• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಆದಿವಾಸಿಗಳ ಮೇಲೆ ದೌರ್ಜನ್ಯ ಇಂದಿಗೂ ನಡೆಯುತ್ತಿದೆ – ನ್ಯಾ. ಚಂದ್ರು

ನಾ ದಿವಾಕರ by ನಾ ದಿವಾಕರ
November 15, 2021
in ಅಭಿಮತ
0
ಆದಿವಾಸಿಗಳ ಮೇಲೆ ದೌರ್ಜನ್ಯ ಇಂದಿಗೂ ನಡೆಯುತ್ತಿದೆ – ನ್ಯಾ. ಚಂದ್ರು
Share on WhatsAppShare on FacebookShare on Telegram

ಜೈ ಭೀಮ್ ಚಿತ್ರ ವಕೀಲರ ಘನತೆಯನ್ನು ಹೆಚ್ಚಿಸಿದೆ

ADVERTISEMENT

ಮೂಲ : ಆನ್ ಮನೋರಮಾ ವೆಬ್ ಪತ್ರಿಕೆ

ಅನುವಾದ : ನಾ ದಿವಾಕರ

ತಮಿಳು ಸಿನಿಮಾಗಳಲ್ಲಿ ನಾಯಕನಾದವನು ಕಾನೂನನ್ನು ಕೈಗೆತ್ತಿಕೊಂಡು ದುಷ್ಟ ಸಂಹಾರ ಮಾಡುವುದು ಸಾಮಾನ್ಯ. ಆದರೆ ಸೂರ್ಯ ನಾಯಕನಾಗಿ ನಟಿಸಿರುವ ಜೈ ಭೀಮ್ ಚಿತ್ರ ಭಿನ್ನ ಜಾಡು ಅನುಸರಿಸಿದ್ದು, ಈ ಚಿತ್ರದಲ್ಲಿ ಹೀರೋ ಭಾರತದ ಸಂವಿಧಾನವನ್ನು ಎತ್ತಿಹಿಡಿಯುತ್ತಾನೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು ಅವರ ನೈಜ ಜೀವನಾನುಭವವನ್ನು ಆಧರಿಸಿ ನಿರ್ಮಿಸಲಾಗಿರುವ ಜೈ ಭೀಮ್ ಈಗಾಗಲೇ ಜನಸಾಮಾನ್ಯರ ನಡುವೆ ಮನೆಮಾತಾಗಿದೆ.  ತಮ್ಮ ವೃತ್ತಿಜೀವನದ ಆರಂಭದ ಘಟ್ಟದಲ್ಲಿ ನ್ಯಾ ಚಂದ್ರು ವಕೀಲರಾಗಿ ನಿರ್ವಹಿಸಿದ ನೈಜ ಘಟನೆಯೇ ಕಥಾಹಂದರವಾಗಿರುವ ಜೈ ಭೀಮ್ ಜಾತಿ ಪದ್ಧತಿಯ ಕರಾಳ ಮುಖವನ್ನು ಪರಿಚಯಿಸುವುದಷ್ಟೇ ಅಲ್ಲದೆ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಅನ್ಯಾಯಗಳನ್ನೂ ಎತ್ತಿ ತೋರಿಸಿದೆ.

2013ರಲ್ಲಿ ನ್ಯಾಯಾಂಗ ಸೇವೆಯಿಂದ ನಿವೃತ್ತರಾದ ನಂತರ ನ್ಯಾ ಚಂದ್ರು ಸಾಮಾಜಿಕ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದಾರೆ. ಕಾಲೇಜುಗಳಲ್ಲಿ ಉಪನ್ಯಾಸ ನೀಡುವುದು, ಪಠ್ಯಪುಸ್ತಕಗಳನ್ನು ರಚಿಸುವುದು, ಕಾನೂನು ಕ್ಷೇತ್ರದಲ್ಲಿ ತಮ್ಮ ಅಪಾರ ಅನುಭವವನ್ನು ಸಾಹಿತ್ಯ ಮುಖೇನ ವಿದ್ಯಾರ್ಥಿಗಳೊಡನೆ ಹಂಚಿಕೊಳ್ಳುವುದು ನ್ಯಾ ಚಂದ್ರು ಅವರ ಮುಖ್ಯ ಚಟುವಟಿಕೆಯಾಗಿದೆ.

