ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ನಲ್ಲಿಮಾತಿನ ಸಮರ ತಾರಕಕ್ಕೇರಿದೆ. ನನಗೆ ಟಿಕೆಟ್ ಕೊಡಬೇಕು ಎಂದು ನಿರ್ಣಯ ಆಗಿದೆ ಎಂದು ಭವಾನಿ ರೇವಣ್ಣ, ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಟಿಕೆಟ್ ಕಿತ್ತಾಟಕ್ಕೆ ನಾಂದಿ ಹಾಡಿದ್ರು. ಆ ಬಳಿಕ ಮಾಜಿ ಶಾಸಕ ಹೆಚ್.ಎಸ್ ಪ್ರಕಾಶ್ ಪುತ್ರ ಹೆಚ್.ಪಿ ಸ್ವರೂಪ್ ನಾನೂ ಕೂಡ ಆಕಾಂಕ್ಷಿ ಎನ್ನುವ ಮೂಲಕ ಟಿಕೆಟ್ ಪೈಪೋಟಿ ಕಣಕ್ಕೆ ಎಂಟ್ರಿ ಆಗಿದ್ದರು. ಆ ಬಳಿಕ ಸ್ವರೂಪ್ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದಿದ್ದರು. ಆ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಸನದಲ್ಲಿ ನಮ್ಮ ಪಕ್ಷದಿಂದ ಸೂಕ್ತ ಅಭ್ಯರ್ಥಿ ಇದ್ದಾರೆ. ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವ ಅನಿವಾರ್ಯತೆ ಇಲ್ಲ ಎನ್ನುವ ಮೂಲಕ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಇಲ್ಲ ಎನ್ನುವ ಸುಳಿವು ಕೊಟ್ಟಿದ್ದರು. ಅಷ್ಟರ ತನಕ ಸಣ್ಣದಾಗಿ ಕಾಣಿಸಿಕೊಂಡಿದ್ದ ಕಿಡಿ, ದಗ್ಗನೆ ಒಮ್ಮೆಗೆ ಹೊತ್ತಿಕೊಂಡಿತ್ತು. ಮೊದಲಿಗೆ ಸಂಸದ ಪ್ರಜ್ವಲ್, ಆ ಬಳಿಕ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ಕುಮಾರಸ್ವಾಮಿ ಟಿಕೆಟ್ ನಿರ್ಧಾರ ಮಾಡಲ್ಲ, ಹಾಸನದ ಟಿಕೆಟ್ ಜವಾಬ್ದಾರಿ ಹೆಚ್.ಡಿ ರೇವಣ್ಣ ಹಾಗು ಹೆಚ್.ಡಿ ದೇವೇಗೌಡರು ನಿರ್ಧಾರ ಮಾಡ್ತಾರೆ ಎನ್ನುವ ಮೂಲಕ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಈ ಹೇಳಿಕೆಗಳಿಂದ ನೊಂದಿರುವ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸಿದ್ದಾರೆ..!
ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸುವ ನೂರಾರು ಶಕುನಿಗಳಿದ್ದಾರೆ. ಪಾಪ ಬಾಯಿ ಸೂರಜ್ ತಪ್ಪಿ ಮಾತನಾಡಿದ್ದಾನೆ. ನಿಮಗೆ ಅದು ಏನೋ ಆಗಿ ಹೋಗಿದೆ ಅನ್ನಿಸಿರಬಹುದು.ನನಗೆ ಅದು ಅಂತಹ ಮಹತ್ವದ್ದು ಅಂತ ಅನ್ನಿಸಿಲ್ಲ. ನನ್ನ ಮನೆ ಮಕ್ಕಳು ನನ್ನ ಬಗ್ಗೆ ಮಾತನಾಡದೇ ಇನ್ಯಾರ ಬಗ್ಗೆ ಮಾತನಾಡ್ತಾರೆ..? ತಪ್ಪನ್ನು ಸರಿಪಡಿಸಿಕೊಳ್ಳುವ, ಅರಗಿಸಿಕೊಳ್ಳುವ ಶಕ್ತಿ ನನಗೆ ಇದೆ. ಯಾರೋ ಶಕುನಿಗಳು ದಾರಿ ತಪ್ಪಿಸಿರುತ್ತಾರೆ, ನೀವು ನಿಂತ್ಕೊಂಬಿಟ್ರೆ ಏನೋ ಆಗಿಬಿಡುತ್ತೆ ಅಂತ ಹೇಳುವ ಶಕುನಿಗಳಿರ್ತಾರೆ. ಅದಕ್ಕೆ ದಾರಿ ತಪ್ಪಿರ್ತಾರೆ. ಅವನು ಹೇಳಿದ್ದರಲ್ಲಿ ತಪ್ಪಿದ್ಯಾ..? ರಾಜ್ಯವನ್ನು ನಾನು ನೋಡ್ತಿದ್ದೇನೆ. ಹಾಸನದ ರಾಜಕಾರಣವನ್ನು ಮೊದಲಿನಿಂದಲೂ ರೇವಣ್ಣ ನೋಡ್ತಿದ್ದಾನೆ. ನನ್ನ ಪ್ರತಿಯೊಂದು ರಾಜಕಾರಣದ ಜವಾಬ್ದಾರಿ ಅವನೇ ತೆಗೆದುಕೊಂಡಿದ್ದಾನೆ. ಹಾಗಾಗಿ ಸೂರಜ್ ಹೇಳಿರೋದ್ರಲ್ಲಿ ತಪ್ಪೇನಿದೆ..? ಅಂತಾ ಸೂರಜ್ ಹೇಳಿಕೆಯನ್ನ ರಾಮಾಯಣ ಮಹಾಭಾರತಕ್ಕೆ ಹೋಲಿಸಿದ್ದಾರೆ.

