ರಾಜ್ಯ ಸರ್ಕಾರ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ತಿದೆ. ಈಗಾಗಲೇ ವಿಧಾನಸೌಧ ಖಾಲಿಯಾಗಿದ್ದು, ಜನರಿಂದ ಚುನಾಯಿತರಾಗಿದ್ದ ಜನಪ್ರತಿನಿಧಿಗಳು ಈಗಾಗಲೇ ಮರು ಆಯ್ಕೆ ಬಯಸಿ, ಕ್ಷೇತ್ರಗಳಲ್ಲಿ ಊರೂರು ಅಲೆಯುತ್ತಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್, ಜೆಡಿಎಸ್ ಶಾಸಕರು ಕೂಡ ಆಡಳಿತ ಸರ್ಕಾರದ ವೈಫಲ್ಯಗಳನ್ನು ಹಿಡಿದು ರಾಜ್ಯವನ್ನು ಸುತ್ತುತ್ತಿದೆ. ಸರ್ಕಾರ ಮಾಡಿದ ತಪ್ಪುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೃಹತ್ ಸಭೆಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಅಭಿವೃದ್ಧಿ ವಿಚಾರಗಳನ್ನು ಮರೆ ಮಾಚಲು ಅನ್ಯ ಮಾರ್ಗವನ್ನೇ ಆಯ್ದುಕೊಂಡಿದೆ.ಪ್ರತಿಯೊಂದು ಜಿಲ್ಲೆಯಲ್ಲೂ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜನರಿಗೆ ಭಕ್ಷ್ಯ ಭೋಜನ ಹಾಗು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಜಿಲ್ಲೆಗೊಂದು ಉತ್ಸವ.. ಯಾವಾಗಲೂ ಇಲ್ಲದ್ದು ಈಗ್ಯಾಕೆ..?
ಈಗಾಗಲೇ ಮಂಡ್ಯದಲ್ಲಿ ಮಹಾಕುಂಭ ಮೇಳ ಮಾಡಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉತ್ಸವ, ಬಳ್ಳಾರಿಯಲ್ಲಿ ಜಿಲ್ಲಾ ಉತ್ಸವ, ವಿಜಯನಗರದಲ್ಲಿ ಜಿಲ್ಲಾ ಉತ್ಸವ. ಇವೆಲ್ಲಾ ಕಾರ್ಯಕ್ರಮಗಳು ಸರ್ಕಾರದ ಅನುದಾನದಲ್ಲೇ ನಡೆಯುತ್ತಿರುವ ವಿಶೇಷ ಕಾರ್ಯಕ್ರಮಗಳು. ಮುಂದಿನ ಚುನಾವಣೆ ಹಿತದೃಷ್ಟಿಯಿಂದ ಐದಾರು ಕೋಟಿ ಸರ್ಕಾರದ ಅನುದಾನದ ಜೊತೆಗೆ ಸಿನಿಮಾ ಸ್ಟಾರ್, ಸಿಂಗರ್ಸ್ ಸೇರಿದಂತೆ ಜನರನ್ನು ಸೆಳೆಯಬಹುದಾನ ಜನರನ್ನು ಕರೆಸಿ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುವುದು ಇದರ ಉದ್ದೇಶ. ಅದೇ ಸರ್ಕಾರ ಐದಾರು ಕೋಟಿಯಲ್ಲಿ ಸಣ್ಣದೊಂದು ಅಭಿವೃದ್ಧಿ ಕೆಲಸ ಮಾಡಿಸಬಹುದು. ಆದರೆ ಅದನ್ನು ಮಾಡುವುದಿಲ್ಲ. ಐದಾರು ಕೋಟಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದಾಗ ಜನರ ಗಮನ ಸೆಳೆಯುವುದಿಲ್ಲ, ಬೇಕಾದ ಪ್ರಚಾರವೂ ಸಿಗುವುದಿಲ್ಲ. ಅಭಿವೃದ್ಧಿಯಿಂದ ರಾಜಕಾರಣಿಗಳಿಗೆ ಲಾಭ ಎನ್ನುವುದು ಇಲ್ಲದಿರುವ ಕಾರಣಕ್ಕೆ ಜನರನ್ನು ಸೆಳೆಯಲು ಈ ರೀತಿ ಪ್ರಚಾರ ತಂತ್ರಗಳನ್ನು ಅನುಸರಿಸಲಾಗ್ತಿದೆ.

ವಿಜಯನಗರದಲ್ಲಿ ಜನರಿಲ್ಲದೆ ಕೋಟಿ ಕೋಟಿ ವ್ಯರ್ಥ..!
