ಪ್ರಭುತ್ವ, ಶೋಷಕರು ಯಾವ ಪ್ರತಿಭಟನೆ, ಮುಷ್ಕರಗಳಿಗೂ ಜಗ್ಗದೇ ಇದ್ದಾಗ ಈ ದೇಶದ ಮಹಿಳೆಯರು ಪ್ರಭುತ್ವದ ವಿರುದ್ಧ ಗಟ್ಟಿಯಾಗಿ, ದೃಢವಾಗಿ ನಿಂತಿದ್ದಾರೆ. ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿಯಂಥವರ ಉದಾಹರಣೆ ಇತಿಹಾಸದಲ್ಲಿದ್ದರೆ ಮೊನ್ನೆ ಮೊನ್ನೆ ಆಳುವ ಸರ್ಕಾರದ ಮುಂದೆ ಮಂಡಿಯೂರದೆ ನಿಂತ ಶಾಹಿನ್ ಭಾಗ್ನ ಮಹಿಳೆಯರೂ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ. ವೌಥಾದಲ್ಲಿ ನಡೆದದ್ದೂ ಇದೇ.
ವರ್ಷಗಳ ಕಾಲ ನದಿ ತೀರದ ಭೂಮಿಯನ್ನು ಭೂರಹಿತ ಮೇಲ್ಜಾತಿ ರೈತರು ನಿಯಂತ್ರಿಸುತ್ತಿದ್ದರು ಮತ್ತು ಸಾಗುವಳಿ ಮಾಡುತ್ತಿದ್ದರು. ಅವರು ಭೂರಹಿತ ದಲಿತ ರೈತರಿಗೆ ಒಂದು ತುಂಡು ಭೂಮಿಯಲ್ಲಿ ಸಾಗುವಳಿ ಮಾಡಲೂ ಅವಕಾಶ ನೀಡಲಿಲ್ಲ. ದಲಿತ ಪುರುಷರು ಭೂಮಿಯ ಮೇಲೆ ಹಕ್ಕು ಸ್ಥಾಪಿಸಲು ವಿಫಲವಾದಾಗ ಮೇಲ್ಜಾತಿ ಗುಂಪುಗಳಿಂದ ಭೂಮಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡವರು ಬಾಲುಬೆನ್ ಮತ್ತು ಇತರ ದಲಿತ ಮಹಿಳೆಯರು.
ಇಂಥದ್ದೊಂದು ಸಾಮಾಜಿಕ ಬದಲಾವಣೆಯ ಕಥೆಯು ಸುಮಾರು 30 ವರ್ಷಗಳ ಹಿಂದೆ ಪ್ರಾರಂಭವಾಗುತ್ತದೆ, ಬಾಲುಬೆನ್ ಅವರ ಪತಿ ಮತ್ತು ವೌಥಾದ ಇತರ 50 ದಲಿತ ಪುರುಷರು ಸೇರಿ ಚಳಿಗಾಲದಲ್ಲಿ ಒಟ್ಟು 100 ಎಕರೆ ಬಂಜರು ಭೂಮಿಯಲ್ಲಿ ಸ್ವಲ್ಪ ಭಾಗದಲ್ಲಿ ಬೆಳೆಯನ್ನು ಬೆಳೆಸಲು ನಿರ್ಧರಿಸಿದರು. ಅದರ ಮೇಲೆ ಔಪಚಾರಿಕ ಮಾಲೀಕತ್ವವನ್ನು ಸರ್ಕಾರ ಬಳಿ ಕೇಳುವುದು ಅವರ ಉದ್ದೇಶವಾಗಿತ್ತು, ಆದರೆ ಸ್ಥಳೀಯ ಮಟ್ಟದಲ್ಲಿ ತೀವ್ರ ದ್ವೇಷ ಎದುರಿಸಬೇಕಾಯಿತು. ಪಕ್ಕದ ಹಳ್ಳಿಗಳ ಹಲವಾರು ಮೇಲ್ಜಾತಿ ರಜಪೂತ ರೈತರು ತಮ್ಮ ಸ್ವಂತ ಕೃಷಿಗಾಗಿ ಬಹುತೇಕ ಎಲ್ಲಾ ಬಂಜರು ಭೂಮಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು ಜಮೀನು ತಮಗೆ ಸೇರಿದ್ದು ಎಂದು ದಬ್ಬಾಳಿಕೆ ನಡೆಸತೊಡಗಿದರು. ಸ್ಥಳೀಯವಾಗಿ ಈ ರಜಪೂತರನ್ನು ದರ್ಬಾರ್ ಎನ್ನುತ್ತಾರೆ.
