ಪ್ರಾದೇಶಿಕ ಅಸಮಾನತೆಗಳ ಹೆಚ್ಚಳದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ
(ಮೂಲ : A picture of growing economic divide in India – ಅರುಣ್ ಕುಮಾರ್ – ದ ಹಿಂದೂ 30 ಅಕ್ಟೋಬರ್ 2024)
ಸೆಪ್ಟಂಬರ್ 2024ರಲ್ಲಿ ʼಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಲಿʼಯು (EAC-PM) “ಭಾರತದ ರಾಜ್ಯಗಳ ಸಾಪೇಕ್ಷ ಆರ್ಥಿಕ ಕಾರ್ಯನಿರ್ವಹಣೆ 1960-61 ರಿಂದ 2023-24” ಶೀರ್ಷಿಕೆಯ ವರದಿಯೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ದೇಶದ ಒಟ್ಟು ಆದಾಯದಲ್ಲಿ ವಿವಿಧ ರಾಜ್ಯಗಳ ಪಾಲು ಎಷ್ಟಿದೆ ಎನ್ನುವುದನ್ನು ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದು ದೇಶದ ಸರಾಸರಿ ತಲಾ ಆದಾಯಕ್ಕೆ ಹೋಲಿಸಿದರೆ ರಾಜ್ಯಗಳ ಪಾಲು ಎಷ್ಟಿದೆ ಎನ್ನುವುದನ್ನೂ ಬಿಂಬಿಸುತ್ತದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರತಿಯೊಂದು ರಾಜ್ಯದ ಮಹತ್ತರ ಪಾತ್ರ ಇರುವುದನ್ನು ಬಿಂಬಿಸುವ ಈ ದತ್ತಾಂಶಗಳು ರಾಷ್ಟ್ರಮಟ್ಟಕ್ಕೆ ಹೋಲಿಸಿದರೆ ಪ್ರತಿಯೊಂದು ರಾಜ್ಯದ ಜನತೆಯ ಸರಾಸರಿ ಯೋಗಕ್ಷೇಮದ ಪ್ರಮಾಣವನ್ನೂ ಈ ವರದಿ ಪ್ರಸ್ತಾಪಿಸುತ್ತದೆ. ಈ ಸರಾಸರಿಗಳು ಒಂದು ನೆಲೆಯಲ್ಲಿ ಅಸಮಾನತೆಗಳನ್ನು ಮರೆಮಾಚುವಂತೆಯೂ ಇರುತ್ತದೆ.
ಉದಾಹರಣೆಗೆ, ದೇಶದ ಆರ್ಥಿಕತೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಮಹಾರಾಷ್ಟ್ರದ ತಲಾ ಆದಾಯದ ಪ್ರಮಾಣವು ದೇಶದ ಸರಾಸರಿಗಿಂತಲೂ ಶೇಕಡಾ 150ರಷ್ಟು ಹೆಚ್ಚಾಗಿದೆ. ಆದರೆ ಮಹಾರಾಷ್ಟ್ರದ ಒಳಗೆ ಅತಿ ಶ್ರೀಮಂತ ಮುಂಬೈ ಇರುವಂತೆಯೇ ಅತ್ಯಂತ ಬಡತನ ಮತ್ತು ರೈತರ ಆತ್ಮಹತ್ಯೆಗಳಿಗೆ ಕುಖ್ಯಾತವಾಗಿರುವ ವಿದರ್ಭ ಸಹ ಇದೆ. ಮುಂಬೈನ ಸಿರಿವಂತರು ಅತಿ ಹೆಚ್ಚಿನ ಪ್ರಮಾಣದ ನೇರ ತೆರಿಗೆಯನ್ನು ಪಾವತಿಸುತ್ತಾರೆ, ಮುಂಬೈ ನಗರದ ಪುರಸಭೆ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸ್ಥೆಯಾಗಿದೆ. ಆದರೆ ಮತ್ತೊಂದೆಡೆ ಇದೇ ನಗರದಲ್ಲೇ ಅನಾಗರಿಕ ಜೀವನದ ಸ್ಥಿತಿಗತಿಗಳನ್ನು ಹೊಂದಿರುವ ಅತಿ ದೊಡ್ಡ ಕೊಳೆಗೇರಿ ಪ್ರದೇಶಗಳೂ ಇವೆ.
