‘ರಾಜ್ಯದ ಜನ ಬದಲಾವಣೆ ಬಯಸಿದ್ದು, 2023 ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ವರ್ಗವನ್ನು ಪ್ರತಿನಿಧಿಸುವ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ ಸ್ಪಷ್ಟ ಮುನ್ಸೂಚನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತ್ಮವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಚುನಾವಣೆ ನಡೆದ ಎರಡೂ ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಜೆಪಿ, ಮತ್ತೊಂದರಲ್ಲಿ ಜೆಡಿಎಸ್ ಗೆದ್ದಿತ್ತು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಬಿಜೆಪಿ ಗೆದ್ದಿದ್ದ ಹಾನಗಲ್ ಕ್ಷೇತ್ರವನ್ನು ನಾವು ಗೆದ್ದುಕೊಂಡಿದ್ದೇವೆ. ಕಳೆದ ಬಾರಿ ಸಿಂದಗಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಕಾಂಗ್ರೆಸ್, ಈ ಬಾರಿ ಮತಪ್ರಮಾಣ ದುಪ್ಪಟ್ಟು ಮಾಡಿಕೊಂಡು ಎರಡನೇ ಸ್ಥಾನಕ್ಕೆ ಏರಿದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಇದು ಜನ ಬದಲಾವಣೆ ಬಯಸಿರುವುದರ ಮುನ್ಸೂಚನೆ’ ಎಂದು ಹೇಳಿದ್ದಾರೆ.
ನಾನು ಈ ಹಿಂದೆ ಹೇಳಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಹಾಗೂ ಬಿಜೆಪಿ ಸರ್ಕಾರ ಕೊಚ್ಚಿ ಹೋಗಲಿದೆ ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಮತದಾರ ಬೇಸತ್ತಿದ್ದು, ಅದನ್ನು ಬದಲಿಸಲು ನಿರ್ಧರಿಸಿದ್ದಾನೆ. ಅದಕ್ಕೆ ಈ ಉಪಚುನಾವಣೆ ಫಲಿತಾಂಶವೇ ಸಾಕ್ಷಿ’ ಎಂದು ಹೇಳಿದ್ದಾರೆ.
‘ಈ ಚುನಾವಣೆಯ ಫಲಿತಾಂಶದ ಬಗ್ಗೆ ನಾನು ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಶ್ರೀನಿವಾಸ ಮಾನೆ ಅವರು ಕಳೆದ ಬಾರಿ 6 ಸಾವಿರ ನತಗಳ ಅಂತರದಲ್ಲಿ ಸೋತಿದ್ದರು. ಬಿಜೆಪಿ ಅಧಿಕಾರದಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ಇದೆ. ಜೊತೆಗೆ ಮುಖ್ಯಮಂತ್ರಿಗಳ ತವರು ಕ್ಷೇತ್ರ ಬೇರೆ, ಅವರು ಆ ಕ್ಷೇತ್ರದ ಅಳಿಯ. ಎಲ್ಲ ರೀತಿಯಲ್ಲೂ ಅವರಿಗೆ ಅನುಕೂಲ ಇತ್ತು. ಅವರ ಸರ್ಕಾರದಲ್ಲಿರುವ ನಮ್ಮ ಸ್ನೇಹಿತರು ಬ್ಯಾಗ್ ತುಂಬಿಕೊಂಡು ಹೋಗಿ ಬಹಳ ಪ್ರಯತ್ನಪಟ್ಟಿದ್ದರು.
ಸಿಂದಗಿಯಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೆವು. ಮನಗೂಳಿ ಅವರು ತಮ್ಮ ಪುತ್ರನನ್ನು ನಮ್ಮ ಪಕ್ಷದಲ್ಲಿ ಬಿಟ್ಟು ಹೋದರು. ಅವರು ಜೆಡಿಎಸ್ ಚಿಹ್ನೆಯಲ್ಲಿ ಗೆಲ್ಲುತ್ತೇವೆ ಎಂದಿದ್ದರೆ ನಮ್ಮ ತಕರಾರು ಏನೂ ಇರಲಿಲ್ಲ. ಅವರು ಕಾಂಗ್ರೆಸ್ ಬರಲು ಮುಂದಾದಾಗ ಜಿಲ್ಲೆಯ ಎಲ್ಲ ನಾಯಕರು ಒಟ್ಟಾಗಿ ಅವರಿಗೆ ಟಿಕೆಟ್ ನೀಡಿದೆವು. ಅಲ್ಲೂ ನಾವು ಗೆಲ್ಲುವ ವಿಶ್ವಾಸ ಇತ್ತು. ಮತ ಪ್ರಮಾಣ ನೋಡಿದರೆ ನಾವು ಸೋತಿದ್ದರೂ ಸಮಾಧಾನ ತಂದಿದೆ ಎಂದಿದ್ದಾರೆ.