“ದರ್ಬಾರ್ ರೈತರು ನಮ್ಮ ಪುರುಷರಿಗೆ ತೊಂದರೆ ನೀಡುತ್ತಿದ್ದರು, ಈ ಭೂಮಿಯಲ್ಲಿ ವ್ಯವಸಾಯ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಹಿಂಸಾಚಾರದ ಬೆದರಿಕೆ ಹಾಕುತ್ತಿದ್ದರು” ಎಂದು ಬಾಲುಬೆನ್ ಹೇಳುತ್ತಾರೆ. “ಆದರೆ ದರ್ಬಾರ್ಗಳು ಈಗಾಗಲೇ ಕೃಷಿ ಮಾಡಲು ತಮ್ಮದೇ ಆದ ಸಾಕಷ್ಟು ಭೂಮಿಯನ್ನು ಹೊಂದಿದ್ದಾರೆ ಮತ್ತು ನಾವು ಭೂರಹಿತರಾಗಿದ್ದೇವೆ. ಹಾಗಾದರೆ ನಮಗೂ ಸ್ವಲ್ಪ ಭೂಮಿ ಏಕೆ ಸಿಗಬಾರದು?” ಎನ್ನುವುದು ಅವರ ನ್ಯಾಯಯುತ ಪ್ರಶ್ನೆ.
ನಿರಂತರ ಐದು ವರ್ಷಗಳ ಕಾಲ ರಬಿ ಋತುವಿನ ಆರಂಭದಲ್ಲಿ ಹೊಲಗಳಿಂದ ಹೊರದಬ್ಬಲ್ಪಟ್ಟ ಪುರುಷರು ಆ ಭೂಮಿಯ ಮೇಲಿನ ಆಸೆಯನ್ನೇ ಕೈಬಿಟ್ಟರು. ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಭೂಮಿಯಿಂದ ದೂರ ಉಳಿದರು ಮತ್ತು ದರ್ಬಾರ್ ರೈತರು ಬಹುತೇಕ ಎಲ್ಲವನ್ನೂ ಸ್ವಾಧೀನಪಡಿಸಿಕೊಂಡರು. ಆ ಹತ್ತು ವರ್ಷಗಳಲ್ಲಿ ದಲಿತರು ಮತ್ತು ವೌಥಾದ ಇತರ ಭೂರಹಿತ ಗ್ರಾಮಸ್ಥರನ್ನು ದಿನಕ್ಕೆ ಕೇವಲ 50 ರೂಗಳಿಗೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಯಿತು. ಆದರೆ ಭೂಮಿಯೆಡೆಗಿನ ಅವರ ಪ್ರೀತಿ ಕರಗಿರಲಿಲ್ಲ, ತಮ್ಮಿಂದ ಸಾಧ್ಯವಾಗದ್ದನ್ನು ಮಹಿಳೆಯರು ಸಾಧಿಸಿ ತೋರಿಸುತ್ತಾರೆ ಎನ್ನುವ ನಂಬಿಕೆಯಿಂದ ಭೂಮಿಯ ಒಡೆತನಕ್ಕಾಗಿ ಹಕ್ಕು ಸ್ಥಾಪಿಸಲು ಮಹಿಳೆಯರನ್ನು ಕೇಳಿಕೊಂಡರು.