ಜೈ ಭೀಮ್ ಚಿತ್ರ ಸಮಾಜದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ ಎಂದು ಹೇಳುವ ನ್ಯಾ. ಚಂದ್ರು “ಈ ಸಿನಿಮಾ ನೋಡಿದ ನಂತರ ಮುಖ್ಯಮಂತ್ರಿ ಸ್ಟಾಲಿನ್ ಆದಿವಾಸಿ ಸಮುದಾಯಗಳಿಗೆ ನೆರವು ನೀಡಲಾರಂಭಿಸಿದ್ದು, ಆಡಳಿತಾತ್ಮಕ ಪ್ರಕ್ರಿಯೆಯನ್ನೂ ಲೆಕ್ಕಿಸದೆ ನೇರವಾಗಿ ನೆರವು ಒದಗಿಸಲಾರಂಭಿಸಿದ್ದಾರೆ.  ಪೊಲೀಸರಿಂದಲೇ ಚಿತ್ರಹಿಂಸೆಗೊಳಗಾಗುತ್ತಿದ್ದ ಮಹಿಳೆಯೊಬ್ಬರಿಗೆ ತಮಿಳುನಾಡು ಪೊಲೀಸ್ ಸಿಬ್ಬಂದಿಯು ನೆರವು ನೀಡಲು ಮುಂದಾಗಿದೆ.  ಈ ಚಿತ್ರವು ವಕೀಲ ವೃತ್ತಿಯ ಘನತೆಯನ್ನು ಮರಳಿ ತಂದಿದೆ. ಈ ಮುನ್ನ ವೈದ್ಯರಾಗಲು, ಇಂಜಿನಿಯರ್ ಆಗಲು ಬಯಸುತ್ತಿದ್ದ ಯುವ ಜನತೆ ಈಗ ಕಾನೂನು ವ್ಯಾಸಂಗ ಮಾಡಲು ಮುಂದಾಗುತ್ತಿದ್ದಾರೆ. ತಮಿಳುನಾಡಿನ ಐವರು ನಿವೃತ್ತ ಡಿಜಿಪಿಗಳು ತಮ್ಮ ಖಾಸಗಿ ಮಾತುಗಳ ಸಂದರ್ಭದಲ್ಲಿ, ಈ ಚಿತ್ರದಲ್ಲಿ ಬಿಂಬಿಸಿರುವುದು ವಾಸ್ತವ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.  ಕೇರಳದ ಇಬ್ಬರು ಸಚಿವರು ನನಗೆ ಖುದ್ದು ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ” ಎಂದು ಹೆಮ್ಮೆಯಿಂದ ನೆನೆಯುತ್ತಾರೆ.

ನಿಜ ಜೀವನದ ಪಾತ್ರಧಾರಿ ನ್ಯಾ ಚಂದ್ರು ಪಾತ್ರವನ್ನು ಚಿತ್ರದಲ್ಲಿ ಸೂರ್ಯ ನಿರ್ವಹಿಸಿದ್ದಾರೆ.  ಸಮಾಜದಲ್ಲಿ ಅಂತರ್ಗತವಾಗಿರುವ ಆಘಾತಕಾರಿ ಎನ್ನಬಹುದಾದ ವಾಸ್ತವಗಳನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದ್ದು, ಈ ಚಿತ್ರವನ್ನು ಕುರಿತಂತೆ ನ್ಯಾ. ಚಂದ್ರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

• ಆದಿವಾಸಿಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದುದನ್ನು ವಿರೋಧಿಸಿ ನೀವು ನಡೆಸಿದ ನಂತರ ಸಾರ್ವಜನಿಕವಾಗಿ ಚರ್ಚೆಗೊಳಗಾಗಿದ್ದು, ಈ ಸಂದರ್ಭದಲ್ಲಿ ನ್ಯಾಯಾಂಗ ಅಥವಾ ಸರ್ಕಾರ ಮಧ್ಯ ಪ್ರವೇಶಿಸಿತ್ತೇ ?