ಪ್ರಾದೇಶಿಕ ವ್ಯತ್ಯಯಗಳು
ಈ ವರದಿಯಲ್ಲಿ ಢಾಳಾಗಿ ಕಾಣುವ ಅಂಶವೆಂದರೆ ಭಾರತದ ಪಶ್ಚಿಮ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಉತ್ತಮ ಸಾಧನೆಯಾಗಿದ್ದರೆ, ಪೂರ್ವ ಭಾಗದ ರಾಜ್ಯಗಳಲ್ಲಿ ದುರ್ಬಲವಾಗಿದೆ. ಹರಿಯಾಣ ಮತ್ತು ದೆಹಲಿಯನ್ನು ಹೊರತುಪಡಿಸಿದರೆ ಉತ್ತರದ ರಾಜ್ಯಗಳ ಸಾಧನೆ ಕಳಪೆಯಾಗಿಯೇ ಇದೆ. ಒಟ್ಟಾರೆ ಚಿತ್ರಣವನ್ನು ಗಮನಿಸಿದಾಗ, ದೇಶದಲ್ಲಿ ಅಸಮಾನತೆಯ ವಿಭಜಿತ ಚಿತ್ರಣ ಕಾಣುತ್ತದೆ. ಇದು ಭಾರತದಂತಹ ವೈವಿಧ್ಯಮಯ ದೇಶಕ್ಕೆ ಮತ್ತು ಇಲ್ಲಿನ ಒಕ್ಕೂಟ ವ್ಯವಸ್ಥೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿ ಕಾಣಲಾರದು. ಈ ಹಿಗ್ಗುತ್ತಿರುವ ಅಂತರದ ಪರಿಣಾಮ ಒಕ್ಕೂಟ ವ್ಯವಸ್ಥೆಯೇ ಪ್ರಶ್ನೆಗೊಳಗಾಗುತ್ತಿದೆ. ಸಿರಿವಂತ ರಾಜ್ಯಗಳ ಪ್ರತಿನಿಧಿಗಳು ಇತ್ತೀಚೆಗೆ ಕೇರಳದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶವೊಂದರಲ್ಲಿ ತಮಗೆ ಕೆಂದ್ರದಿಂದ ನ್ಯಾಯಯುತವಾದ ಸಂಪನ್ಮೂಲಗಳ ಹಂಚಿಕೆಯಾಗುತ್ತಿಲ್ಲ ಎಂದು ಆರೋಪಿಸಿದ್ದವು. ಈ ರಾಜ್ಯಗಳು ರಾಷ್ಟ್ರದ ಬೊಕ್ಕಸಕ್ಕೆ ಅತಿ ಹೆಚ್ಚಿನ ಸಂಪನ್ಮೂಲಗಳನ್ನು ಪೂರೈಸುತ್ತಿದ್ದರೂ ಕೇಂದ್ರ ಸರ್ಕಾರ ಅದಕ್ಕೆ ಪೂರಕವಾಗಿ ವಿನಿಯೋಗಿಸುತ್ತಿಲ್ಲ ಎಂಬ ಆರೋಪ ಈ ಸಮಾವೇಶದಲ್ಲಿ ಕೇಳಿಬಂದಿತ್ತು. 2000ದ ಇಸವಿಯಲ್ಲಿ ಇಂತಹುದೇ ಯಶಸ್ವಿ ರಾಜ್ಯಗಳ ಸಮಾವೇಶವೊಂದರಲ್ಲಿ ಹನ್ನೊಂದನೇ ಹಣಕಾಸು ಆಯೋಗದಿಂದ ತಮಗೆ ಸಮರ್ಪಕವಾದ ನಿಧಿಯನ್ನು ವಿನಿಯೋಗಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಒಂದು ರೀತಿಯಲ್ಲಿ ನಿಧಾನವಾಗಿ ಫೆಡರಲಿಸಂ ಅಂದರೆ ಒಕ್ಕೂಟ ವ್ಯವಸ್ಥೆಯ ಸ್ವರೂಪವು ದುರ್ಬಲವಾಗುತ್ತಿರುವುದನ್ನು ಇದು ಸೂಚಿಸುತ್ತದೆ.
ಪ್ರಸ್ತುತ ವರದಿಯು ದಕ್ಷಿಣ ರಾಜ್ಯಗಳ ಕಾರ್ಯನಿರ್ವಹಣೆಯೂ ಸಹ ಉತ್ತಮವಾಗತೊಡಗಿದ 1991ರ ಜಾಗತೀಕರಣವನ್ನು ಒಂದು ಮಾಪಕವಾಗಿ ಬಳಸುತ್ತದೆ. ಆದರೆ ಪೂರ್ವದ ಒಡಿಷಾ ರಾಜ್ಯವನ್ನೂ ಒಳಗೊಂಡಂತೆ ಕರಾವಳಿ ಪ್ರದೇಶಗಳ ಸಾಧನೆ ಉತ್ತಮವಾಗಿರುವುದನ್ನೂ ವರದಿ ಉಲ್ಲೇಖಿಸುತ್ತದೆ. ಕೆಲವು ರಾಜ್ಯಗಳ ಕಳಪೆ ಕಾರ್ಯನಿರ್ವಹಣೆಗೂ ಇನ್ನು ಕೆಲವು ರಾಜ್ಯಗಳ ಉತ್ತಮ ನಿರ್ವಹಣೆಗೂ ಸಂಬಂಧವಿರಬಹುದೇ ಎಂದು ಯೋಚಿಸಬೇಕಿದೆ. ಆರ್ಥಿಕತೆಯಲ್ಲಿ ಒಟ್ಟು ಉತ್ಪಾದನೆಯಲ್ಲಿ ಬಂಡವಾಳ ಹೂಡಿಕೆಯು ಅತ್ಯಂತ ನಿರ್ಣಾಯಕ ಅಂಶವಾಗಿರುತ್ತದೆ. ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಾದಷ್ಟು ಆರ್ಥಿಕತೆಯ ಗಾತ್ರವೂ ಹಿಗ್ಗುತ್ತಾ ಹೋಗುತ್ತದೆ. ಹಾಗಾಗಿ ಸಂಪೂರ್ಣ ವಿಶ್ಲೇಷಣೆಯನ್ನು ಮಾಡಬೇಕಾದರೆ, ಪ್ರತಿಯೊಂದು ರಾಜ್ಯದಲ್ಲೂ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಅಧ್ಯಯನ ಮಾಡಬೇಕಾಗುತ್ತದೆ. ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳು ಬಡ ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಿಕೆಯನ್ನು ಹೊಂದಿರುತ್ತವೆ, ಹಾಗಾಗಿ ಸಾಧನೆಯೂ ಉತ್ತಮವಾಗಿರುತ್ತದೆ.
