ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಂಸದೆ ರಮ್ಯಾ ಚುನಾವಣಾ ಕಣಕ್ಕೆ ಇಳೀತಾರೆ ಅನ್ನೋ ಸುದ್ದಿ ಕಳೆದೊಂದು ವಾರದಿಂದ ಚರ್ಚೆ ಆಗುತ್ತಿದೆ. ಇದೆಲ್ಲವೂ ಸುಳ್ಳು ಅನ್ನೋದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ. ಆದರೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎನ್ನುವ ಮಾತನ್ನೂ ನಾವು ಸ್ಮರಿಸಬೇಕಾಗುತ್ತದೆ. ಹೀಗಾಗಿ ನಟಿ ರಮ್ಯಾರನ್ನು ಚನ್ನಪಟ್ಟಣದಿಂದ ಸ್ಪರ್ಧೆಗೆ ಇಳಿಸುವಂತೆ ಕಾಂಗ್ರೆಸ್ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚೆಯಾಗಿರುವುದು ಸರಿ ಎನ್ನುವ ಮಾಹಿತಿ ಪ್ರತಿಧ್ವನಿಗೆ ತಿಳಿದುಬಂದಿದೆ. ಈ ಪ್ರಸ್ತಾಪವನ್ನು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಡಿ.ಕೆ ಶಿವಕುಮಾರ್ ಎದುರು ಮಂಡಿಸಿದ್ದಾರೆ ಎನ್ನುವ ಅಂಶವೂ ಗೊತ್ತಾಗಿದೆ. ಇದಕ್ಕೆ ಕಾರಣ ಶರವೇಗದಲ್ಲಿ ನುಗ್ಗುತ್ತಿರುವ ಕುಮಾರಸ್ವಾಮಿಯನ್ನು ಕಟ್ಟಿ ಹಾಕುವುದು ಎನ್ನಲಾಗ್ತಿದೆ.
ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯ ವಕ್ರ ದೃಷ್ಟಿ..!
H.D ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದಾರೆ. ಹಳೇ ಮೈಸೂರು ಭಾಗ ಅಷ್ಟೆ ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲೂ ಕುಮಾರಸ್ವಾಮಿ ರಥಯಾತ್ರೆಗೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ. ಜನರು ಕುಮಾರಸ್ವಾಮಿ ಮಾತು ಕೇಳಲು ಮಧ್ಯರಾತ್ರಿ ತನಕ ಕಾದು ಕುಳಿತುಕೊಳ್ತಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಕಾಂಗ್ರೆಸ್ ಹಾಗು ಬಿಜೆಪಿ ಅಂದುಕೊಂಡಷ್ಟು ಸುಲಭವಾಗಿ ಜೆಡಿಎಸ್ ಪಕ್ಷ ಈ ಬಾರಿಯ ಚುನಾವಣೆ ಎದುರಿಸುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಬಿಜೆಪಿ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಮಂಡ್ಯದಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದರು. ಇನ್ನು ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ಕಟ್ಟಿಕೊಂಡಿದ್ದು, ಗೆಲ್ಲಿಸುವ ಹೊಣೆಯನ್ನು ಸ್ಥಳೀಯ ನಾಯಕರಿಗೆ ಕೊಟ್ಟು ರಾಜ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ವಿರುದ್ಧ ರಮ್ಯಾ ಅವರನ್ನು ಅಖಾಡಕ್ಕೆ ಇಳಿಸಿದ್ರೆ ಕುಮಾರಸ್ವಾಮಿ ಕ್ಷೇತ್ರದಲ್ಲೇ ಹೆಚ್ಚು ಕಾಲ ಕಳೆಯಬೇಕಾಗುತ್ತದೆ ಎನ್ನುವುದು ಸಿದ್ದರಾಮಯ್ಯ ಲೆಕ್ಕಾಚಾರ. ಆದರೆ ಡಿ.ಕೆ ಶಿವಕುಮಾರ್ ಮಾತ್ರ ನೋ ಅಂದಿದ್ದಾರೆ ಎನ್ನಲಾಗಿದೆ.
ರಮ್ಯಾಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನಿರಾಕರಿಸಿದ್ಯಾಕೆ..?
ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದಿಂದ ರಮ್ಯಾರನ್ನು ಅಖಾಡಕ್ಕೆ ಇಳಿಸಿ, ಕುಮಾರಸ್ವಾಮಿಯನ್ನು ಕಟ್ಟಿ ಹಾಕೋಣ ಎಂದು ಸಿದ್ದರಾಮಯ್ಯ ಕೊಟ್ಟ ಸಲಹೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಯವಾಗಿಯೇ ತಿರಸ್ಕಾರ ಮಾಡಿದ್ದು, ರಮ್ಯಾ ಸ್ಪರ್ಧೆ ಮಾಡುವ ಇಚ್ಛೆ ಇದ್ದರೆ ಮಂಡ್ಯದಿಂದಲೇ ಸ್ಪರ್ಧೆ ಮಾಡಲಿ, ರಾಮನಗರ ಜಿಲ್ಲೆಗೆ ರಮ್ಯಾ ಅವರ ಅವಶ್ಯಕತೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗ್ತಿದೆ. ರಾಮನಗರದಲ್ಲಿ ಡಿ.ಕೆ ಶಿವಕುಮಾರ್ ಹಾಗು ಕುಮಾರಸ್ವಾಮಿ ಕುಟುಂಬ ರಾಜಕೀಯವಾಗಿ ಶಕ್ತಿ ಹೊಂದಿದ್ದು, ಈ ಅಧಿಕಾರವನ್ನು ಮೂರನೇ ವ್ಯಕ್ತಿ ಜೊತೆಗೆ ಹಂಚಿಕೊಳ್ಳಲು ಯಾರು ತಾನೇ ಇಷ್ಟಪಡುವುದಿಲ್ಲ. ಅದೇ ರೀತಿ ಸಿದ್ದರಾಮಯ್ಯ ಮಾತನ್ನು ತಳ್ಳಿ ಹಾಕುವ ಮೂಲಕ ರಮ್ಯಾ ಚನ್ನಪಟ್ಟಣಕ್ಕೆ ಬರುವುದನ್ನು ಡಿ.ಕೆ ಶಿವಕುಮಾರ್ ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಆದರೂ ಸಿದ್ದರಾಮಯ್ಯ ಮಾತ್ರ ತಮ್ಮ ಪ್ರಯತ್ನ ಮುಂದುವರಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ ಎನ್ನಲಾಗ್ತಿದೆ.
ನಟಿ ರಮ್ಯಾ ಸ್ಪರ್ಧೆ ಮಾಡುವುದಕ್ಕೆ HDK ಹೇಳಿದ್ದೇನು..?
ನಾನು ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷದವರಿಗೆ ಟಾರ್ಗೆಟ್ ಆಗಿದ್ದೇನೆ ಎನ್ನುವುದು ಗೊತ್ತಿರುವ ಸಂಗತಿ. ಪಂಚರತ್ನ ಯಾತ್ರೆಯ ವೇಗ ನೋಡಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ನನ್ನನ್ನು ಹೇಗೆ ಕಟ್ಟಿ ಹಾಕಬೇಕು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಶಾಸಕರ ಸಂಖ್ಯೆಯನ್ನು ಹೇಗೆ ಕಡಿಮೆ ಮಾಡಬೇಕು ಅಂತ ರಾಷ್ಟ್ರೀಯ ಪಕ್ಷಗಳ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಈ ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಿಗೆ ಭ್ರಮ ನಿರಸ ಆಗಿದೆ. ಚನ್ನಪಟ್ಟಣದಲ್ಲಿ ನಮ್ಮ ಮೇಲೆ ರಾಜಕೀಯ ಬ್ರಹ್ಮಾಸ್ರ್ರ ಬಿಟ್ಟರೂ ಜನತಾ ದಳ ತೆಗೆಯೋಕೆ ಆಗಲ್ಲ. ನಟಿ ರಮ್ಯಾ ಅಥವಾ ನಟ ಸುದೀಪ್ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗ್ತಿದೆ. ಆದರೆ ರಮ್ಯಾ ನನ್ನ ಸಹೋದರಿ ಸಮಾನ, ನನ್ನ ವಿರುದ್ದ ನಿಲ್ಲಬೇಕು ಅಂತ ಇದ್ದರೆ ನಿಲ್ಲಬಹುದು. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ನಿಲ್ಲಬೆಡಿ ಅಂತ ಹೇಳೋಕೆ ಆಗಲ್ಲ. ಅಂತಿಮವಾಗಿ ಜನ ತೀರ್ಮಾನ ತೆಗೆದುಕೊಳ್ತಾರೆ ಎಂದು ಬೆಣ್ಣೆ ಮೇಲಿನ ಕೂದಲು ತೆಗೆದಂತೆ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ತಿರುವು ಹೇಗಿರಲಿದೆ ಅನ್ನೋದನ್ನು ಕಾದು ನೋಡ್ಬೇಕು.