ಚಂದ್ರು : ತಮಿಳುನಾಡಿನಲ್ಲಿ ಒಟ್ಟು 8 ಲಕ್ಷ ಆದಿವಾಸಿಗಳಿದ್ದಾರೆ. ಇದು ರಾಜ್ಯ ಜನಸಂಖ್ಯೆಯ ಶೇ 1ರಷ್ಟಾಗುತ್ತದೆ 2021-22ರ ಹಣಕಾಸು ವರ್ಷದಲ್ಲಿ ಸರ್ಕಾರವು ಆದಿವಾಸಿ ಸಮುದಾಯಗಳ ಅಭಿವೃದ್ಧಿಗಾಗಿಯೇ 1306 ಕೋಟಿ ರೂಗಳನ್ನು ಮೀಸಲಾಗಿಟ್ಟಿದೆ. ಈ ಎಲ್ಲ ಹಣವೂ ಆದಿವಾಸಿಗಳಿಗೆ ತಲುಪುತ್ತದೆ ಎನ್ನುವುದು ಅನುಮಾನ. ಆದಿವಾಸಿಗಳು ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಾರೆ.  ವಸತಿ, ಉದ್ಯೋಗ, ಜಾತಿ ಪ್ರಮಾಣಪತ್ರ, ಉಚಿತ ಪಡಿತರ, ಮತದಾನದ ಹಕ್ಕು ಮತ್ತು ಪೊಲೀಸರ ದೌರ್ಜನ್ಯ ಇವು ಪ್ರಮುಖ ಸಮಸ್ಯೆಗಳು. ಆದಿವಾಸಿ ಜನಸಮುದಾಯಗಳನ್ನು ರಕ್ಷಿಸುವಂತಹ ಮತ್ತು ಅವರ ಜೀವನವನ್ನು ಉಜ್ವಲಗೊಳಿಸುವಂತಹ ಯಾವುದೇ ಆಡಳಿತ ನೀತಿಯನ್ನು ಈವರೆಗೂ ರೂಪಿಸಲಾಗಿಲ್ಲ. ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನ್ಯಾಯಾಂಗವೂ ಮೂಕ ಪ್ರೇಕ್ಷಕನಂತಾಗಿರುವುದು ದುರಾದೃಷ್ಟಕರ.  ಮೇಲ್ಜಾತಿಯ ಅನೇಕರು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಬಳಸುವ ಮೂಲಕ ಆದಿವಾಸಿಗಳಿಗೆ ಮೀಸಲಾಗಿಟ್ಟ ಉದ್ಯೋಗಾವಕಾಶಗಳನ್ನು ಕಬಳಿಸುವುದು ಅವ್ಯಾಹತವಾಗಿ ನಡೆಯುತ್ತಿದೆ.  ಈಗಲೂ ಸಹ ಈ ನಕಲಿ  ಪ್ರಮಾಣ ಪತ್ರಗಳನ್ನು ಪೂರೈಸುವುದನ್ನು ನಿಯಂತ್ರಿಸಲು ಮತ್ತು ಈ ರೀತಿ ನಕಲಿ ಪ್ರಮಾಣ ಪತ್ರ ಸಲ್ಲಿಸಿ ನೌಕರಿ ಗಳಿಸಿರುವವರನ್ನು ಉಚ್ಚಾಟಿಸುವ ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿಲ್ಲ.

