ಕೋಮು ಗಲಭೆ ಪೀಡಿತ ಹರಿಯಾಣ ನೂಹ್ ಪ್ರದೇಶದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಗಸ್ಟ್ 28ರಂದು ನಡೆಸಲು ಉದ್ದೇಶಿಸಿದ್ದ ‘ಬ್ರಿಜ್ ಮಂಡಲ್ ಜಲಾಭಿಷೇಕ’ ಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಬುಧವಾರ (ಆಗಸ್ಟ್ 23) ವರದಿಯಾಗಿದೆ.
ಯಾತ್ರೆಗೆ ಅನುಮತಿ ಕೋರಿ ಆಯೋಜಕರು ಸಲ್ಲಿಸಿದ್ದ ಮನವಿಯನ್ನು ನೂಹ್ ಜಿಲ್ಲಾಡಳಿತ ಮಂಗಳವಾರ ಸಂಜೆ ತಿರಸ್ಕರಿಸಿದೆ.
ಪಲ್ವಾಲ್ನ ಪೊಂಡ್ರಿ ಗ್ರಾಮದಲ್ಲಿ ಆಗಸ್ಟ್ 13ರಂದು ‘ಮಹಾಪಂಚಾಯತ್’ ಆಯೋಜಿಸಿದ್ದ ಸಂಘಟನೆ, ನೂಹ್ ಜಿಲ್ಲೆಯ ನಲ್ದಾರ್ ದೇವಾಲಯದಲ್ಲಿ ಯಾತ್ರೆ ನಡೆಸುವ ಯೋಜನೆಯಲ್ಲಿತ್ತು.
ಯಾತ್ರೆಗೆ ಅನುಮತಿ ಕೋರಿ ವಿಎಚ್‌ಪಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹರಿಯಾಣ ನೂಹ್ ಎಸ್‌ಪಿ ನರೇಂದರ್ ಖಚಿತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ವಿಎಚ್ಪಿ ನಾಯಕ ದೇವೇಂದರ್ ಸಿಂಗ್, ಅನುಮತಿ ನಿರಾಕರಣೆ ವಿಚಾರ ತಿಳಿದಿಲ್ಲ. ಹಾಗೆಯೇ, ಯಾತ್ರೆ ನಡೆಸಲು ಯಾವ ಅನುಮತಿಯೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಯಾತ್ರೆಯನ್ನು ನೂಹ್ನಲ್ಲಿರುವ ನಲ್ವಾರ್ ದೇವಾಲಯದಿಂದ ಅರಂಭಿಸಿ ಫಿರೋಜ್ಪುರ ಝಿರ್ಕಾ ಪಟ್ಟಣದ ಝಿರ್ ಮತ್ತು ಶೃಂಗಾರ್ ದೇವಾಲಯದ ಮೂಲಕ ನಡೆಸಲು ‘ಮಹಾಪಂಚಾಯತ್’ನಲ್ಲಿ ತೀರ್ಮಾನಿಸಲಾಗಿತ್ತು.
ವಿಎಚ್‌ಪಿ, ಜುಲೈ 31ರಂದು ಹರಿಯಾಣ ನೂಹ್ನಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪೊಂದು ದಾಳಿ ನಡೆಸಿದ್ದರಿಂದ ಕೋಮು ಸಂಘರ್ಷ ಉಂಟಾಗಿತ್ತು. ಅದು ಗುರುಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಕ್ಕೂ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಗೃಹ ರಕ್ಷಕ ಪಡೆಯ ಇಬ್ಬರು, ಒಬ್ಬ ಮುಸ್ಲಿಂ ಧರ್ಮಗುರು ಸೇರಿದಂತೆ ಒಟ್ಟು ಆರು ಮಂದಿ ಹತ್ಯೆಯಾಗಿದ್ದರು

