ಬೆಂಗಳೂರು : ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬುದು ಸುಳ್ಳು. ನಾನು ಪಕ್ಷ ಹೇಳಿದಂತೆ ಕೇಳುವೆ, ತಮಿಳುನಾಡು ವಿಚಾರ ನನಗೆ ಗೊತ್ತಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ತಮಿಳುನಾಡಿನ ಯಾವ ಶಾಸಕರೂ ಈಗಲ್ ಟನ್ ರೆಸಾರ್ಟ್ ಗೆ ಬಂದಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ಇದ್ದಿದ್ದರೆ ನಾನು ಹೇಳುತ್ತಿದ್ದೆ. ನವೀಕರಣ ಹಿನ್ನೆಲೆಯಲ್ಲಿ ಈಗಲ್ ಟನ್ ರೆಸಾರ್ಟ್ ಮುಚ್ಚಲಾಗಿದೆ. ಕೆಲವರು ಹೈದರಾಬಾದ್ ಗೆ ಹೋಗಿದ್ದಾರೆ ಎಂದರೆ ಮತ್ತೆ ಕೆಲವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಶಾಸಕರ ಆಗಮನವನ್ನು ತಳ್ಳಿ ಹಾಕಿದ್ದಾರೆ.
ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಏನಾದರೂ ನಿರ್ದೇಶನ ನೀಡಿದರೆ ನಾನು ಅದನ್ನು ಪಾಲಿಸುವೆ. ಆದರೆ ಈವರೆಗೆ ಹೈಕಮಾಂಡ್ ನಾಯಕರು ನನ್ನ ಜೊತೆ ಏನೂ ಮಾತನಾಡಿಲ್ಲ. ಪಕ್ಷದ ನಾಯಕರ ನಿರ್ದೇಶನದಂತೆ ನಾನು ತಮಿಳುನಾಡಿನಲ್ಲಿ ಪ್ರಣಾಳಿಕೆ ಬಿಡುಗಡೆ ಹಾಗೂ ಪ್ರಚಾರಕ್ಕೆ ಹೋಗಿದ್ದೆ. ಅದಾದ ನಂತರ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ತಮಿಳುನಾಡಿನ ಸದ್ಯದ ಸ್ಥಿತಿಗತಿಯ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ತಮಿಳುನಾಡು ರಾಜಕೀಯದಲ್ಲಿ ‘ರಿಸಾರ್ಟ್ ಪಾಲಿಟಿಕ್ಸ್’: ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್?
ಯಡಿಯೂರಪ್ಪ ಅವರಿಗೆ ಆರೋಗ್ಯ, ಆಯಸ್ಸು ಹೆಚ್ಚಾಗಲಿ..
ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ರಾಜ್ಯದ ಸೇವೆ ಮಾಡಿದ್ದಾರೆ. ಅವರ ಜನ್ಮದಿನವಿದ್ದರೆ ಅವರಿಗೆ ಒಳ್ಳೆಯದಾಗಲಿ. ಅವರ ಪಕ್ಷದವರು ಪಕ್ಷ ಸಂಘಟನೆ ಹಾಗೂ ಅವರಿಗೆ ಗೌರವ ನೀಡುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಅವರಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಆಶಿಸುತ್ತೇನೆ. ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ನೀಡಲಿ. ರಾಜಕೀಯವಾಗಿ ಅವರ ವಿಚಾರಧಾರೆ ಬೇರೆ, ನಮ್ಮ ವಿಚಾರಧಾರೆ ಬೇರೆ ಎಂದು ಡಿಕೆ ಶಿವಕುಮಾರ್ ಶುಭಹಾರೈಸಿದ್ದಾರೆ.
ನಾನು ಬಹಳ ದಿನಗಳಿಂದ ದೇವಾಲಯಕ್ಕೆ ಹೋಗಿರಲಿಲ್ಲ. ಹೀಗಾಗಿ ಪುದುಚೇರಿ ಶನೇಶ್ವರ ದೇವಾಲಯಕ್ಕೆ ಹೋಗುತ್ತಿದ್ದೇನೆ. ನಮ್ಮ ಎಲ್ಲಾ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅದು ಎಲ್ಲಾ ಪಕ್ಷಗಳಲ್ಲೂ ನಡೆಯುವ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.
