ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ಡಾ.ಅಮರೇಶ್ ಮಿಣಜಗಿ ಅವರ ನಿವಾಸಕ್ಕೆ ನಾದಬ್ರಹ್ಮ ಚಿತ್ರಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಭೇಟಿ ನೀಡಿ ಮಿಣಜಗಿ ಕುಟುಂಬ ಸದಸ್ಯರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಕೂಡಲಸಂಗಮದಲ್ಲಿ (Kudalasangama )ನಡೆದ 37ನೇ ಶರಣಮೇಳದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣ ಮಾಡಿದ ಹಂಸಲೇಖ, (Hamsalekha) ಡಾ.ಅಮರೇಶ್ ಮಿಣಜಗಿ ಅವರ ಆಹ್ವಾನದ ಮೇರೆಗೆ ಡಾ. ಮಿಣಜಗಿ ನಿವಾಸಕ್ಕೆ ಆಗಮಿಸಿ ಉಪಹಾರ ಸೇವಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಹಂಸಲೇಖ ಅವರಿಗೆ ಆರತಿ ಮಾಡಿ, ಕನ್ನಡದ ಶಾಲು ಹಾಕಿ, ಪುಷ್ಪಾರ್ಚನೆ ಗೈದು ಬರಮಾಡಿಕೊಂಡಿದ್ದಾರೆ.
ಕನ್ನಡದ ಮೇರು ಸಂಗೀತ ನಿರ್ದೇಶಕ ಹಂಸಲೇಖ ಬಸವನ ಬಾಗೇವಾಡಿಗೆ ( Basavanabagevadi ) ಬಂದಿದ್ದನ್ನು ನೋಡಿದ ಜನರು ಸಂತಸಗೊಂಡಿದ್ದಾರೆ. ಹಂಸಲೇಖ ಜೊತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಪುಟಾಣಿ ಮಕ್ಕಳು ಸೇರಿದಂತೆ ಇಡೀ ಕುಟುಂಬದ ಪ್ರೀತಿಯ ಸ್ವಾಗತಕ್ಕೆ ನಾದಬ್ರಹ್ಮ ಹಂಸಲೇಖ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ‘ಬಸವತತ್ವ’ದಂತೆ ಹಂಸಲೇಖ ಅವರ ಹಣೆಗೆ ವಿಭೂತಿ ಧಾರಣೆ ಮಾಡಿ, ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಗಿದೆ.
ಕೂಡಲಸಂಗಮದಲ್ಲಿ ನಡೆದ 37ನೇ ವರ್ಷದ ಶರಣ ಮೇಳದಲ್ಲಿ ಪ್ರಶಸ್ತಿ ಸನ್ಮಾನ ಸ್ವೀಕರಿಸಲು ತೆರಳುವ ಮಾರ್ಗ ಮಧ್ಯೆ ಕೆಲವು ಸಮಯ ಮಿಜಣಗಿ ಮನೆಯಲ್ಲಿ ಕಳೆದಿದ್ದಾರೆ. ಇದೇ ವೇಳೆ ಮಾತನಾಡಿದ ಹಂಸಲೇಖ, ಆಲಮಟ್ಟಿ ಜಲಾಶಯದ 26 ಬಾಗಿಲುಗಳಿಗೆ ‘ಬಸವ ಬಾಗಿಲು’ ಅಂತಾ ನಾಮಕರಣ ಮಾಡಬೇಕು ಅಂತಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಬಸವ ಬಾಗಿಲಿನಿಂದ ಬರುವ ನೀರು ಇಡೀ ನಾಡಿಗೆ ಭಾಗ್ಯ ಉಂಟು ಮಾಡುತ್ತದೆ. ಬಸವ ಬಾಗಿಲುಗಳಿಂದ ಹೊಸ ಬೆಳಕು ಮೂಡುವಂತಾಗಲಿ. ವಿಶ್ವಗುರು ಬಸವೇಶ್ವರರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಹೊಸ ಬೆಳಕು ನಮ್ಮ ಜೀವನದಲ್ಲಿ ಮೂಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.