• ಜೈ ಭೀಮ್ ಚಿತ್ರದಲ್ಲಿ ಸೂರ್ಯ ನಿರ್ವಹಿಸಿರುವ ನೈಜ ಘಟನೆ ಹಲವು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಾನಮಾನಗಳು ಈಗ ಹೇಗಿದೆ ? ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೌರ್ಜನ್ಯಗಳ ಪ್ರಮಾಣದಲ್ಲಿ ಏನಾದರೂ ಇಳಿಕೆ ಕಂಡಿದ್ದೀರಾ ?

ಚಂದ್ರು : ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳಿಂದ ದೌರ್ಜನ್ಯಗಳಿಗೆ ಕೊನೆಯೇ ಇಲ್ಲ. ಈ ಚಿತ್ರದಲ್ಲಿ ಬಿಂಬಿಸಿರುವ ಘಟನೆ ನಡೆದದ್ದು 1990ರಲ್ಲಿ. ಕಳೆದ ಮೂವತ್ತು ವರ್ಷಗಳಲ್ಲಿ ಇಂತಹ ದೌರ್ಜನ್ಯಗಳ ಪ್ರಮಾಣ ದುಪ್ಪಟ್ಟಾಗಿದೆ. ಇಟ್ಟಿಗೆ ಕಾರ್ಖಾನೆಗಳಲ್ಲಿ ಆದಿವಾಸಿಗಳನ್ನು ಗುಲಾಮರಂತೆ ದುಡಿಸಿಕೊಳ್ಳಲಾಗುತ್ತದೆ.  ಅರಣ್ಯಗಳಲ್ಲಿ ವಾಸಿಸುವ ಆದಿವಾಸಿಗಳು ಅರಣ್ಯ ಇಲಾಖೆಯ ಔದಾರ್ಯವನ್ನು ನಂಬಿ ಬದುಕುತ್ತಿದ್ದಾರೆ. ತಮ್ಮದೇ ಆದ ಸುಭದ್ರ ನೆಲೆಯನ್ನು ಹೊಂದಿಲ್ಲ. ನೂತನ ಅರಣ್ಯ ಕಾಯ್ದೆಗಳು ಅವರನ್ನು ವಸತಿಹೀನರನ್ನಾಗಿ ಮಾಡುತ್ತವೆ. ನೂತನ ಅರಣ್ಯ ಕಾಯ್ದೆಯ ನಿಯಮಗಳನ್ನು ಒಮ್ಮೆ ಜಾರಿಗೊಳಿಸಿದರೆ, ಸಣ್ಣ ಪ್ರಮಾಣದ ವ್ಯವಸಾಯ ಮಾಡುವ ಮೂಲಕ ಬದುಕು ಸವೆಸುತ್ತಿದ್ದ ಆದಿವಾಸಿಗಳು ಆ ಅವಕಾಶವನ್ನೂ ಕಳೆದುಕೊಳ್ಳುತ್ತಾರೆ.

• ಈ ಚಿತ್ರದಲ್ಲಿನ ಕಥಾಹಂದರವನ್ನು ಹೋಲುವ ಘಟನೆ ನಡೆದಾಗ ನಿಜ ಜೀವನದಲ್ಲಿ ನೀವು ವಕೀಲರಾಗಿದ್ದಿರಿ. ನೀವು ನ್ಯಾಯಾಧೀಶರಾದ ನಂತರ ಇಂತಹ ಮೊಕದ್ದಮೆಗಳನ್ನು ನೀವು ವಿಚಾರಣೆ ನಡೆಸಿದ್ದೀರಾ ?