ಈ ಬಗ್ಗೆ ಮಾತಾನಾಡಿದ ಬಾಲುಬೆನ್ ” ಪುರುಷರ ಬದಲಿಗೆ ನಾವು ಭೂಮಿಯಲ್ಲಿ ಕೃಷಿ ಮಾಡಬೇಕೆಂದು ಪುರುಷರು ಸಲಹೆ ನೀಡಿದರು” ಎಂದು ಹೇಳುತ್ತಾರೆ. ದರ್ಬಾರ್ ರೈತರು ಮಹಿಳೆಯರಿಗೆ ಸಮಸ್ಯೆ ಒಡ್ಡಲಾರರು ಮತ್ತು ಸರ್ಕಾರಿ ಅಧಿಕಾರಿಗಳು ಸಹ ಮಹಿಳೆಯರಿಗೆ ಸಂಥಾನಿ ಭೂಮಿಯನ್ನು ನೀಡುವ ಸಾಧ್ಯತೆ ಹೆಚ್ಚು ಎಂದು ದಲಿತರು ನಂಬಿದ್ದರು.

ಆದರೆ ಅವರ ನಂಬಿಕೆ ಸುಳ್ಳು ಎಂದು ಸಾಬೀತಾಗಲು ಹೆಚ್ಚಿನ ಸಮಯ ತಗುಲಲಿಲ್ಲ. 2009 ರ ಚಳಿಗಾಲದಲ್ಲಿ, ಮಹಿಳೆಯರು ಮೊದಲು ಕೆಲವು ಎಕರೆ ಬಂಜರು ಭೂಮಿಯಲ್ಲಿ ಬೆಳೆಯಲು ಪ್ರಯತ್ನಿಸಿದಾಗ ದರ್ಬಾರ್ ರೈತರು ಅವರನ್ನು ಪುರುಷರನ್ನು ನಡೆಸಿಕೊಂಡಷ್ಟೇ ಆಕ್ರಮಣಕಾರಿಯಾಗಿ ನಡೆಸಿಕೊಂಡರು.
“ಅವರು ನಮ್ಮನ್ನು ಹೊಡೆಯಲು ಕೋಲುಗಳೊಂದಿಗೆ ಬಂದರು” ಎಂದು ಮಹಿಳಾ ಮಂಡಳಿಯ ಸದಸ್ಯರಾದ 70 ವರ್ಷದ ಮಣಿಬೆನ್ ಸೋಲಂಕಿ ಹೇಳುತ್ತಾರೆ. “ಆದರೆ ನಾವು ಹೆದರಲಿಲ್ಲ. ನಾವು ಸಹಾಯ ಮತ್ತು ರಕ್ಷಣೆ ಪಡೆಯಲು ನಿರ್ಧರಿಸಿದೆವು” ಎಂದಿದ್ದಾರೆ.
ಆನಂತರ ಗುಜರಾತ್ನಾದ್ಯಂತ ಸದಸ್ಯರನ್ನು ಹೊಂದಿರುವ ಪ್ರಸಿದ್ಧ ದಲಿತ ಹಕ್ಕುಗಳ ಸಂಘಟನೆಯಾದ ‘ನವಸರ್ಜನ್’ನಿಂದ ಸಹಾಯ ಕೋರಿದರು. ವೌಥಾ ಮಹಿಳೆಯರು ಅವರನ್ನು ಸಂಪರ್ಕಿಸಿದ ಸುಮಾರು ಒಂದು ವರ್ಷದ ನಂತರ, ನವಸರ್ಜನ್ ಕಾರ್ಯಕರ್ತರು ಜಿಲ್ಲೆಯಾದ್ಯಂತ 50 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಸಜ್ಜುಗೊಳಿಸಿದರು, ಮಹಿಳೆಯರು ಬಂಜರು ಭೂಮಿಯಲ್ಲಿ ಕೃಷಿ ಮಾಡುವಾಗ ಅವರ ಸುತ್ತಲೂ ಕಾವಲು ಕಾಯುತ್ತಿದ್ದರು. “ಅಂತಿಮವಾಗಿ ದರ್ಬಾರ್ ರೈತರು ಶಾಂತಿಯಿಂದ ಕೃಷಿ ಮಾಡಲು ನಮ್ಮನ್ನು ಬಿಟ್ಟರು” ಎಂದು ಮಣಿಬೆನ್ ಹೇಳುತ್ತಾರೆ.
