ಗುಜರಾತ್ನಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ತೆರೆ ಬಿದ್ದಿದೆ. 5 ವರ್ಷ ಅಧಿಕಾರ ಅನುಭವಿಸಬೇಕಾದ ರೂಪಾನಿ ಸಿಎಂ ಪಟ್ಟದಿಂದ ಕೆಳಗಿಳಿದಿದ್ದಾರೆ. ಆದರೆ, ಬಿಜೆಪಿಯ ಈ ನಿರ್ಣಯ 2022ರ ಗುಜರಾತ್ ಚುನಾವಣೆಯ ಭವಿಷ್ಯ ಬರೆಯಲಿದೆ.
ಬಿಜೆಪಿ ಪಾಳೆಯದಲ್ಲಿ ಬದಲಾವಣೆ ಪರ್ವ ಚಾಲ್ತಿಯಲ್ಲಿದೆ. ಉತ್ತರಾಖಂಡ್, ಕರ್ನಾಟಕದ ಬಳಿಕ ಗುಜರಾತ್ನಲ್ಲೂ ಮುಖ್ಯಮಂತ್ರಿ ಬದಲಾವಣೆ ನಾಟಕ ಮುಂದುವರೆದಿದೆ. ಕಳೆದ ಹಲವು ದಿನಗಳಿಂದ ಒಳಗೊಳಗೆ ನಾಟಕ ಕಾಣುತ್ತಿದ್ದ ಗಾಂಧಿ ನಾಡಲ್ಲಿ ಇಂದು ದೀಢಿರ್ ರಾಜಕೀಯ ಸಂಚಲನ ಮೂಡಿದೆ. ಹೊಸ ಉತ್ಸಾಹ, ಹೊಸ ಪರಿಕಲ್ಪನೆಯೊಂದಿಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮುಂದುವರೆಯಬೇಕು. ಇದನ್ನ ಗಮದಲ್ಲಿಟ್ಟುಕೊಂಡು ನಾನು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿದ್ದೇನೆ ಎಂದು ರುಪಾನಿ ಹೇಳಿರುವುದಂತೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮುಂದಿನ ವಿಭಾನಸಭಾ ಚುನಾವಣೆಗೆ ಇನ್ನೇನು 15 ತಿಂಗಳು ಬಾಕಿ ಇರುವಾಗಲೇ ಗುಜರಾತ್ನಲ್ಲಿ ಇಂತಹ ಬೆಳವಣಿಗೆಯಾಗಿದೆ. ಸಿಎಂ ಸ್ಥಾನಕ್ಕೆ ವಿಜಯ್ ರುಪಾನಿ ರಾಜೀನಾಮೆ ನೀಡಿದ್ದಾರೆ. ಮಧ್ಯಾಹ್ನ ರಾಜ್ಯಪಾಲರಿಗೆ ರುಪಾನಿ ರಾಜೀನಾಮೆ ಕೊಟ್ಟಿದ್ದಾರೆ. ಈ ಮೂಲಕ ಗುಜರಾತ್ ಮುಖ್ಯಮಂತ್ರಿಯಾಗಿ ಬರೋಬ್ಬರಿ 5 ವರ್ಷ ಅಧಿಕಾರ ನಡೆಸಿದ ರೂಪಾನಿ ಸಿಎಂ ಸ್ಥಾನದಿಂದ ಕೆಳಗಿಳಿದ್ದಾರೆ.
Watch Live Video : 10 ದಿನಗಳ ವಿಧಾನ ಮಂಡಲ ಅಧಿವೇಶನ : ಅಧಿವೇಶನದ ಮೊದಲನೇ ದಿನದ ಕಲಾಪ ಲೈವ್ ವೀಕ್ಷಿಸಲುಇಲ್ಲಿಕ್ಲಿಕ್ ಮಾಡಿ
ಗುಜರಾತ್ ವಿಕಾಸ ಯಾತ್ರೆಯಲ್ಲಿ ಕಳೆದ ಐದು ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ಕೊಟ್ಟ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಹೊಸ ಪರಿಕಲ್ಪನೆ ಜತೆಗೆ ಮೋದಿ ನೇತೃತ್ವದಲ್ಲಿ ಮುಂದುವರೆಯಬೇಕು. ಹಾಗಾಗಿ ನಾನು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿದ್ದೇನೆ ಎಂದಿದ್ದಾರೆ ರುಪಾನಿ.
ಹೀಗೆ 5 ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ಕೊಟ್ಟ ಎಲ್ಲಾ ಹೈಕಮಾಂಡ್ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ, ಇದು ಒಂದೇ ದಿನದ ನಿರ್ಧಾರ ಅಲ್ಲವೇ ಅಲ್ಲ. 2022ರ ಗುಜರಾತ್ ಚುನಾವಣೆ ದೃಷ್ಟಿ, ಪಕ್ಷ ಸಂಘಟನೆ ಹೀಗೆ ಹತ್ತು ಹಲವು ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಧಾರ.
ಇನ್ನು, ಇತ್ತೀಚೆಗೆ ಅಮಿತ್ ಶಾ ನೇತೃತ್ವದ ಕೋರ್ ಕಮಿಟಿ ಸಭೆಯಲ್ಲೇ ರುಪಾನಿ ರಾಜೀನಾಮೆ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿದೆ. ಮತ್ತೊಂದೆಡೆ ಮುಂದಿನ ವರ್ಷದ ಚುನಾವಣೆಗೆ ಹೈಕಮಾಂಡ್ ನಾಯಕರು ಕೆಲ ಬದಲಾವಣೆಗಳನ್ನ ಮಾಡುತ್ತಿದ್ದಾರೆ. ಅದರ ಭಾಗವಾಗಿ ರುಪಾನಿ ರಾಜೀನಾಮೆಯೇ ಒಂದು.
ಗುಜರಾತ್ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಭಾರೀ ಸಿದ್ಧತೆ ಮಾಡಿಕೊಂಡಿದೆ. ಮತ್ತೊಮ್ಮೆ ಅಧಿಕಾರಕ್ಕೆ ಏರಲು ಒಂದೂವರೆ ವರ್ಷ ಬಾಕಿ ಇರುವಾಗಲೇ ಬಿಜೆಪಿ, ಪಕ್ಷ ಸಂಘಟನೆಯತ್ತ ಚಿತ್ತ ಹರಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದಂತೆ, ಗುಜರಾತ್ನಲ್ಲಿ ಪಾಟೀದಾರ್ ಸಮುದಾಯ ಆಕರ್ಷಿಸಲು ಬಿಜೆಪಿ ಕೆಲ ಬದಲಾವಣೆ ಮಾಡ್ಕೊಂಡಿದೆ. ಅದರ ಜೊತೆಗೆ ಯುವ ತಂಡ ಕಟ್ಟಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಅದರ ಭಾಗವಾಗಿ ರೂಪಾನಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗೆ ಸಿಎಂ ಸ್ಥಾನಕ್ಕೆ ರೂಪಾನಿ ರಾಜೀನಾಮೆ ನೀಡ್ತಿದ್ದಂತೆ ಗುಜರಾತ್ನಲ್ಲಿ ಕ್ಷಣಕ್ಕೊಂದು ಬೆಳವಣಿಗೆ ಕಾಣಿಸಿಕೊಂಡಿದೆ. ಅಚ್ಚರಿಯ ಆಯ್ಕೆಯ ಮೂಲಕ ಗುಜರಾತ್ ರಾಜಕೀಯ ಪಾಳಯಕ್ಕೆ ಮೋದಿ-ಶಾ ಜೋಡಿ ಶಾಕ್ ಕೊಟ್ಟಿದೆ. ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಖ್ಯಾತಿಯಾಗಿರುವ ಶಾಸಕ ಭೂಪೇಂದ್ರ ಪಟೇಲರನ್ನು ಆಯ್ಕೆ ಮಾಡಿದೆ. ಗುಜರಾತ್ 17ನೇ ಮುಖ್ಯಮಂತ್ರಿಯಾಗಿ ಪಾಟೀದಾರ ಸಮುದಾಯದ ಪ್ರಬಲ ನಾಯಕ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ಈ ಮೂಲಕ ಜಾತಿಯ ದಾಳವನ್ನು ಹೈಕಮಾಂಡ್ ಉರುಳಿಸಿದೆ.
ಈ ಹಿಂದೆ ಪಾಟೀದಾರ್ ಸಮುದಾಯದ ನಾಯಕ, ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಿಎಂ ರೇಸ್ನಲ್ಲಿ ಮೊದಲಿದ್ದರು. ನಂತರದಲ್ಲಿ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ, ಆರ್.ಸಿ. ಫಾಲ್ದು ಹೆಸರು ಕೇಳಿ ಬಂದಿತ್ತು. ಇದರ ಜೊತೆಗೆ ಗುಜರಾತ್ ಡಿಸಿಎಂ ನಿತೀನ್ ಪಟೇಲ್, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಟೇಲ್, ಗೃಹ ಸಚಿವ ಗೋವರ್ಧನ್ ಜಡಪಿಯಾ ಹೆಸರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಮುನ್ನಲೆಯಲ್ಲಿತ್ತು. ಆದರೆ, ಭೂಪೇಂದ್ರ ಪಟೇಲ್ರನ್ನು ಬಿಜೆಪಿ ಆಯ್ಕೆ ಮಾಡಿತು.
ಇದರ ನಡುವೆ ಹೊಸ ಟೀಂ ಕಟ್ಟಲು ಚಿಂತನೆಯಲ್ಲಿರೋ ಬಿಜೆಪಿ ಹೈಕಮಾಂಡ್, ರುಪಾನಿ ಸಂಪುಟದಲ್ಲಿದ್ದ 5 ರಿಂದ 6 ಹಿರಿಯ ಸಚಿವರಿಗೆ ಕೋಕ್ ನೀಡಲಾಗುವುದು. ಹೊಸಬರನ್ನ ಸಂಪುಟಕ್ಕೆ ಸೇರ್ಪಡೆ ಮಾಡಲಾಗುವುದು ಎಂದಿದೆ. ಈ ಮೂಲಕ ಪಕ್ಷದಲ್ಲಿದ್ದ ಅಸಮಾಧಾನದ ಮುನಿಸನ್ನು ಶಮನ ಮಾಡೋದು, ಮುಂದಿನ ಚುನಾವಣೆ ದೃಷ್ಟಿಯಲ್ಲಿ ಇಟ್ಕೊಂಡು ಹೈಕಮಾಂಡ್ ಮಹತ್ವದ ನಿರ್ಣಯ ತೆಗೆದುಕೊಂಡಿದೆ.