ದೇವೇಗೌಡರಿಗೆ ವಯಸ್ಸಾಗಿ ಅವರನ್ನು ಎಳೆಯಬೇಡಿ..!
ಸಂಸದ ಪ್ರಜ್ವಲ್ ರೇವಣ್ಣ ಹಾಗು ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿಕೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿರುವಾಗಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಇಬ್ಬರ ಜೊತೆಗೂ ಮಾತನಾಡಿ ಸಮಸ್ಯೆ ಬಗೆಹರಿಸುವ ತನಕ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನ ಟಿಕೆಟ್ ವಿಚಾರದಲ್ಲಿ ಹೆಚ್.ಡಿ ದೇವೇಗೌಡರ ಹೆಸರನ್ನ ಎಳೆದು ತರಬೇಡಿ, ನಾನು ಭಾವನಾತ್ಮಕ ಜೀವಿ. ದೇವೇಗೌಡರ ಆರೋಗ್ಯ ಈಗ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಎನ್ನುವ ಮೂಲಕ ತಂದೆಯನ್ನು ನೆನೆದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದರ ನಡುವೆ ಹಾಸನದಲ್ಲಿ ಟಿಕೆಟ್ ಕೊಡಬೇಕು ಅಂತಾ ಭವಾನಿ ರೇವಣ್ಣ ಹಾಗು ಹೆಚ್.ಪಿ ಸ್ವರೂಪ್ ಬೆಂಬಲಿಗರು ಪ್ರತಿಭಟನೆ ಮತ್ತು ಆಕ್ರೋಶ ಹೊರ ಹಾಕಿದ್ದಾರೆ.
ಪ್ರೀತಂಗೌಡಗೆ ಸೂಕ್ತ ಎದುರಾಳಿ ಯಾರು..?
ಒಂದು ಕ್ಷೇತ್ರದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಎದುರಾಳಿ ಅಭ್ಯರ್ಥಿ ಯಾರು..? ಅವರನ್ನು ಸೋಲಿಸಲು ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಿದ್ರೆ ಸೂಕ್ತ ಅನ್ನೋದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಆದರೆ ಹಾಸನಕ್ಕೆ ಭವಾನಿ ರೇವಣ್ಣ ಘೋಷಣೆ ಮಾಡಿಕೊಂಡ ಬಳಿಕ , ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಆಗಬೇಕು ಎನ್ನುವ ಕೂಗು ಒಂದು ಕಡೆ ಸೃಷ್ಟಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ನಿವಾಸಕ್ಕೂ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮತ್ತೊಂದು ಕಡೆ ಸ್ವರೂಪ್ ಪರ ಕೂಡ ಒತ್ತಡ ಸೃಷ್ಟಿಯಾಗಿದೆ. ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್ ಮನೆ ಮುಂದೆ ನೂರಾರು ಜನರು ಜಮಾಯಿಸಿದ್ದು, ಶಾಮಿಯಾನ ಹಾಕಿಕೊಂಡು ಸ್ವರೂಪ್ ಮನೆ ಮುಂದೆಯೇ ಕುಳಿತಿದ್ದಾರೆ. ಸ್ವರೂಪ್ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೀಗ ಹಾಸನ ಕ್ಷೇತ್ರದ ಪೂಪೋಟಿ ತಾರಕಕ್ಕೇರಿದ್ದು ಕುಮಾರಸ್ವಾಮಿ ಹಾದಿ ತಪ್ಪಿದ ಮಕ್ಕಳನ್ನು ಹೇಗೆ ಸರಿ ದಾರಿಗೆ ತರ್ತಾರೆ ಕಾದು ನೋಡಬೇಕಿದೆ.