ಮತ್ತೊಂದು ಅತಿದೊಡ್ಡ ಬ್ಯಾಂಕ್ ವಂಚನೆ ನಡೆದಿದೆ. ವಂಚನೆ ಮೊತ್ತವು 22,842 ಕೋಟಿ ರೂಪಾಯಿಗಳು. ಎಂದಿನಂತೆ ಈ ವಂಚನೆ ಮಾಡಿರುವುದೂ ಪ್ರಧಾನಿ ನೇರಂದ್ರಮೋದಿ ಅವರು ಪ್ರತಿನಿಧಿಸುವ ರಾಜ್ಯ ಗುಜರಾತ್ ಮೂಲದ ಉದ್ಯಮಿಗಳು. ಗುಜರಾತಿನ ನೀರವ್ ಮೋದಿ ಪಂಜಾಬ್ ನ್ಯಾನಷಲ್ ಬ್ಯಾಂಕಿಗೆ 14,000 ಕೋಟಿ ರೂಪಾಯಿ ವಂಚನೆ ಮಾಡಿದ್ದ ಇದುವರೆಗಿನ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿತ್ತು.
ಏನಾಗಿದೆ ಎಂದರೆ, ಗುಜರಾತ್ ಮೂಲದ ಎಬಿಜಿ ಶಿಪ್ಯಾರ್ಡ್ ಎಂಬ ಕಂಪನಿ ದೇಶದ ಪ್ರಮುಖ 28 ಬ್ಯಾಂಕುಗಳಿಂದ 28 ಬ್ಯಾಂಕ್ಗಳಿಗೆ 22,842 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದೆ. ವಂಚನೆ ಎಂದರೆ ಸಕಾಲದಲ್ಲಿ ಅಸಲು ಪಾವತಿ ಮಾಡಿಲ್ಲ, ಬಡ್ಡಿಯನ್ನು ಪಾವತಿ ಮಾಡಿಲ್ಲ. ಎಲ್ಲಕ್ಕೂ ಮಿಗಿಲಾಗಿ ಯಾವ ಉದ್ದೇಶಕ್ಕೆ ಸಾಲ ಪಡೆಯಲಾಗಿದೆಯೋ ಆ ಉದ್ದೇಶಕ್ಕೆ ಹಣವನ್ನು ಬಳಸಿಲ್ಲ. ಬೃಹತ್ ಪ್ರಮಾಣದ ಸಾಲವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.
ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೂರು ನೀಡಿದ್ದರೂ, ಅದರ ತನಿಖೆಯು ಬಹಳ ನಿಧಾನಗತಿಯಲ್ಲಿ ನಡೆದಿದ್ದು, ಕಳೆದ ವಾರವಷ್ಟೇ ಕೇಂದ್ರೀಯ ತನಿಖಾ ದಳ (ಸಿಬಿಐ) ವಂಚನೆ ಪ್ರಕರಣ ದಾಖಲಿಸಿದೆ.
ಎಬಿಜಿ ಶಿಪ್ಯಾರ್ಡ್ ಮತ್ತು ಅದರ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ಕಂಪನಿಯು ಎಬಿಜಿ ಸಮೂಹದ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿದೆ. ಗುಜರಾತಿನ ದಹೇಜ್ ಮತ್ತು ಸೂರತ್ನಲ್ಲಿ ಹಡಗು ನಿರ್ಮಾಣಕಟ್ಟೆಗಳಿವೆ.
ಎಸ್ಬಿಐ ನೀಡಿರುವ ದೂರಿನ ಪ್ರಕಾರ, ಎಬಿಜಿ ಶಿಪ್ಯಾರ್ಡ್ ಕಂಪನಿಯು ಎಸ್ಬಿಐಗೆ ಬ್ಯಾಂಕ್ಗೆ 2,925 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಐಸಿಐಸಿಐ ಬ್ಯಾಂಕ್ಗೆ 7,089 ಕೋಟಿ, ಐಡಿಬಿಐ ಬ್ಯಾಂಕ್ಗೆ 3,634 ಕೋಟಿ, ಬ್ಯಾಂಕ್ ಆಫ್ ಬರೋಡಾಗೆ 1,614 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 1,244 ಕೋಟಿ, ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ಗೆ 1,228 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಾಗಿದೆ.