ಚಂದ್ರು : ವಕೀಲನಾಗಿ ನಾನು ಇಂತಹುದೇ 20 ಮೊಕದ್ದಮೆಗಳನ್ನು ನಡೆಸಿದ್ದೇನೆ.  ನ್ಯಾಯಾಧೀಶನಾದ ನಂತರ ಇದರ ಎರಡರಷ್ಟು ಮೊಕದ್ದಮೆಗಳನ್ನು ವಿಚಾರಣೆಗೊಳಪಡಿಸಿದ್ದೇನೆ.  ಸಮವಸ್ತ್ರದಲ್ಲಿರುವ ಪೊಲೀಸರಿಂದ ಆದಿವಾಸಿಗಳ ಹತ್ಯೆಯಾಗುವುದು ಮತ್ತು ದೈಹಿಕವಾಗಿ ಹಲ್ಲೆ ನಡೆಯುವುದು ಕೊನೆಯಿಲ್ಲದ ಗೋಳು. ನೈಜ ಘಟನೆಯಲ್ಲಿ ಕೊಲೆಯಾದ ವ್ಯಕ್ತಿಯ ಹೆಂಡತಿಗೆ ಒಂಬತ್ತು ತಿಂಗಳ ನಂತರ ಕೊಂಚ ನ್ಯಾಯ ದೊರೆತಿತ್ತು. ಆದರೆ ಆ ವೇಳೆಯಲ್ಲಿ ಆಕೆ ದೀರ್ಘ ಕಾಲದ ನ್ಯಾಯಾಂಗ ವಿಚಾರಣೆ, ಸಹಿಸಲಾಗದ ಚಿತ್ರಹಿಂಸೆಯನ್ನು ಅನುಭವಿಸಬೇಕಾಗಿತ್ತು.

•ಜಾತಿ ಆಧಾರಿತ ಸಾಮಾಜಿಕ ಅನಿಷ್ಠಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ನ್ಯಾಯಾಂಗವು ಸಾಮಥ್ರ್ಯ ಹೊಂದಿರುವುದೇ ?

ಚಂದ್ರು : ಜನರು ನ್ಯಾಯಾಂಗದಿಂದ ಹೆಚ್ಚಿನ ನಿರೀಕ್ಷೆಗಳನ್ನೇ ಹೊಂದಿದ್ದಾರೆ. ಆದರೆ ನ್ಯಾಯಾಂಗಕ್ಕೂ ಕೆಲವು ಇತಿಮಿತಿಗಳಿವೆ. ಕಾರ್ಯಾಂಗ ಮತ್ತು ಶಾಸಕಾಂಗಗಳು ತಮ್ಮ ವ್ಯಾಪ್ತಿಯನ್ನು ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ನ್ಯಾಯಾಂಗದ ಇತಿಮಿತಿಗಳು ಇನ್ನೂ ಢಾಳಾಗಿ ಕಾಣುತ್ತವೆ.  ಆದಿವಾಸಿಗಳ ದಿನನಿತ್ಯದ ಜೀವನದಲ್ಲಿ ಭಯಾನಕವಾದ ಘಟನೆಗಳು ಸಂಭವಿಸುತ್ತಿವೆ. ಆದರೆ ಉದ್ಯೋಗ, ಸಾರ್ವಜನಿಕ ಸ್ಮಶಾನ, ಭೂಮಿ, ಒಡೆತನ, ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ಇಂತಹ ವಿಚಾರಗಳಿಗೆ ಸಂಬಂಧಿಸಿದ ಕೆಲವು ವ್ಯಕ್ತಿಗತ ಘಟನೆಗಳಲ್ಲಿ ಮಾತ್ರ ನ್ಯಾಯಾಂಗ ಮಧ್ಯ ಪ್ರವೇಶಿಸಲು ಸಾಧ್ಯ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಸರ್ಕಾರಗಳು ಮಾತ್ರವೇ ತರಲು ಸಾಧ್ಯ, ಆಗಲೇ ಈ ಸಾಮಾಜಿಕ ಅನಿಷ್ಠಗಳೂ ಕೊನೆಗೊಳ್ಳುತ್ತವೆ.

