ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ತಮ್ಮ ಸಹೋದರ ಹಣಮಂತ ನಿರಾಣಿ ಅವರನ್ನು ದಾಖಲೆಯ 34,693 ಮತಗಳ ಅಂತರದಿಂದ ಗೆಲ್ಲಲು ಕಾರಣೀಭೂತರಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅಭಿನಂದನೆ ಸಲ್ಲಿಸಿದ್ದಾರೆ.
ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ಹಾಗು ಸಹೋದರ ಶ್ರೀ ಹಣಮಂತ ಆರ್ ನಿರಾಣಿ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.
ಕಾರ್ಯಕರ್ತರ ಅವಿರತ ಪರಿಶ್ರಮಗಳ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಶ ನಳಿನ್ ಕುಮಾರ್ ಕಟೀಲ್, ಸಚಿವರು, ಶಾಸಕರು ಮತ್ತು ಎಲ್ಲಾ ನಾಯಕರ ಮೇಲೆ ವಿಶ್ವಾಸವಿಟ್ಟು ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.
ಚುನಾವಣೆ ಫಲಿತಾಂಶವು ಜನರಿಗೆ, ಜನಪರ ಆಡಳಿತಕ್ಕೆ ಸಂದ ಯಶಸ್ಸು. ಸರ್ಕಾರದ ಕಾರ್ಯಕ್ರಮಗಳಿಗೆ, ಪಕ್ಷದ ಸಂಘಟಿತ ಚುನಾವಣಾ ಹೋರಾಟಕ್ಕೆ ಸಿಕ್ಕ ಮನ್ನಣೆಯೆಂದು ಬಣ್ಣಿಸಿದ್ದಾರೆ.
ವಾಯುವ್ಯ ಕ್ಷೇತ್ರದ ಜನರು ಸ್ವಾಭಿಮಾನಿಗಳೆಂದು ತೋರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅನೇಕ ನಾಯಕರು ಬಂದು ಪ್ರಚಾರ ಮಾಡಿದರೂ ಅದನ್ನು ಲೆಕ್ಕಿಸದೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.