
ತಮಿಳುನಾಡಿನ ಕೊಯಮತ್ತೂರಲ್ಲಿ ಬುಧವಾರ ರಾತ್ರಿ ಶಿವರಾತ್ರಿ ಸಂಭ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಂದೇಶ ರವಾನೆ..? ಮಾಡಿದ್ರಾ ಅನ್ನೋ ಚರ್ಚೆ ಶುರುವಾಗಿದೆ. ಒಂದೇ ವೇದಿಕೆಯಲ್ಲಿ ಶಿವಕುಮಾರ್ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ರು ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಅಮಿತ್ ಷಾ ಜೊತೆಗೆ ವೇದಿಕೆ ಹಂಚಿಕೊಂಡ ಡಿ.ಕೆ ಶಿವಕುಮಾರ್ ನಡೆಯನ್ನು AICC ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್ ಬಹಿರಂಗವಾಗಿ ಟೀಕಿಸಿದ್ದಾರೆ. ಅಮಿತ್ ಷಾ ಜೊತೆಗೆ ವೇದಿಕೆ ಏರಿದ್ದು ಸರಿಯಲ್ಲ, ಜಾತ್ಯತೀತ ಪಕ್ಷದ ಅಧ್ಯಕ್ಷರಾಗಿ ಇದ್ದುಕೊಂಡು ಡಿ.ಕೆ ಶಿವಕುಮಾರ್ ಮಾಡಿದ್ದು ತಪ್ಪು ಎಂದಿದ್ದಾರೆ. ಇನ್ನು ಸದ್ಗುರು ಜಗ್ಗಿ ವಾಸುದೇವ್ ವಿಚಾರಗಳು RSS ಸಿದ್ಧಾಂತಕ್ಕೆ ಹತ್ತಿರವಾಗಿದ್ದು, ಇತ್ತೀಚಿಗೆ ರಾಹುಲ್ ಗಾಂಧಿ ಅವರನ್ನೇ ಜಗ್ಗಿವಾಸುದೇವ್ ಗೇಲಿ ಮಾಡಿದ್ದರು. ಅವರ ಆಮಂತ್ರಣ ಒಪ್ಪಿ ಕಾರ್ಯಕ್ರಮಕ್ಕೆ ಹೋಗಿದ್ರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.

ಅಮಿತ್ ಷಾ ಜೊತೆ ಡಿ.ಕೆ ಶಿವಕುಮಾರ್ ವೇದಿಕೆ ಹಂಚಿಕೆ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯಲಿದೆ. ಇದೆಲ್ಲವೂ ಕ್ಷಿಪ್ರ ರಾಜಕೀಯಯ ಬೆಳವಣಿಗೆ ಮುನ್ಸೂಚನೆ ಎನ್ನುವ ಮೂಲಕ ವಿಜಯೇಂದ್ರ ಸ್ಫೋಟಕ ತಿರುವು ನೀಡಿದ್ದಾರೆ. ಇಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರಕ್ಕೆ ಡಿ.ಕೆ. ಶಿವಕುಮಾರ್ ಅವರೇ ಉತ್ತರ ಕೊಡಬೇಕು. ಆದರೆ ಕಾಂಗ್ರೆಸ್‌ನಲ್ಲಿ ಒಳಜಗಳ ಜಾಸ್ತಿ ಆಗ್ತಿದೆ ಎಂದಿದ್ದಾರೆ. ಆದರೆ ಅಮಿತ್ ಷಾ ಜೊತೆಗೆ ವೇದಿಕೆ ಹಂಚಿಕೊಂಡ ಡಿಸಿಎಂ ಡಿಕೆಶಿ ವಿಚಾರದಲ್ಲಿ ನಾನು ಚರ್ಚೆ ಮಾಡೋಕೆ ಹೋಗಲ್ಲ ಎಂದಿದ್ದಾರೆ ಬಿ.ಎಸ್ ಯಡಿಯೂರಪ್ಪ.

ಪಕ್ಷದ ಒಳಜಗಳ ಬಿಟ್ಟು ಒಟ್ಟುಗೂಡಿಸುವ ವಿಚಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಅದೆಲ್ಲಾ ಹಿರಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ . ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಾಮಾನ್ಯವಾಗಿ ಅವ್ರು ನಮ್ಮ ಮನೆಗೆ ಬರ್ತಿರ್ತಾರೆ. ಈ ಭೇಟಿ ಏನು ಹೊಸದೇನಲ್ಲ. ಎಲ್ಲರು ಬರ್ತಾರೆ ಅದೇ ರೀತಿ ಸುರೇಶ್ ಬಂದಿದ್ದಾರೆ. ಅವರು ಪದೇ ಪದೇ ಬರ್ತಿರ್ತಾರೆ. ಈ ಬಾರಿ ಕೂಡಾ ಸಾಮಾನ್ಯವಾಗಿ ಭೇಟಿ ನೀಡಿದ್ದಾರೆ ಎಂದಿದ್ದಾರೆ.

ಪಕ್ಷದ ಒಳಜಗಳ, ಒಟ್ಟುಗೂಡಿಸುವ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿ, ನಾವು ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಕೆಲಸ ಕೊಟ್ಟಾಗ ಒಟ್ಟಾಗಿಯೇ ಮಾಡ್ತೇವೆ ಎಂದು ತೇಪೆ ಸಾರಿಸುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಮಿಂಚಿನ ಸಂಚಾರ ಆಗ್ತಿದೆ ಅನ್ನೋದು ಮಾತ್ರ ರಾಜಕಾರಣ ಬಲ್ಲವರಿಗೆ ಗೊತ್ತಾಗುತ್ತಿದೆ. ಆದರೆ ಏನು ಆ ಮಿಂಚಿನ ಸಂಚಾರ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗ ಆಗಬೇಕಿದೆ.