•ಚಿತ್ರದಲ್ಲಿ ಚಂದ್ರು ಹೋಲಿಕೆಯ ಪಾತ್ರಧಾರಿಯು ಪೊಲೀಸರ ಬಗ್ಗೆ ಸದಭಿಪ್ರಾಯ ಹೊಂದಿರುವುದಿಲ್ಲ. ಚಿತ್ರದಲ್ಲಿ ಪೊಲೀಸರನ್ನು ಬಹುತೇಕವಾಗಿ ಕ್ರೌರ್ಯದೊಂದಿಗೆ ಸಮೀಕರಿಸಿ ಬಿಂಬಿಸಲಾಗಿದೆ. ತಮಿಳುನಾಡಿನಲ್ಲಿ ವಾಸ್ತವದಲ್ಲಿ ಪೊಲೀಸರನ್ನು ನೀವು ಹೇಗೆ ನೋಡುತ್ತೀರಿ ?

ಚಂದ್ರು : ತಮಿಳುನಾಡಿನಲ್ಲಾಗಲಿ ಅಥವಾ ಇತರೆಡೆಗಳಲ್ಲಾಗಲಿ ಈ ದೃಷ್ಟಿಕೋನ ನನ್ನೊಬ್ಬನದೇ ಅಲ್ಲ. ಸರ್ಕಾರಗಳೇ ನೇಮಿಸಿರುವ ಅನೇಕ ತನಿಖಾ ಆಯೋಗಗಳು ಕಾಲದಿಂದ ಕಾಲಕ್ಕೆ ಇದನ್ನು ಹೇಳುತ್ತಲೇ ಬಂದಿದ್ದು ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಶಿಫಾರಸು ಮಾಡುತ್ತಲೇ ಇವೆ.  ತಮಿಳುನಾಡಿನಲ್ಲಿ ಪೊಲೀಸ್ ವ್ಯವಸ್ಥೆ ತೀರಾ ಕೆಟ್ಟುಹೋಗುತ್ತಿದೆ ಎನ್ನುವ ವಾಸ್ತವವನ್ನು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಒಂದು ಸಂದರ್ಭದಲ್ಲಿ  ಒಪ್ಪಿದ್ದುದೂ ಹೌದು.

• ಚಿತ್ರದ ಕಡೆಯ ದೃಶ್ಯದಲ್ಲಿ ಕೊಲೆಗೀಡಾದ ನಾಯಕನ ಮಕ್ಕಳು ಮತ್ತೆ ತಲೆ ಎತ್ತುವಂತೆ ಬಿಂಬಿಸಲಾಗಿದೆ. ಚಿತ್ರದಲ್ಲಿ ಮಕ್ಕಳು ನಿಮ್ಮ ಜೊತೆಯಲ್ಲೇ ಪತ್ರಿಕೆಯನ್ನು ಓದುತ್ತಾ ಕುಳಿತುಕೊಳ್ಳುವ ದೃಶ್ಯವನ್ನು ಬಹಳಷ್ಟು ಜನರು ಮೆಚ್ಚಿದ್ದಾರೆ. ನಿಮಗೆ ಮಕ್ಕಳೊಡನೆ ಅಂತಹ ಆಪ್ತ ಸಂಬಂಧ ಇದೆಯೇ ? ನ್ಯಾಯಾಲಯದ ಮೊಕದ್ದಮೆಯನ್ನು ಗೆದ್ದ ನಂತರ ಈ ಮಕ್ಕಳನ್ನು ನೀವು ಕಂಡಿದ್ದಿರಾ ?

