ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹುಟ್ಟುಹಬ್ಬ ಇವತ್ತು. ಹ್ಯಾಪಿ ಬರ್ತಡೇ ಸೂರ್ಯ ಎನ್ನುತ್ತಲೇ ಈ ಮಹಾಶಯರು ಸಂಸದರಾಗಿ ಮಾಡಿದ ವಿಶೇಷ ಅಭಿವೃದ್ಧಿ ಕಾರ್ಯಗಳೇನು ಎಂದು ನೋಡಿದರೆ ನಿರಾಸೆಯಾಗುತ್ತದೆ.
ಸಹಜವಾಗಿ ರೂಟಿನ್ ರೂಪದಲ್ಲಿ ಬೆಂಗಳೂರಿನ ಬೃಹತ್ ಯೋಜನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ನೀಡಲೇಬೇಕು. ಅದು ಒಕ್ಕೂಟ ವ್ಯವಸ್ಥೆಯ ನಿಯಮ. ಅದು ನಮ್ಮಿಂದ ಪಡೆದುಕೊಂಡ ತೆರಿಗೆಯೇ ಆಗಿರುತ್ತದೆ. ಹೀಗೆ ಕೇಂದ್ರದಿಂದ ಬರುವ ಅನುದಾನವನ್ನುತಾವೇ ತಂದಿದ್ದೇವೆ ಎಂಬಂತೆ ಮಾತನಾಡುತ್ತಾರೆ.
ಆದರೆ ಅವರ ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ? ಬೆಂಗಳೂರು ದಕ್ಷಿಣದ ಸಂಸದ ಎಂಬುದನ್ನು ಮರೆತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ಕೆಲಸಗಳಲ್ಲೇ ಬ್ಯುಸಿ ಆಗಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ತೀವ್ರವಾಗಿದ್ದಾಗ ಸೋಂಕಿತರು ಆಸ್ಪತ್ರೆ, ಹಾಸಿಗೆ, ಆಕ್ಸಿಜನ್ ಕೊರತೆಯಿಂದ ನರಳುತ್ತಿದ್ದಾಗ ಜನರಿಗೆ ವ್ಯವಸ್ಥೆ ಮಾಡಬೇಕಿದ್ದ ತೇಜಸ್ವಿ ಸೂರ್ಯ. ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬವಾದಾಗ ಒಬ್ಬ ಸಂಸದರಾಗಿ, ಇನ್ನ ಒಂದು ಕಡೆ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ತಮ್ಮ ದೆಹಲಿ ಸಂಪರ್ಕಗಳನ್ನು ಬಳಸಿಕೊಂಡು ಕೇಂದ್ರದಿಂದ ಸಿಗಬೇಕಿದ್ದ ನೆರವನ್ನು ಪಡೆಯಲು ಯತ್ನಿಸಲಿಲ್ಲ.

ಕೋವಿಡ್‌ನಲ್ಲೂ ಮತೀಯತೆ!
ಆ ಸಂದರ್ಭದಲ್ಲಿ ಅವರು ತಮ್ಮ ದೇಹ-ಮನಸ್ಸುಗಳ ತುಂಬ ಹರಡಿಕೊಂಡಿರುವ ಕೋಮುದ್ವೇಷವನ್ನು ಹೊರ ಹಾಕಿದರು. ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯ ಕೋವಿಡ್ ಕಂಟ್ರೋಲ್ ರೂಮಿಗೆ ನುಗ್ಗಿ, ಬೆಡ್ ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸಿ, ಅಲ್ಲಿದ್ದ ಸುಮಾರು 200 ಸಿಬ್ಬಂದಿಗಳ ಪೈಕಿ 3೦ಕ್ಕೂ ಹೆಚ್ಚು ಮುಸ್ಲಿಮರ ಹೆಸರುಗಳನ್ನು ಕೂಗುತ್ತ, ಎಲ್ಲ ನೀವೇ ತುಂಬಿಕೊಂಡಿದ್ದೀರಿ ಎಂದು ದಬಾಯಿಸುತ್ತ, ಬೆಡ್ ಬ್ಲಾಕಿಂಗ್‌ಗೆ ಮುಸ್ಲಿಮರೇ ಕಾರಣ ಎಂಬಂತೆ ಅರಚಿದ್ದರು
ಮುಂದೆ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಸಿಕ್ಕಿಬಿದ್ದವರಲ್ಲಿ ತೇಜಸ್ವಿ ಮತ್ತು ಅವರ ಸೋದರಮಾವ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯರಿಗೆ ಪರಿಚಯವಿದ್ದ ಬಿಜೆಪಿ ಕಾರ್ಯಕರ್ತರಿದ್ದರು ಎನ್ನಲಾಗಿತ್ತು.