ಎಬಿಜಿ ಶಿಪ್ಯಾರ್ಡ್ ಕಂಪನಿಯು ಬ್ಯಾಂಕ್ಗಳು ಬಿಡುಗಡೆ ಮಾಡಿದ್ದ ಹಣವನ್ನು ಮೂಲ ಉದ್ದೇಶಕ್ಕೆ ಬಳಸದೇ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಸಿಬಿಐ ಹೇಳಿದೆ. ಎಸ್ಬಿಐ ಮೊದಲ ಬಾರಿಗೆ 2019ರ ನವೆಂಬರ್ 8, 2019 ರಂದು ದೂರು ದಾಖಲಿಸಿತ್ತು. ದೂರು ಆಧರಿಸಿ ಸಿಬಿಐ 2020 ಮಾರ್ಚ್ 12ರಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ಕೇಳಿತ್ತು. ಸ್ಪಷ್ಟೀಕರಣ ನೀಡಿದ್ದಲ್ಲದೇ ಬ್ಯಾಂಕ್ 2020 ಆಗಸ್ಟ್ ತಿಂಗಳಲ್ಲಿ ಹೊಸ ದೂರನ್ನು ಸಲ್ಲಿಸಿತು. ಬೇರೆ ಪ್ರಕರಣಗಳಂತೆ ಸಿಬಿಐ ತ್ವರಿತವಾಗಿ ಕಾರ್ಯಪ್ರವೃತ್ತವಾಗಿಲ್ಲ. ಗುಜರಾತ್ ಮೂಲದ ಕಂಪನಿಯಾದ್ದರಿಂದ ದೂರನ್ನು ಒಂದೂವರೆ ವರ್ಷಗಳ ಕಾಲ “ಪರಿಶೀಲನೆ” ಮಾಡಿದ ನಂತರ, ಫೆಬ್ರವರಿ 7, 2022 ರಂದು ಎಫ್ಐಆರ್ ದಾಖಲಿಸಿತ್ತು.
2012 ಏಪ್ರಿಲ್ ರಿಂದ 2017 ಜುಲೈ ಅವಧಿಯವರೆಗೆ ಮೆಸರ್ಸ್ ಅರ್ನ್ಸ್ಟ್ ಮತ್ತು ಯಂಗ್ ಎಲ್ಪಿ ಸಂಸ್ಥೆ ಸಲ್ಲಿಸಿದ ತಳಸ್ಪರ್ಶಿ ಲೆಕ್ಕಪರಿಶೋಧನಾ ವರದಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ. ಆರೋಪಿಗಳು ಒಟ್ಟಾಗಿ ಸೇರಿಕೊಂಡು ಹಣದ, ದುರುಪಯೋಗ ಮತ್ತು ನಂಬಿಕೆಯ ದ್ರೋಹ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ಲೆಕ್ಕಪರಿಶೋಧನಾ ವರದಿ ಬಹಿರಂಗಪಡಿಸಿದೆ. ಬ್ಯಾಂಕ್ನಿಂದ ಬಿಡುಗಡೆ ಆದ ಹಣವನ್ನು ಮೂಲ ಉದ್ದೇಶಕ್ಕಾಗಿ ಬಳಸದೇ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಆರೋಪಿಸಿದೆ.
ಲೆಕ್ಕಪರಿಶೋಧನ ವರದಿಯಲ್ಲಿ ಏಪ್ರಿಲ್ 2012 ಮತ್ತು ಜುಲೈ 2017 ರ ನಡುವೆ ವಂಚನೆ ನಡೆದಿದೆ ಎಂದು ತೋರಿಸುತ್ತದೆ.
ಸರಕು ಬೇಡಿಕೆ ಮತ್ತು ಬೆಲೆಗಳಲ್ಲಿನ ಕುಸಿತ ಮತ್ತು ಸರಕು ಬೇಡಿಕೆಯ ನಂತರದ ಕುಸಿತದಿಂದಾದ ಜಾಗತಿಕ ಬಿಕ್ಕಟ್ಟು ಹಡಗು ಉದ್ಯಮದ ಮೇಲೆ ಪರಿಣಾಮ ಬೀರಿದೆ. ಕೆಲವು ಹಡಗುಗಳ ಒಪ್ಪಂದಗಳ ರದ್ದತಿಯು ದಾಸ್ತಾನುಗಳ ರಾಶಿಗೆ ಕಾರಣವಾಯಿತು. ಇದು ದುಡಿಯುವ ಬಂಡವಾಳದ ಕೊರತೆಗೆ ಕಾರಣವಾಗಿದೆ. ನಗದು ಹರಿವು ಸಮಸ್ಯೆಯಾಗಿತ್ತು. 2015 ರಲ್ಲಿ ಉದ್ಯಮವು ಕುಸಿತದ ಮೂಲಕ ಸಾಗುತ್ತಿದ್ದರಿಂದ ವಾಣಿಜ್ಯ ಹಡಗುಗಳಿಗೆ ಯಾವುದೇ ಬೇಡಿಕೆ ಇರಲಿಲ್ಲ. ಹೀಗಾಗಿ, ಕಂಪನಿಯು ನಿಗದಿತ ದಿನಾಂಕದಂದು ಬಡ್ಡಿ ಮತ್ತು ಕಂತುಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಸಿಬಿಐ ಎಫ್ಐಆರ್ ನಲ್ಲಿ ವಿವರಿಸಲಾಗಿದೆ.