ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ, “ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಹಾಗೂ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಮಗೆ ಹಣ ಕೊಡಲು ಬಂದಿದ್ದರು” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ನನಗೆ ಹಣದ ಆಮಿಷವೊಡ್ಡಿದ್ದರು. ಈ ಬಗ್ಗೆ “ಬಾಂಬೆ ಡೈರೀಸ್” ಪುಸ್ತಕದ ಮೊದಲ ಅಧ್ಯಾಯದಲ್ಲೇ ಬರೆದಿದ್ದೇನೆ ಎಂದ ಅವರು, ತಾವು ಎಷ್ಟು ಹಣ ಪಡೆದುಕೊಂಡ್ರಿ? ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.
ಇದೇ ವೇಳೆ ಕಾಂಗ್ರೆಸ್ ನಾಯಕರ ಭೇಟಿ ಬಗ್ಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ನ ಯಾವುದೇ ನಾಯಕರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಎಲ್ಲಾ ಕಾಂಗ್ರೆಸ್ ನಾಯಕರನ್ನು ಬಹಿರಂಗವಾಗಿಯೇ ಭೇಟಿ ಮಾಡಿದ್ದೇನೆ. ಆದರೆ ನಾನು ಎಂದೂ ಸಹ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ ಎಂದ ಅವರು, ನಾನು ಬಿಜೆಪಿ ಸೇರಲು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮಧ್ಯಸ್ಥಿಕೆವಹಿಸಿದ್ದರು. ಆದರೆ ನಾನು ಬಿಜೆಪಿ ಸೇರ್ಪಡೆಯಾದ ಬಳಿಕ ಯಡಿಯೂರಪ್ಪ ಆಗಲಿ, ಶ್ರೀನಿವಾಸ್ ಪ್ರಸಾದ್ ಸೇರಿ ಯಾವ ಬಿಜೆಪಿ ನಾಯಕರು ನನ್ನ ನೆರವಿಗೆ ಬರಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದರು.
ಹುಣಸೂರು ಉಪ ಚುನಾವಣೆಯಲ್ಲಿ ಸೋತ ಬಳಿಕ ಯಾರೂ ಬರಲಿಲ್ಲ. ಆದರೆ ಆರ್ಎಸ್ಎಸ್ ಮುಖಂಡ ಮುಕುಂದ್ ಅವರು ನನ್ನನ್ನು MLC ಮಾಡಲು ನೆರವಾದರು. ಅವರಿಂದಲೇ ನಾನು MLC ಆದೆ ಎಂದ ವಿಶ್ವನಾಥ್, ಸದ್ಯಕ್ಕೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಮಾಡಿಲ್ಲ. ಅಲ್ಲದೇ 2023ರ ಚುನಾವಣೆ ಎದುರಿಸುವುದು ತೀರಾ ಕಷ್ಟಕರವಾಗಿದ್ದು, ರಿಯಲ್ ಎಸ್ಟೇಟ್ನವರೆಲ್ಲಾ ರಾಜಕಾರಣಕ್ಕೆ ಬಂದಿದ್ದಾರೆ. ಟಿಕೆಟ್ ಪಡೆದುಕೊಳ್ಳೋದಕ್ಕೂ ಹಣ ಕೊಡುತ್ತಿದ್ದಾರೆ, ಇವರ ಮಧ್ಯದಲ್ಲಿ ನಮ್ಮಂಥವರು ಸ್ಪರ್ಧೆ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ನಾನು ಸೈನಿಕ, ಯುದ್ಧ ಬಂದಾಗ ಹೋರಾಡುತ್ತೇನೆ. ಹೊರತು ಉತ್ತರ ಕುಮಾರನಂತೆ ಓಡಿ ಹೋಗುವುದಿಲ್ಲ ಎಂದರು.