ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? – ಡಿ.ಕೆ. ಶಿವಕುಮಾರ್

‘ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ಚಾಮರಾಜನಗರದಲ್ಲಿ 24 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ ವರದಿ ಕೊಟ್ಟಿದೆ. ಇದಕ್ಕೆ ಸರ್ಕಾರದ ಯಾರು ಹೊಣೆಗಾರರು ಎಂದು ನೀವೇ ತೀರ್ಮಾನಿಸಿ. ಈ ಸಾವುಗಳಿಗೆ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿಗಳು ಬೌರಿಂಗ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಈಗ ಸುಮ್ಮನಾಗಿದ್ದಾರೆ. ಕೇಂದ್ರದಿಂದ ಎಷ್ಟು ಪ್ರಮಾಣದಲ್ಲಿ ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲವೇ? ಲಸಿಕೆ ವಿತರಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಯಾಕೆ ಸುಮ್ಮನಿದೆಯೋ ಗೊತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರನ್ನು ದೇವರೇ ಕಾಪಾಡಬೇಕು. ಇವರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? ಜನರಿಗೆ ನೆರವಾಗಿದ್ದಾರಾ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ‌.

ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದರು. 18-44 ರ ವಯೋಮಾನದವರಿಗೆ ಲಸಿಕೆ ಅಂತಾ ಮೇ 1ರಂದು ಉದ್ಘಾಟನೆಯನ್ನೂ ಮಾಡಿದರು. ಇವತ್ತು ಲಸಿಕೆ ಕೊಡಲು ಆಗಲ್ಲ ಅಂತಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಬಹಳ ಚೆನ್ನಾಗಿ ಆಡಳಿತ ಮಾಡಲಿವೆ ಎಂದಿದ್ದರು. ಆದರೆ ಈ ಡಬಲ್ ಇಂಜಿನ್ ಗಳು ನಿಂತು ಹೋಗಿವೆ. ಆಕ್ಸಿಜನ್ ಪೂರೈಸುವಂತೆ ಆದೇಶಿಸಿ ಹೈಕೋರ್ಟ್ ರಾಜ್ಯದ ಜನರಿಗೆ ನ್ಯಾಯ ಒದಗಿಸಿತ್ತು. ಆದರೆ ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿದೆ ಎಂದು ಇವರು ಶಹಬ್ಬಾಶ್ ಗಿರಿ ತೆಗೆದುಕೊಳ್ಳುತ್ತಿದ್ದಾರೆ. ಅವರು ಯಾರಿಗಾದರೂ ಶಹಬ್ಬಾಶ್ ಗಿರಿ ಕೊಡಲಿ, ಒಟ್ಟಾರೆ ಜನರ ಪ್ರಾಣ ಉಳಿಸಿದರೆ ಸಾಕು ಎಂದು ಹೇಳಿದ್ದಾರೆ.

45 ವರ್ಷ ಮೇಲ್ಪಟ್ಟವರಲ್ಲಿ ಅನೇಕರಿಗೆ ಇನ್ನು ಮೊದಲ ಲಸಿಕೆ ಕೊಟ್ಟಿಲ್ಲ. ಎರಡನೇ ಡೋಸ್ ಕೂಡ ಕೊಡಬೇಕು. ಈ ವಿಚಾರದಲ್ಲಿ ಸರ್ಕಾರದ ಬಳಿ ಪರಿಣಾಮಕಾರಿ ಯೋಜನೆ, ಸಿದ್ಧತೆ ಇಲ್ಲ. ಇದನ್ನು ನಿಭಾಯಿಸಲು ಇವರಿಗೆ ಆಗುತ್ತಿಲ್ಲ. ಇನ್ನು ರೈತರ ಪರಿಸ್ಥಿತಿ ದೇವರಿಗೇ ಪ್ರೀತಿ. ರಸಗೊಬ್ಬರ ಬೆಲೆ ಕಡಿಮೆಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಲಾಕ್ ಡೌನ್ ಸಂತ್ರಸ್ತ ಪ್ರತಿ ಕುಟುಂಬಕ್ಕೆ 10 ಸಾವಿರ ರುಪಾಯಿ ನೆರವು ನೀಡಬೇಕು ಎಂಬುದು ನಮ್ಮ ಆಗ್ರಹ. ಗೊಬ್ಬರದ ಬೆಲೆ ಕಡಿಮೆ ಮಾಡಬೇಕು. ತರಕಾರಿ, ಹೂ ಬೆಳೆದು, ನಷ್ಟ ಆದವರಿಗೆ ಪರಿಹಾರ ಕೊಡಬೇಕು. ಸಾಂಪ್ರದಾಯಿಕ ವೃತ್ತಿ ಆಧರಿಸಿದವರಿಗೆ, ಜಿಮ್, ಸಿನಿಮಾ ತಂತ್ರಜ್ಞರಿಗೆ ನೆರವು ಸಿಗಬೇಕು. ನಿಮ್ಮಿಂದ ಇದನ್ನು ನಿಭಾಯಿಸಲು ಆಗುತ್ತಿಲ್ಲ. ಕೋವಿಡ್ ಪ್ರಕರಣದ ಸಂಖ್ಯೆ ಕಡಿಮೆ ಮಾಡಲು ಪರೀಕ್ಷೆ ನಡೆಸುವುದನ್ನೇ ಕಡಿಮೆ ಮಾಡಿದ್ದೀರಿ ಎಂದಿದ್ದಾರೆ.

ಸರ್ಕಾರ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಬಡ್ಡಿ ಮನ್ನಾ ಮಾಡಬೇಕು, ಸಾಲದ ಕಂತು ಕಟ್ಟಲು ಕಾಲಾವಕಾಶ ನೀಡಬೇಕು. ಕೇಂದ್ರ ಸರ್ಕಾರವೇ ಲಸಿಕೆ ನೀಡಬೇಕು ಎಂದು ಕೇಳಬೇಕು. ರಾಜ್ಯದ ಹಣವನ್ನೇಕೆ ಇದಕ್ಕೆ ಬಳಸಬೇಕು? ಕೇಂದ್ರ ಸರಕಾರವೇ ಜವಾಬ್ದಾರಿ ಹೊರುವುದು ಜಗತ್ತಿನಾದ್ಯಂತ ಇರುವ ನೀತಿ. ಆದರೆ ಇಲ್ಲಿ ಅದು ಉಲ್ಟಾ ಆಗಿದೆ. ಸೋಂಕು ಹೆಚ್ಚಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ‌. 

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...