ನಾವು ಒಂದೇ ದಿನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಹಂತ-ಹಂತವಾಗಿ ತರಬೇಕು. ಒಟ್ಟಾರೆಯಾಗಿ ಎರಡೂ ಕ್ಷೇತ್ರದ ಚುನಾವಣೆ ನೋಡಿದರೆ ಜನ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಮತದಾರರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇವಲ ಕೊರೋನಾ ವಿಚಾರ ಮಾತ್ರವಲ್ಲ, ಅವರಿಗೆ ಸಿಕ್ಕ ವ್ಯವಸ್ಥೆಯಲ್ಲಿ ಈ ಪರಿಸ್ಥಿತಿ ಬಂದಿದೆ. ಇದು ದೇಶಕ್ಕೆ ದೊಡ್ಡ ಸಂದೇಶ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು, ಇತರೆ ನಾಯಕರು ಆಡಿದ ಮಾತುಗಳನ್ನು ಜನ ನೋಡಿದ್ದಾರೆ. ವೈಯಕ್ತಿಕ ಟೀಕೆಗಳನ್ನು ಕೇಳಿದ್ದಾರೆ. ಉಪಚುನಾವಣೆ ವೇಳೆ ಅದೊಂದು ಚಾಳಿ ಆಗಿದ್ದು, ನಾವೆಲ್ಲ ರಾಜಕಾರಣಿಗಳು ಸೇರಿ ಅದನ್ನು ತಪ್ಪಿಸಬೇಕಿದೆ.
ಕಾಂಗ್ರೆಸ್ ಮೇಲೆ ಜನ ಇಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಂಡು ಅವರ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದ್ದು, ಅದನ್ನು ನಾವು ಸರಿ ಮಾಡುತ್ತೇವೆ ಎಂದು ದೀಪಾವಳಿ ಹಬ್ಬದ ಸಮಯದಲ್ಲಿ ಶುಭ ಘಳಿಗೆಗೆ ಹೆಜ್ಜೆ ಇಡುವ ವಿಶ್ವಾಸದಿಂದ ಹೇಳುತ್ತೇನೆ.
ಕೆಲವರು ರಾಜಕೀಯದಲ್ಲಿ ವೈಯಕ್ತಿಕ ಅಜೆಂಡಾ ಇಟ್ಟುಕೊಂಡಿರುತ್ತಾರೆ. ಒಂದು ಪಕ್ಷ ಅಂದ ಮೇಲೆ ಮೂರ್ನ್ಕಾಲ್ಕು ಆಕಾಂಕ್ಷಿಗಳು ಇರುತ್ತಾರೆ. ಅದು ಎಲ್ಲ ಪಕ್ಷಗಳಲ್ಲೂ ಇದ್ದಿದ್ದೆ. ರಾಜಕೀಯದಲ್ಲಿ ಸಾಮಾನ್ಯ ಎಂದು ಹೇಳಿದ್ದಾರೆ.
ಹಾನಗಲ್ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ, ಚುನಾವಣೆಯಲ್ಲಿ ಹಳ್ಳಿ ಹಳ್ಳಿಯಲ್ಲಿ ದುಡಿದ ಕಾರ್ಯಕರ್ತರಿಗೆ ದೊಡ್ಡ ಸೆಲ್ಯೂಟ್. ಬಿಜೆಪಿಯವರು ಏನೆಲ್ಲಾ ಪ್ರಯತ್ನ ಪಟ್ಟಿದ್ದರು, ಎಷ್ಟೆಲ್ಲಾ ಒತ್ತಡ ಹಾಕಿದ್ದರು. ಆದರೂ ಅದ್ಯಾವುದಕ್ಕೂ ಮತದಾರ ಬಗ್ಗಲಿಲ್ಲ.
ಈ ಚುನಾವಣೆ ಫಲಿತಾಂಶ ಬರೀ ಸಿಎಂಗೆ ಸಂಬಂಧಪಟ್ಟ ವಿಚಾರವಲ್ಲ. ಇಡೀ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಆಗಿರುವ ಮುಖಭಂಗ. ಇಡೀ ಸರ್ಕಾರ ಹಾಗೂ ಅದರ ಆಡಳಿತದ ಸೋಲು. ಆ ಪಕ್ಷದಲ್ಲಿನ ಮುಸುಕಿನ ಗುದ್ದಾಟದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅಲ್ಲಿ ಪಕ್ಷ ಕಟ್ಟಿದವರು ಲೆಕ್ಕಕ್ಕೆ ಇಲ್ಲವಾಗಿದ್ದಾರೆ. ಈಗ ಆ ವಿಚಾರ ಬೇಡ.
ಬಿಜೆಪಿ ಆಡಳಿತ ಸಾಕು ಎಂದು ಜನ ತೀರ್ಮಾನಿಸಿದ್ದಾರೆ. ಸಿಂದಗಿಯಲ್ಲೂ ಪಕ್ಷ ಗಟ್ಟಿಯಾಗುತ್ತಿದೆ. ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅಲ್ಲಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಯಕರ್ತರು ಆತ್ಮವಿಶ್ವಾಸದಿಂದ ಇರಲಿ. ಅವರು ಚುನಾವಣೆ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಅವರಿಗೆ ಧನ್ಯವಾದಗಳು.
ಕರ್ನಾಟಕದಲ್ಲಿ 2023 ಕ್ಕೆ ನಿಮ್ಮ ಆಡಳಿತ, ಜನರ ಆಡಳಿತ, ಕಾಂಗ್ರೆಸ್ ಆಡಳಿತ ಇರಲಿದೆ. ಅದು ಎಲ್ಲ ವರ್ಗದ ಆಡಳಿತ. ಜನ ಬಿಜೆಪಿಗೆ ಕೊಟ್ಟ ಅವಕಾಶದ ಸಮಯ ಮುಗಿದಿದೆ. ಈಗ ಆ ಬಗ್ಗೆ ಚರ್ಚೆ ಬೇಡ. ನಾವು ಮುಂದೆ ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.