ಬಂಗಾಳ, ತಮಿಳುನಾಡಿನಲ್ಲಿ ಅವಮಾನ
ಬಿಜೆಪಿ ಯುವಮೋರ್ಚಾದ ಅಧ್ಯಕ್ಷನಾಗುತ್ತಿದಂತೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ತಮ್ಮ ದ್ವೇಷ ಭಾಷಣಗಳನ್ನು ಕುಟ್ಟತೊಡಗಿದರು. ಬಂಗಾಳದಲ್ಲಿ ರ್‍ಯಾಲಿ ನಡೆಸಿ ಜನರನ್ನು ಪ್ರಚೋದಿಸಲು ಯತ್ನಿಸಿದಾಗ ಟಿಎಂಸಿ ಕಾರ್ಯಕರ್ತರು ನುಗ್ಗಿದ ಕೂಡಲೇ ತೇಜಸ್ವಿ ಸೂರ್ಯ ಬೆಂಗಳೂರಿಗೆ ಬಂದವರು ಮತ್ತೆಂದೂ ಬಂಗಾಳದ ಕಡೆ ಮುಖ ಮಾಡಿಲ್ಲ.
ತಮಿಳುನಾಡು ಚುನಾವಣೆಯಲ್ಲಿ ಎಐಡಿಎಂಕೆ ಜೊತೆ ವೇದಿಕೆ ಹಂಚಿಕೊಂಡ ಸಂದರ್ಭದಲ್ಲಿ ತೇಜಸ್ವಿಸೂರ್ಯ, ʼತಮಿಳು ಭಾಷೆ ಉಳಿಯಬೇಕೆಂದರೆ ಹಿಂದುತ್ವ ಗೆಲ್ಲಬೇಕುʼ ಎಂದು ಭಾಷೆ ಮಾತ್ತು ಧರ್ಮಕ್ಕೆ ನಂಟು ಹಚ್ಚುವ ಹೀನ ಬುದ್ಧಿ ತೋರಿದ್ದರು. ಹೇಳಿ ಕೇಳಿ ಅದು ದ್ರಾವಿಡ ನೆಲ. ಕೊನೆಗೆ ಮಿತ್ರಪಕ್ಷ ಎಐಡಿಎಂಕೆಯೇ ಈ ಹುಡುಗನ್ನುತಮ್ಮಲ್ಲಿಗೆ ಕಳಿಸಬೇಡಿ ಎಂದಿತ್ತು.

ಬೆಂಗಳೂರು ಭಯೋತ್ಪಾದನೆಯ ಕೇಂದ್ರಬಿಂದು ಎಂದಿದ್ದು, ಒವೈಸಿ ಮತ್ತು ಜಿನ್ನಾ ಒಂದೇ ಎಂದಿದ್ದು, ಅರಬ್ ಮಹಿಳೆಯರು ನೂರಾರು ವರ್ಷಗಳಿಂದ ನೈಜ ಸಂಭೋಗದ ಸುಖವನ್ನೇ ಅನುಭವಿಸಿಲ್ಲ ಎಂದು ವಿವಾದ ಸೃಷ್ಟಿಸಿಕೊಂಡಿದ್ದರು ವ್ಯಾಪಕ ವಿರೋಧ ವ್ಯಕ್ತವಾದ ಕೂಡಲೇ ಟ್ವೀಟ್‌ಗಳನ್ನು ಡಿಲೀಟ್ ಮಾಡಿ ಪಲಾಯನ ಮಾಡುವುದು ತೇಜಸ್ವಿ ಸೂರ್ಯರ ಮತ್ತೊಂದು ʼಗುಣʼ
ಸಂಸತ್ತಿನಲ್ಲೂ ಸುಳ್ಳು ಹೇಳುವುದನ್ನು ಬಿಡಲಿಲ್ಲ. ʼಕರ್ನಾಟಕದಲ್ಲಿ ಶಾಲೆಗಳಲ್ಲಿ ನಮಗೆ ಬರೀ ಟಿಪ್ಪೂ ಸುಲ್ತಾನ್ ಕುರಿತು ಕಲಿಸಿದರೇ ವಿನಃ ಕಿತ್ತೂರು ಚೆನ್ನಮ್ಮ, ಕುವೆಂಪು, ಕಾರಂತರ ಬಗ್ಗೆ ಕಲಿಸಲೇ ಇಲ್ಲʼ ಎಂದು ಅಪ್ಪಟ ಸುಳ್ಳು ಹೇಳಿದ್ದರು.
ಸದ್ಯಕ್ಕೆ ಸೀನ್‌ನಲ್ಲಿ ಕಾಣದ ತೇಜಸ್ವಿ ಸೂರ್ಯ ಹೀಗೇ ಶಾಂತವಾಗಿದ್ದರೆ ಸಾಕು.
ಹ್ಯಾಪಿ ಬರ್ತ್‌ಡೇ…