್ದಾರೆ. ನೆರೆ ಬಂದಾಗ, ಬರ ಬಂದಾಗ, ಜನರು ಕಷ್ಟಕ್ಕೆ ಸಿಲುಕಿದಾಗ ಮೋದಿ ರಾಜ್ಯಕ್ಕೆ ಬರಲಿಲ್ಲ ಎಂದು ಟೀಕಿಸಿದ್ದಾರೆ.
ಸರಕಾರ ನಿಜಕ್ಕೂ ಕೆಂಪೇಗೌಡರ ಮೇಲೆ ಗೌರವ, ಭಕ್ತಿ ಇದ್ದರೆ ಅವರ ಹೆಸರಲ್ಲಿ ಉದ್ಯೋಗ ಕೊಡುವ ಕೆಲಸ ಮಾಡಬೇಕು. ಜನತೆಗೆ ಅನ್ನ ಸಿಗುವ ಕಾರ್ಯ ಮಾಡಬೇಕು. ಅವರ ಕೌಶಲ್ಯಪೂರ್ಣ ಆಡಳಿತಕ್ಕೆ ಗೌರವ ತರುವ ಕಾರ್ಯ ಮಾಡಬೇಕು. ನನ್ನ ಸರಕಾರ ಅಧಿಕಾರಕ್ಕೆ ಬಂದರೆ, ನಾಡಪ್ರಭುಗಳ ಹೆಸರಿನಲ್ಲಿ ಕೆಂಪೇಗೌಡ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಘೋಷಿಸಿದ್ದಾರೆ.