ಚಂದ್ರು : ಸಮಾಜದಲ್ಲಿ ಕೇವಲ ಅನುಕಂಪದ ಮೂಲಕ ಅಥವಾ ವ್ಯಕ್ತಿಗತವಾಗಿ ಕಾಳಜಿ ವಹಿಸುವ ಮೂಲಕ ಯಾವುದೇ ಪರಿವರ್ತನೆ ಉಂಟುಮಾಡಲಾಗುವುದಿಲ್ಲ. ವ್ಯಕ್ತಿಗತವಾಗಿ ಹೇಳುವುದಾದರೆ, ನಾನು ಮಕ್ಕಳನ್ನು ಹೆಚ್ಚು ಪ್ರೀತಿಸುತ್ತೇನೆ.  ನಾನು ನ್ಯಾಯಾಲಯದ ಒಳಗಿರಲಿ, ಹೊರಗಿರಲಿ ಮಕ್ಕಳು ಸಂತೋಷದಿಂದಿರುವುನ್ನು ನೋಡಲು ಬಯಸುತ್ತೇನೆ. ನಾಲ್ಕು ವರ್ಷಗಳ ಕಾಲ ಬಡ ವಿದ್ಯಾರ್ಥಿಗಳ ಶಾಲೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಶಾಲೆಯ ಮಕ್ಕಳು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ ಎಂಬ ವಿಶ್ವಾಸ ನನಗಿದೆ. ಈ ಚಿತ್ರದಲ್ಲಿನ ಕೆಲವು ದೃಶ್ಯಗಳು, ಸೂರ್ಯನ ಪಾತ್ರವನ್ನೂ ಸೇರಿದಂತೆ ಮತ್ತು ಮಕ್ಕಳ ಗುಣಗಳನ್ನೂ ಸೇರಿದಂತೆ, ಜೀವನದಿಂದಲೇ ಪ್ರೇರಿತವಾಗಿವೆ.

• ತಮಿಳುನಾಡಿನಲ್ಲಿ ಜಾತಿ ಆಧಾರದ ಮೇಲೆ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಕಮ್ಯುನಿಸ್ಟ್ ಪಕ್ಷಗಳ ಹೋರಾಟವನ್ನು ನೀವು ಹೇಗೆ ಭಾವಿಸುತ್ತೀರಿ ?

ಚಂದ್ರು : ಆದಿವಾಸಿ ಜನರ ಕಲ್ಯಾಣಕ್ಕಾಗಿ, ಏಳಿಗೆಗಾಗಿ ಹೋರಾಡುವುದು ಕಮ್ಯುನಿಸ್ಟರ ಪರಂಪರೆಯೇ ಆಗಿದೆ. ಅವರ ಬದ್ಧತೆಯ ಬಗ್ಗೆ ಯಾರೂ ಸಹ ಆಕ್ಷೇಪಿಸಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಜಾತಿ ಆಧಾರಿತ ದೌರ್ಜನ್ಯಗಳ ವಿರುದ್ಧ ಹೋರಾಡಲು ಪ್ರತ್ಯೇಕ ಸಂಘಟನೆಗಳನ್ನು ರಚಿಸಿವೆ. ಆದರೆ ಈ ಚಿತ್ರದಲ್ಲಿ ಬಿಂಬಿಸಿರುವ ಘಟನೆ ಸಂಭವಿಸಿದಾಗ ಸಂತ್ರಸ್ತರನ್ನು ರಕ್ಷಿಸುವ ಸಲುವಾಗಿ ಯಾವುದೇ ರೀತಿಯ ಸಂಘಟಿತ ಪ್ರಯತ್ನಗಳು ಕಂಡುಬಂದಿರಲಿಲ್ಲ.  ರಾಜಕಣ್ಣು ಹೆಂಡತಿಯನ್ನು ನಾನು ಭೇಟಿಯಾದ ನಂತರವೇ ಈ ಪ್ರಕರಣಕ್ಕೆ ಒಂದು ತಿರುವು ದೊರೆತು, ನಾನು ಎಷ್ಟೇ ಕಷ್ಟವಾದರೂ ಕಾನೂನು ಹೋರಾಟ ಮುಂದುವರೆಸಲು ನಿರ್ಧರಿಸಿದೆ.  ಈ ಮೊಕದ್ದಮೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ನ್ಯಾಯಾಂಗದ ತೀರ್ಪು, ನ್ಯಾಯಾಂಗದ ಮೇಲೆ ಜನಸಾಮಾನ್ಯರಲ್ಲಿದ್ದ ವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗಿತ್ತು.