ಈಗ ಅವರ ಹಿಡಿತದಲ್ಲಿ 36 ಎಕರೆ ಇದ್ದು, ವೌಥಾದ ದಲಿತ ಮಹಿಳೆಯರು ತಮ್ಮ ಕುಟುಂಬದ ಪ್ರಾಥಮಿಕ ಅನ್ನದಾತರಾಗಿದ್ದಾರೆ. ಕ್ಯಾಸ್ಟರ್, ಹತ್ತಿ, ಗೋಧಿ ಮತ್ತು ಇತರ ಬೆಳೆಗಳನ್ನು ಬೆಳೆಯುವ ಮೂಲಕ ಪ್ರತಿ ಬೆಳೆ ಋತುವಿನಲ್ಲಿ ಒಟ್ಟಾರೆಯಾಗಿ ರೂ 3 ಲಕ್ಷದವರೆಗೆ ಗಳಿಸುತ್ತಾರೆ. “ನಾವು ಪ್ರತಿಯೊಬ್ಬರೂ ನಮ್ಮ ಕೆಲಸಕ್ಕೆ ದಿನಕ್ಕೆ 200 ರೂಪಾಯಿಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಪ್ರತಿ ಸದಸ್ಯರು ಪ್ರತಿ ವರ್ಷ 80 ರಿಂದ 100 ಕೆಜಿ ಧಾನ್ಯವನ್ನು ಪಡೆಯುತ್ತಾರೆ” ಎಂದು ಹೇಳುವ ಬಾಲುಬೆನ್ “ಉಳಿದ ಧಾನ್ಯವನ್ನು ನಾವು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ” ಎನ್ನುತ್ತಾರೆ.
ಇಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳಾಗಲೀ, ದರ್ಬಾರ್ ರೈತರಾಗಲೀ ಬಂಜರು ಭೂಮಿಯಲ್ಲಿ ಸಾಗುವಳಿ ಮಾಡುವುದನ್ನು ವಿರೋಧಿಸಿಲ್ಲ. ಆದರೆ ತಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮತ್ತು ಕೃಷಿ ಸಾಲ ಮತ್ತು ಇತರ ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವಂತೆ, ಮಹಿಳೆಯರು ಸಂಥಾನಿ ಯೋಜನೆಯಡಿ ಭೂ ಮಾಲೀಕತ್ವವನ್ನು ಬಯಸುತ್ತಾರೆ.
“ಆದರೆ ನಮ್ಮ ಅರ್ಜಿಯು ವರ್ಷಗಳಿಂದ ಮೂಲೆಗೆ ಬಿದ್ದಿದೆ. ಅದು ಎಲ್ಲಿದೆ ಎಂದೂ ನಮಗೆ ತಿಳಿದಿಲ್ಲ” ಎಂದು ಬಾಲುಬೆನ್ ಹೇಳುತ್ತಾರೆ.

ಈ ಬಗ್ಗೆ ಭೂ ಮಾಲೀಕತ್ವದ ಅರ್ಜಿಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುವ ಅಹಮದಾಬಾದ್ ಕಲೆಕ್ಟರೇಟ್ನಲ್ಲಿ ಅಧಿಕಾರಿಗಳ ಕೇಳುವಾಗ ಯಾವುದೇ ವಿವರಗಳನ್ನು ಹೊಂದಿಲ್ಲ ಎನ್ನುತ್ತಾರೆ. ಗಾಂಧಿನಗರದಲ್ಲಿನ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳು ಸಹ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. “ಈ ಮಹಿಳೆಯರ ಅರ್ಜಿಗಳು ಕಲೆಕ್ಟರೇಟ್ ಮಟ್ಟದಲ್ಲಿ ಚಲಾವಣೆಯಲ್ಲಿರಬೇಕು. ಇದು ಇಲ್ಲಿಗೆ ತಲುಪಿಲ್ಲ ಎಂದು ನಾನು ಭಾವಿಸುತ್ತೇನೆ”ಎಂದು ಕಂದಾಯ ಇಲಾಖೆಯ ಭೂ ವಿಭಾಗದ ವಿಭಾಗ ಅಧಿಕಾರಿ ಪ್ರಿಯಾಂಕ್ ಗೋಸ್ವಾಮಿ ಹೇಳಿರುವುದಾಗಿ ‘ಸ್ಕ್ರೋಲ್.ಇನ್ ವರದಿ ಮಾಡಿದೆ. ಸಂಥಾನಿ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರವು ಭೂ ಹಂಚಿಕೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುತ್ತದೆ, ಆದರೆ ನಿರ್ದಿಷ್ಟವಾಗಿ ಮಹಿಳೆಯರಿಗೆ ಆದ್ಯತೆ ನೀಡುವುದಿಲ್ಲ ಎಂದು ಗೋಸ್ವಾಮಿ ಪ್ರತಿಪಾದಿಸಿದರು.
ಇತ್ತೀಚಿನ ವರ್ಷಗಳಲ್ಲಿ ವಿತರಿಸಲು ಲಭ್ಯವಿರುವ ಸರ್ಕಾರಿ ಪಾಳುಭೂಮಿಯ ಸಾಮಾನ್ಯ ಕೊರತೆಯನ್ನು ರಾಜ್ಯ ಕಂಡಿದೆ ಎಂದು ಅವರು ಹೇಳುತ್ತಾರೆ. “ಭೂಮಿಯ ಕೊರತೆಯಿಂದಾಗಿ, ಕಳೆದ 10 ಅಥವಾ 15 ವರ್ಷಗಳಲ್ಲಿ ಸರ್ಕಾರವು ಯಾವುದೇ ಹೊಸ ಸಂಥಾನಿ ಹಂಚಿಕೆಗಳನ್ನು ಮಾಡಿಲ್ಲ” ಎಂದು ಗೋಸ್ವಾಮಿ ಹೇಳಿದ್ದಾರೆ. ಆದರೆ ಇದೇ ವೇಳೆ ನೂರಾರು ಎಕರೆ ಭೂಮಿಗಳನ್ನು ರಾಜ್ಯದ ಶ್ರೀಮಂತರಿಗೆ ನೀಡಲಾಗಿದೆ ಎಂಂಬ ದೂರೂ ಕೇಳಿಬರುತ್ತಿದೆ.
ರಾಜ್ಯ ಸರ್ಕಾರವು 2020 ರಲ್ಲಿ ಜಾರಿಗೆ ತಂದ ಭೂಕಬಳಿಕೆ (ನಿಷೇಧ) ಕಾಯಿದೆ ಜಾರಿಗೆ ತಂದಿದ್ದು ಇದರ ಪ್ರಕಾರ ಇತರರಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸುವವರು 10ರಿಂದ 14 ವರ್ಷ ಜೈಲುಶಿಕ್ಷೆಗೆ ಗುರಿಯಾಗಲಿದ್ದಾರೆ. ಈ ನಿಯಮ ಜಾರಿಗೆ ಬಂದ ನಂತರವೂ ಬಾಲುಬೆನ್ ಮತ್ತು ಅವರ ಗುಂಪು ಸುತ್ತಮುತ್ತಲಿನ ಮೇಲ್ಜಾತಿ ಪುರುಷರಿಂದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಆದರೆ ಈ ಬೆದರಿಕೆಗೆ ಜಗ್ಗದ ಬಾಲುಬೆನ್ “ನಮಗೆ ಬೇಕಾಗಿರುವುದು ನಮ್ಮ ಹೆಸರಿನಲ್ಲಿ ಸ್ವಲ್ಪ ಭೂಮಿಯನ್ನು ಹೊಂದುವುದು ಮಾತ್ರ” ಎನ್ನುತ್ತಾರೆ.
ಮೂಲ: ಸ್ಕ್ರೋಲ್.ಇನ್