ಅಶೋಕ್ ಹೇಳಿರುವ ಎಲ್ಲಾ ಕೆಲಸಗಳನ್ನು ಮಾಡ್ತಿದ್ದೀವಿ..
ನಗರದಲ್ಲಿ ಮರಗಳ ತೆರವಿಗೆ ಸಮಯವಿಲ್ಲ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕೆಗೆ ಪ್ರತಿಕ್ರಿಯಿಸಿ, ಬಿದ್ದಿರುವ ಎಲ್ಲಾ ಮರಗಳ ತೆರವು ಮಾಡಲಾಗುತ್ತಿದೆ. ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ಎಲ್ಲೆಡೆ ಈ ಕಾರ್ಯ ಮಾಡಲಾಗುತ್ತಿದೆ. ದುರ್ಬಲವಾಗಿರುವ ಮರಗಳ ತೆರವಿಗೂ ಸೂಚಿಸಲಾಗಿದೆ. 480 ಮರಗಳ ಪಟ್ಟಿ ನೀಡಿದ್ದು, ಅವುಗಳ ರೆಂಬೆ ಕತ್ತರಿಸಲು ಅನುಮತಿ ನೀಡಲಾಗಿದೆ. ಅಶೋಕ್ ಅವರು ಹೇಳಿರುವ ಎಲ್ಲಾ ಕೆಲಸ ಮಾಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ನನಗಾಗಿ ಐಪಿಎಲ್ ಟಿಕೆಟ್ ಕೇಳಿಲ್ಲ..
“ಆರ್. ಅಶೋಕ್ ಶಾಸಕರಾದ ಕಾಶಪ್ಪನವರು ಐಪಿಎಲ್ ಟಿಕೆಟ್ ಕೇಳಿದ್ದರು. ಈಗ ಅದನ್ನು ನನ್ನ ಮೇಲೆಯೇ ಹಾಕಿಕೊಂಡಿದ್ದೇನೆ. ಗುಜರಾತಿನವರಿಗೆ ಟಿಕೆಟ್ ಗಳು ಹೆಚ್ಚಾಗಿ ಬೇಕಾಗಿತ್ತು, ವ್ಯಾಪಾರ ಜಾಸ್ತಿ ಆಗಬೇಕಿತ್ತು. ಅದಕ್ಕೆ ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ನಾವು ಕೇಳಿದ್ದ 300 ಟಿಕೆಟ್ ದೊಡ್ಡದಾಯ್ತಾ? ಬೇರೆ ರಾಜ್ಯಗಳಲ್ಲಿ 60% ಟಿಕೆಟ್ ಅನ್ನು ರಾಜ್ಯ ಸರ್ಕಾರಗಳಿಗೆ ಕೊಡುತ್ತಿದ್ದಾರೆ. ನಾನು ಕರ್ನಾಟಕದ ಪ್ರತಿನಿಧಿಯಾಗಿ ಶಾಸಕರು ಏನು ಹೇಳುತ್ತಾರೋ ಅದನ್ನು ಮಾಡಿದ್ದೇನೆ. ಎಲ್ಲಾ ಪಕ್ಷದವರು ಸೇರಿ ಬೇಡಿಕೆ ಇಟ್ಟರಲ್ಲವೇ? ದಳದವರಿಗೆ ಬೇಡವಾದರೆ ತಮ್ಮ ಪಕ್ಷದ ಶಾಸಕರಿಗೆ ಟಿಕೆಟ್ ಬೇಡ ಎಂದು ವಾಪಸ್ ನೀಡಲಿ. ನಾನು ನನಗಾಗಿ ಟಿಕೆಟ್ ಕೇಳಿದ್ದೀನಾ? ನಮ್ಮ ಜನಪ್ರತಿನಿಧಿಗಳು ಮನವಿ ಮಾಡಿದ್ದಕ್ಕೆ ಕೇಳಿದೆ. ಈ ಹಿಂದೆ ಶಾಸಕರಿಗೆ 2 ಟಿಕೆಟ್ ನೀಡುತ್ತಿದ್ದರು. ಈಗ ಮೂರು ಟಿಕೆಟ್ ನೀಡೋಕೆ ಹೇಳಿರುವೆ ಎಂದು ಡಿಕೆ ಶಿವಕುಮಾರ್ ಟೀಕೆಗಳಿಗೆ ಕೌಂಟರ್ ನೀಡಿದ್ದಾರೆ.






