ಕರ್ನಾಟಕದ (Karnataka) ನೀರಾವರಿ ವಿಚಾರಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು (Ex Pm Devegowda) ಮತ್ತೊಮ್ಮೆ ತಮ್ಮ ಬದ್ಧತೆ ಪ್ರದರ್ಶನ ಮಾಡಿದ್ದಾರೆ. ಹೌದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯಸಭೆಯಲ್ಲಿ (Rajya sabha) ಇಂದು, ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಗಂಭೀರ ಸಮಸ್ಯೆಗೆ ಪರಿಹಾರ ಹಾಗೂ ಕಾವೇರಿ ನದಿ ವಿವಾದ ಬಗೆಹರಿಸುವಂತೆ ಕೇಂದ್ರದ NDA ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.
ಕಾವೇರಿ ನದಿ ನೀರು ವಿಚಾರದಲ್ಲಿ ಇಡೀ ದೇಶದಲಷ್ಟೇ ಅಲ್ಲ, ವಿಶ್ವದಲ್ಲೇ ಯಾವುದೇ ಮಧ್ಯಂತರ ಆದೇಶಗಳು ಇಷ್ಟು ಬಂದಿಲ್ಲ. ಕಾವೇರಿ ನದಿ ಪ್ರಾಧಿಕಾರ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ, ದಿನಕೊಮ್ಮೆ ತಮಿಳುನಾಡಿಗೆ ನೀರು ಬಿಡುವಂತೆ ಮಧ್ಯಂತರ ಆದೇಶಗಳನ್ನು ನೀಡುತ್ತಿದೆ. ಬೆಂಗಳೂರಿನ ಜನರಿಗೆ ನೀರೇ ಇಲ್ಲದಿರುವಾಗ ನಾವು ಹೇಗೆ ತಾನೆ ಬಿಡಲು ಸಾಧ್ಯ? ಎಂದು ತಮ್ಮ ಆಕ್ರೋಶವನ್ನು ಸದನದಲ್ಲಿ ವ್ಯಕ್ತಪಡಿಸಿದರು.
ಕಾವೇರಿ, ಮಹದಾಯಿ, ಕೃಷ್ಣ ನದಿ ನೀರು ವಿಚಾರದಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಬಲಿಸುತ್ತಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹಲವು ಸಲ ಬೇಡಿಕೊಂಡರು ಕಾವೇರಿ ನದಿ ವಿವಾದ ಬಗೆಹರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೈ ತೊಳೆದುಕೊಂಡರು.
ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಮಾತ್ರವೇ ಕಾವೇರಿ ನದಿ ವಿವಾದ ಪರಿಹರಿಸಲು ಸಾಧ್ಯ. ಅವರು ಮಧ್ಯಪ್ರವೇಶಿಸಬೇಕು ಎಂದು ದೇವೇಗೌಡರು ಆಗ್ರಹಿಸಿದ್ದಾರೆ.