ಬಳ್ಳಾರಿಯಿಂದ ವಿಭಜನೆ ಆಗಿ ವಿಜಯನಗರ ಜಿಲ್ಲೆ ರೂಪುಗೊಂಡಿದೆ. ಈ ಜಿಲ್ಲೆಯಲ್ಲಿ ಆನಂದ್ ಸಿಂಗ್ ಬಿಜೆಪಿಯಿಂದ ಸಚಿವರಾಗಿದ್ದಾರೆ. ಆದರೆ ಜಿಲ್ಲಾ ಉತ್ಸವದಲ್ಲಿ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ. ಹೀಗಾಗಿ ವಿಜಯನಗರದ ಹಂಪಿ ಉತ್ಸವಕ್ಕೆ ಜನರ ಕೊರತೆ ಕಾಣಿಸಿಕೊಂಡಿದೆ. ಆನಂದ್ ಸಿಂಗ್ ಜಿಲ್ಲೆಯಲ್ಲಿ ಪ್ರಭಾವಿ ನಾಯಕನಾಗಿದ್ದರೂ ಜಿಲ್ಲಾ ಉಸ್ತುವಾರಿ ಆಗಿ ಕೊಪ್ಪಳಕ್ಕೆ ನಿಯೋಜನೆ ಮಾಡಲಾಗಿದೆ. ಬಳ್ಳಾರಿ ಉಸ್ತುವಾರಿ ಸಚಿವರನ್ನಾಗಿ ಶಶಿಕಲಾ ಜೊಲ್ಲೆ ಅವರನ್ನು ನೇಮಕ ಮಾಡಲಾಗಿದೆ. ಇದೇ ವಿಚಾರದಲ್ಲಿ ಮುನಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತನ್ನ ಕ್ಷೇತ್ರ ಹಾಗು ವಿಜಯನಗರ ಜಿಲ್ಲೆಯ ಉಳಿದ ಕಡೆಯಿಂದ ಜನರನ್ನು ಕರೆತರುವ ಕೆಲಸ ಮಾಡಿಲ್ಲ. ದೊಡ್ಡ ವೇದಿಕೆ, ಸ್ಟಾರ್ ನಟ ನಟಿಯರು ವೇದಿಕೆ ಮೇಲೆ ಹಾಡು ಹಾಡಿದ್ರೆ ಸಾವಿರಾರು ಖಾಲಿ ಕುರ್ಚಿಗಳು ವೀಡಿಯೋದಲ್ಲಿ ಸೆರೆಯಾಗಿವೆ. ಇದನ್ನು ನೋಡಿದಾಗ ಸರ್ಕಾರ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ವ್ಯರ್ಥ ಮಾಡುತ್ತಿದೆ ಎನಿಸದೆ ಇರದು.
ಆಪರೇಷನ್ ಕಮಲದ ನಾಯಕರಿಗೆ ಉತ್ಸವ ಆದ್ಯತೆ..!
ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿ ಸೇರಿರುವ ಶಾಸಕರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉತ್ಸವ ಮಾಡಲು ಆದ್ಯತೆ ಕೊಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ಕಟೀಲ್ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಯಾರೂ ಮತದಾನ ಮಾಡಬೇಡಿ, ಕೇವಲ ಲವ್ ಜಿಹಾದ್ ವಿಚಾರವಾಗಿ ಮತದಾನ ಮಾಡಲು ಕರೆ ನೀಡಿದ್ದರು. ಅದನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಇದೀಗ ರಾಜ್ಯ ಸರ್ಕಾರ ಕೂಡ ಅಭಿವೃದ್ಧಿ ವಿಚಾರವಾಗಿ ಮತ ಕೇಳುವುದು ಅಸಾಧ್ಯ ಎನ್ನುವ ಕಾರಣಕ್ಕೆ ಉತ್ಸವಗಳನ್ನು ಆಯೋಜನೆ ಮಾಡುತ್ತ, ಜನರನ್ನು ಆಕರ್ಷಣೆ ಮಾಡಲು ಮುಂದಾಗಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಜನರು ಅಭಿವೃದ್ಧಿ ಯೋಜನೆಗಳಿಗಿಂತ ಆಕರ್ಷಣೆ ಕಾರ್ಯಕ್ರಮಗಳಿಗೆ ಮಾರು ಹೋಗ್ತಾರಾ..? ಅನ್ನೋದು ಕೆಲವೇ ತಿಂಗಳಲ್ಲಿ ಹೊರ ಬೀಳುವ ಫಲಿತಾಂಶದಲ್ಲಿ ಗೊತ್ತಾಗಬೇಕಿದೆ.