• ಚಿತ್ರದಲ್ಲಿ ತೋರಿಸಿರುವಂತೆ ಈ ಮೊಕದ್ದಮೆಯಲ್ಲಿ ಕೇರಳದಿಂದ ಯಾರಾದರೂ ಸಾಕ್ಷ್ಯ ಹೇಳಿದ್ದರೇ ?

ಚಂದ್ರು : ಕೊಲೆಯಾದ ರಾಜಕಣ್ಣುವಿನ ಇಬ್ಬರು ಸಂಬಂಧಿಗಳು ಪೊಲೀಸರಿಗೆ ಹೆದರಿ ಕೇರಳಕ್ಕೆ ಓಡಿ ಹೋಗಿದ್ದರು. ಅವರ ಜೀವಕ್ಕೆ ಸಂಚಕಾರ ಇದೆ ಎಂಬ ಭೀತಿಯಲ್ಲಿದ್ದರು. ಹಾಗಾಗಿ ಅವರು ಕೇರಳದಲ್ಲಿ ಅವಿತಿದ್ದರು. ಕೇರಳದ ದೂರದ ಗ್ರಾಮಗಳಲ್ಲಿ ಮನೆ ಕೆಲಸ ಮಾಡುತ್ತಿದ್ದ ಇವರನ್ನು ಹುಡುಕಿ ತರುವುದು ಬಹಳ ತ್ರಾಸದಾಯಕವಾಗಿತ್ತು.  ಅವರನ್ನು ಕಂಡುಹಿಡಿಯಲು ನಾನು ಹಲವು ಬಾರಿ ಕೇರಳಕ್ಕೆ ಹೋಗಿದ್ದೆ. ಈ ಚಿತ್ರದಲ್ಲಿ ಮತ್ತಷ್ಟು ಆಕರ್ಷಣೆ ಉಂಟುಮಾಡಲು, ಈ ಘಟನೆಗಳನ್ನು ಕೊಂಚ ವಿಭಿನ್ನ ರೀತಿಯಲ್ಲಿ ಬಿಂಬಿಸಲಾಗಿದೆ.

Tags: advocatechandrujai bhimjaibhimprakash raisuriyatj Gnanavel
Previous Post

ಬಿಜೆಪಿ ಪತ್ರಿಕೋದ್ಯಮವನ್ನು ಕೊಲ್ಲುವುದರಲ್ಲಿ ನಿರತವಾಗಿದೆ: ರಾಹುಲ್‌ ಗಾಂಧಿ

Next Post

ಕಂಗಾನ ಭಿಕ್ಷೆ ಹೇಳಿಕೆಯನ್ನು ಮುಸಲ್ಮಾನರು ಹೇಳಿದ್ದರೆ ಗುಂಡು ಹಾರಿಸುತ್ತಿದ್ದರು – ಓವೈಸಿ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಕಂಗಾನ ಭಿಕ್ಷೆ ಹೇಳಿಕೆಯನ್ನು ಮುಸಲ್ಮಾನರು ಹೇಳಿದ್ದರೆ ಗುಂಡು ಹಾರಿಸುತ್ತಿದ್ದರು – ಓವೈಸಿ

ಕಂಗಾನ ಭಿಕ್ಷೆ ಹೇಳಿಕೆಯನ್ನು ಮುಸಲ್ಮಾನರು ಹೇಳಿದ್ದರೆ ಗುಂಡು ಹಾರಿಸುತ್ತಿದ್ದರು - ಓವೈಸಿ

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada