
ದೇಶದಲ್ಲೇ ಸಂಪೂರ್ಣ ಪಾನನಿಷೇಧ ಹೇರಿದ್ದ ಗುಜರಾತ್ ಈಗ ಭಾಗಶಃ ಮುಕ್ತವಾಗಿದೆ
(ಲೀನಾ ಮಿಶ್ರ-ರಿತು ಶರ್ಮ ಇಂಡಿಯನ್ ಎಕ್ಸ್‌ಪ್ರೆಸ್ 31 ಜನವರಿ 2025 ಮತ್ತಿತರ ವರದಿಗಳ ಆಧಾರ)
ರಾಷ್ಟ್ರಪಿತ ಮಹಾತ್ಮ ಗಾಂಧಿ ತಮ್ಮ ಕೊನೆಯುಸಿರಿನವರೆಗೂ ಕಟ್ಟುನಿಟ್ಟಾಗಿ, ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಮಹತ್ವದ ನೀತಿ ಎಂದರೆ ಮದ್ಯಪಾನವನ್ನು ವಿರೋಧಿಸುವುದು, ಅಹಿಂಸೆ ಮತ್ತು ಸತ್ಯಕ್ಕಾಗಿ ಹೋರಾಡುವುದು. ರಾಜಕೀಯವಾಗಿ ಹಲವು ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಮೂರು ವಿಚಾರಗಳಲ್ಲಿ ಗಾಂಧಿ ಪ್ರಶ್ನಾತೀತರಾಗಿದ್ದರು. ಈ ಕಾರಣಕ್ಕಾಗಿಯೇ ಅವರ ಜನ್ಮಸ್ಥಾನವಾದ ಗುಜರಾತ್ ರಾಜ್ಯದಲ್ಲಿ 1949ರಲ್ಲಿ ದೇಶದ ಮೊತ್ತಮೊದಲ ಪಾನನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಯಿತು. 1960 ರಿಂದ ಈ ಕಾಯ್ದೆಯನ್ನು ಮತ್ತಷ್ಟು ಬಿಗಿಪಡಿಸಲಾಗಿದ್ದು, ಮದ್ಯಪಾನ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿ ಮೂರು ವರ್ಷಗಳ ಸೆರೆವಾಸದ ಶಿಕ್ಷೆಯನ್ನೂ ವಿಧಿಸಲು ಕಾನೂನು ಜಾರಿಗೊಳಿಸಲಾಗಿತ್ತು.
ಆದರೆ ಬದಲಾಗುತ್ತಿರುವ ಭಾರತದಲ್ಲಿ ಆಧುನಿಕತೆಯ ಉತ್ಕರ್ಷದೊಡನೆಯೇ, ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಯೂ ಸಹ ರೂಪಾಂತರಗೊಂಡಿದ್ದು, ಸರ್ಕಾರಗಳ ಮುಖ್ಯ ಗುರಿ ಬಂಡವಾಳ ಹೂಡಿಕೆ, ಔದ್ಯಮಿಕ ಲಾಭಗಳಿಕೆ ಮತ್ತು ಮಾರುಕಟ್ಟೆ ವಿಸ್ತರಣೆ ಮೂಲ ಮಂತ್ರವಾಗಿದೆ. ಇಂದು ಗಾಂಧಿ ತತ್ವವನ್ನು ತತ್ವಶಃ ಅನುಸರಿಸುವ ಯಾವ ರಾಜಕೀಯ ಪಕ್ಷವೂ ಮದ್ಯಪಾನ ನಿಷೇಧಕ್ಕೆ ದನಿಗೂಡಿಸುವುದಿಲ್ಲ. ಗಾಂಧಿವಾದಿ ಅಣ್ಣಾ ಹಜಾರೆ ಗರಡಿಯಲ್ಲಿ ಪಳಗಿದ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಿದ್ದು ಮದ್ಯಪಾನ ನೀತಿಯನ್ನೇ, ಅವರ ಅವನತಿಗೆ ಕಾರಣವಾಗಿದ್ದೂ ಇದೇ ಲಿಕ್ಕರ್ ಹಗರಣದಿಂದ. ಇದಕ್ಕೆ ಕಾರಣ ಲಿಕ್ಕರ್ ಅಥವಾ ಮದ್ಯದ ವ್ಯಾಪಾರದಲ್ಲಿ ಉತ್ಪಾದಕರಿಗೆ, ವಿತರಕರಿಗೆ ಮತ್ತು ಚಿಲ್ಲರೆ ಮಾರಾಟಗಾರರಿಗೆ ಎಷ್ಟು ಲಾಭ ಇದೆಯೋ ಅದಕ್ಕೆ ಸಮಾನಾಂತರವಾದ ಆದಾಯ ಸರ್ಕಾರಗಳ ಬೊಕ್ಕಸಕ್ಕೂ ಸಂದಾಯವಾಗುತ್ತದೆ.

ಹಾಗಾಗಿ ಅಕ್ಟೋಬರ್ 2 ಗಾಂಧಿ ಹುಟ್ಟಿದ ದಿನ ಮತ್ತು ಜನವರಿ 30 ಹುತಾತ್ಮರಾದ ದಿನಗಳನ್ನು ಹೊರತುಪಡಿಸಿ ಯಾವ ಸರ್ಕಾರವೂ ಪಾನ ನಿಷೇಧದ ಬಗ್ಗೆ ಸೊಲ್ಲೆತ್ತುವುದಿಲ್ಲ. ಅತಿ ಹೆಚ್ಚು ಆದಾಯ ಮತ್ತು ತೆರಿಗೆಯ ಮೂಲ ಆಗಿರುವ ಮದ್ಯದ ವಹಿವಾಟು ಸರ್ಕಾರಗಳ ಪಾಲಿಗೆ ಕಾಮಧೇನು ಎನಿಸಿಬಿಟ್ಟಿದೆ. ಈ ಮಾರುಕಟ್ಟೆ ನೀತಿಗೆ ಗಾಂಧಿ ಹುಟ್ಟಿದ ಗುಜರಾತ್ ಸಹ ಹೊರತಾಗಿಲ್ಲ. ಗುಜರಾತ್‌ನಲ್ಲಿ ಪಾನ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ 2023ರ ಡಿಸೆಂಬರ್ 30ರಂದು ಅಲ್ಲಿನ ಬಿಜೆಪಿ ಸರ್ಕಾರ Gift City (Gujarat International Finance-Tec City) ಎಂದು ವರ್ಗೀಕರಿಸಲಾದ ತಂತ್ರಜ್ಞಾನ-ಹಣಕಾಸು- ಔದ್ಯೋಗಿಕ ವಲಯದ ನಾಲ್ಕು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯಸೇವನೆ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿತ್ತು. ರಾಜ್ಯದ ಇತರ ಭಾಗಗಳಲ್ಲಿ 40 ವರ್ಷಗಳನ್ನು ದಾಟಿದವರು ಮದ್ಯಪಾನ ಮಾಡುವ ಅವಕಾಶ ಪಡೆದಿದ್ದರು. ಆದರೆ Gift City ಯಲ್ಲಿ ಈ ವಯೋಮಾನವನ್ನು 21 ವರ್ಷಗಳಿಗೆ ನಿಗದಿಪಡಿಸಲಾಗಿತ್ತು.
ಇಲ್ಲಿ ಸ್ಥಾಪಿಸಲಾಗುವ ಉದ್ಯಮಗಳ ಮಾನವ ಸಂಪನ್ಮೂಲ ವಿಭಾಗಗಳ ಶಿಫಾರಸುಗಳನ್ನು ಆಧರಿಸಿ ಮದ್ಯ ಮಾರಾಟದ ಪರವಾನಗಿಗಳನ್ನು ನೀಡಲಾಗುತ್ತದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಲಬ್‌ಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜಾಗತಿಕ ಹಣಕಾಸು ಸಂಸ್ಥೆಗಳನ್ನು ಆಕರ್ಷಿಸುವ ಸಲುವಾಗಿ ಈ ಪ್ರಾಂತ್ಯದಲ್ಲಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಸರ್ಕಾರದ ಅಭಿಪ್ರಾಯದಲ್ಲಿ ಯುವ ಪ್ರತಿಭೆಗಳನ್ನು ಆಕರ್ಷಿಸಲು (!!!) ಮತ್ತು ಜಾಗತಿಕ ಉದ್ಯಮಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಈ ಮದ್ಯಸೇವನೆಯ ಪರವಾನಗಿಗಳನ್ನು ವಿತರಿಸುವ ಜವಾಬ್ದಾರಿಯನ್ನು ಗಾಂಧಿನಗರದ ಜಿಲ್ಲಾಧಿಕಾರಿ ಮತ್ತು ಪಾನ ನಿಷೇಧ ನಿರ್ದೇಶಕರ ಸಮಿತಿಯೊಂದನ್ನು ರಚಿಸಲಾಗಿದೆ. ರಾಜ್ಯ ಸರ್ಕಾರವು ರೂಪಿಸಿರುವ Liquor Accesss Permit ಕೇವಲ GIFT cityಗೆ ಮಾತ್ರ ಅನ್ವಯಿಸುತ್ತದೆ.

GIFT city ಯಲ್ಲಿ 670 ಉದ್ಯಮಗಳು ಸ್ಥಾಪನೆಯಾಗಿದ್ದು ಗೂಗಲ್, ಬ್ಯಾಂಕ್ ಆಫ್ ಅಮೆರಿಕ, ಒರಾಕಲ್, ಐಬಿಎಮ್, ಸ್ಟಾಂಡರ್ಡ್ ಚಾರ್ಟರ್ಡ್ ಮತ್ತಿತರ ಪ್ರತಿಷ್ಠಿತ ಕಂಪನಿಗಳು , 25 ಸಾವಿರಕ್ಕೂ ಹೆಚ್ಚು ನೌಕರರನ್ನು ನೇಮಕ ಮಾಡಿವೆ. ಇದರೊಂದಿಗೆ ಮುಂಬೈನ ಲೀಲಾವತಿ ಸಮೂಹದ 300 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ , ಹ್ಯಾಟ್ ಸಮೂಹದ ಹೋಟೆಲ್, ಸೆಂಟ್ರಲ್ ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಇಲ್ಲಿ ನೆಲೆಮಾಡಿಕೊಂಡಿವೆ. ಇಲ್ಲಿ ನೌಕರರು GIFT ಸಿಟಿ ಕಚೇರಿಯ ಕೆಲಸವನ್ನು ತೊರೆದ ಕೂಡಲೇ ಮದ್ಯಪಾನದ ಪರವಾನಗಿಯನ್ನೂ ಕಳೆದುಕೊಳ್ಳುತ್ತಾರೆ. 703 ಪರವಾನಗಿಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮದ್ಯಪಾನ ನಿಷೇಧವು ಈ ಸಿಟಿಯಲ್ಲಿ ವ್ಯಾಪಾರ ನಡೆಸಲು ದೊಡ್ಡ ತೊಡಕಾಗಿ ಪರಿಣಮಿಸಿತ್ತು ಎಂದೂ ಈ ಹೊಸ ನೀತಿಯ ಸಮರ್ಥಕರು ಹೇಳುತ್ತಾರೆ.
ಗುಜರಾತ್‌ನಲ್ಲಿ ಮದ್ಯಪಾನ ಮಾಡಲು ಮೂರು ವಯೋಮಾನದ ಮಿತಿಗಳನ್ನು ನಿಗದಿಪಡಿಸಲಾಗಿದೆ. 40 ರಿಂದ 65 ವರ್ಷದೊಳಗಿನವರು, 65 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಹೊರರಾಜ್ಯದ 65 ವರ್ಷಕ್ಕೆ ಮೇಲ್ಪಟ್ಟವರು. ಪ್ರವಾಸಿಗರು, ರಾಜ್ಯಕ್ಕೆ ಭೇಟಿ ನೀಡುವವರು ಮತ್ತು ವಿದೇಶೀಯರು ಈ ಯಾವುದೇ ನಿಬಂಧನೆಗಳಿಗೆ ಒಳಪಡುವುದಿಲ್ಲ. GIFT ಸಿಟಿಯಲ್ಲಿರುವ ಗ್ರಾಂಡ್ ಮರ್ಕೂರಿ ಹೋಟೆಲ್ ಮತ್ತು GIFT ಸಿಟಿ ಕ್ಲಬ್ ಎಂಬ ವಾಣಿಜ್ಯ ಕ್ಲಬ್ ಈ ಎರಡು ಸಂಸ್ಥೆಗಳಲ್ಲಿ ಭೋಜನದ ಜೊತೆಗೆ ಮದ್ಯಪಾನವನ್ನೂ ಒದಗಿಸಲು ಅನುಮತಿ ನೀಡಲಾಗಿದೆ. ಈ ನೂತನ ನಿಯಮಗಳು ಜಾರಿಯಾದ ಒಂದು ವರ್ಷದ ಒಳಗೇ ಸಾಕಷ್ಟು ಬೆಳವಣಿಗೆಗಳಾಗಿವೆ.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ವರದಿ ಮಾಡಿರುವಂತೆ ಗುಜರಾತ್‌ನ ನಿಷೇಧ ಮತ್ತು ಅಬಕಾರಿ ಇಲಾಖೆಯು ನೀಡಿರುವ ಮಾಹಿತಿಯ ಅನುಸಾರ 2024ರ ಡಿಸೆಂಬರ್ 31ರ ವೇಳೆಗೆ 45,187 ಆರೋಗ್ಯ ಪರವಾನಗಿಗಳನ್ನು ವಿತರಿಸಲಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಅಬಕಾರಿ ಆದಾಯವಾಗಿ 142.06 ಕೋಟಿ ರೂಗಳು ಸಂಗ್ರಹವಾಗಿದೆ. 77 ಹೋಟೆಲುಗಳು ಕಾನೂನಾತ್ಮಕವಾಗಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗಿದ್ದು, ಪರವಾನಗಿ ಇರುವವರಿಗೆ ಮಾತ್ರ ಮಾರಾಟ ಮಾಡಬಹುದಾಗಿದೆ. 2024ರಲ್ಲಿ ನಿವಾಸಿ ಪರವಾನಿಗಳ ರೂಪದಲ್ಲಿ 3,661 ತಾತ್ಕಾಲಿಕ ಪರವಾನಗಿ ನೀಡಲಾಗಿದ್ದು ಇದರಲ್ಲಿ ವಿದೇಶೀಯರೂ ಸೇರಿದ್ದಾರೆ. 4,569 ಏಳು ದಿನದ ಪರವಾನಗಿ ಮತ್ತು 7,843 ಮಾಸಿಕ ಪರವಾನಗಿಯನ್ನು ವಿತರಿಸಲಾಗಿದೆ. ಅದರೆ ಮದ್ಯ ಮಾರಾಟಗಾರರ ವ್ಯಾಪಾರ ವೃದ್ಧಿಸುತ್ತಿದೆಯಾದರೂ, ಮಾರಾಟದ ಪ್ರಮಾಣ ಕಳೆದ ವರ್ಷದಲ್ಲಿ ಕೇವಲ ಶೇಕಡಾ 15ರಷ್ಟು ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಆಮದು ಸುಂಕದ ಹೆಚ್ಚಳದ ಪರಿಣಾಮ ಆಮದು ಪ್ರಮಾಣ ಕಡಿಮೆಯಾಗಿದೆ.