ಬಂಡವಾಳ ಹೂಡಿಕೆಯು ಸಾರ್ವಜನಿಕ ಹಾಗೂ ಖಾಸಗಿ ವಲಯದಿಂದ ಬರುತ್ತದೆ. ಸಾರ್ವಜನಿಕ ಹೂಡಿಕೆಯು ಸರ್ಕಾರಗಳ ಆಡಳಿತ ನೀತಿಗಳನ್ನು ಅವಲಂಬಿಸುತ್ತದೆ. ಖಾಸಗಿ ಹೂಡಿಕೆಗಳು ಲಾಭಾಂಶದ ಪರಿಗಣನೆಗೆ ಒಳಪಟ್ಟಿರುತ್ತವೆ. ಸರ್ಕಾರಗಳು ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಲ್ಲಿ ಶೀಘ್ರವಾಗಿ ಲಾಭ ಗಳಿಸದೆ ಇದ್ದರೂ ಅಭಿವೃದ್ಧಿಗಾಗಿ ಪ್ರಯತ್ನಿಸಬಹುದು. ಆದರೆ ಖಾಸಗಿ ಹೂಡಿಕೆಯಲ್ಲಿ ಇದನ್ನು ನಿರೀಕ್ಷಿಸಲಾಗುವುದಿಲ್ಲ. ಸರ್ಕಾರಗಳು ಈ ಹೂಡಿಕೆದಾರರಿಗೆ ಸೂಕ್ತ ರಿಯಾಯಿತಿ, ವಿನಾಯಿತಿಗಳನ್ನು ನೀಡಬೇಕಾಗುತ್ತದೆ, ಮುಖ್ಯವಾಗಿ ತೆರಿಗೆ ವಿನಾಯಿತಿ, ಅಗ್ಗದ ದರದಲ್ಲಿ ವಿದ್ಯುತ್ ಪೂರೈಕೆ ಇತ್ಯಾದಿ ಸವಲತ್ತುಗಳನ್ನು ಅಪೇಕ್ಷಿಸಲಾಗುತ್ತದೆ.
ಖಾಸಗಿ ಬಂಡವಾಳ ಹೂಡಿಕೆಗಳು ಸ್ವತಃ ಮುನ್ನುಗ್ಗುವುದು ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಮತ್ತು ಬೃಹತ್ ಮಾರುಕಟ್ಟೆಗಳು ಅತಿ ಹೆಚ್ಚು ಲಾಭವನ್ನು ಒದಗಿಸಿಕೊಡುವಂತಹ ವಲಯಗಳಲ್ಲಿ. ಹಾಗಾಗಿ ಮುಂಬೈ, ಚೆನ್ನೈ, ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ಮೊದಲಾದ ಬೃಹತ್ ನಗರಗಳು ಬಂಡವಾಳ ಹೂಡಿಕೆಗೆ ಪ್ರಶಸ್ತ ಪ್ರದೇಶಗಳಾಗಿ ಕಾಣುತ್ತವೆ. ಹರಿಯಾಣ ರಾಜ್ಯವು ಅತಿ ಹೆಚ್ಚು ತಲಾ ಆದಾಯ ಹೊಂದಿರುವ ದೆಹಲಿಗೆ ಹೊಂದಿಕೊಂಡಿರುವುದರಿಂದ ಈ ರಾಜ್ಯವೂ ಹೂಡಿಕೆಯ ಲಾಭ ಗಳಿಸಿದೆ. ಕೊಲ್ಕತ್ತಾ ನಗರವು ಅನ್ಯ ಕಾರಣಗಳಿಗಾಗಿ ಅಪೇಕ್ಷಿತವಾಗಿ ಕಾಣುವುದಿಲ್ಲ. ಕರಾವಳಿ ಪ್ರದೇಶಗಳು ಹೆಚ್ಚು ಅಪೇಕ್ಷಿಸಲ್ಪಡುವ ಕಾರಣವೆಂದರೆ ರಫ್ತು ವಹಿವಾಟುಗಳ ಮೂಲಕ ಹೊರವಲಯದ ಮಾರುಕಟ್ಟೆಗಳೊಡನೆ ಸಂಬಂಧ ಕಲ್ಪಿಸುತ್ತವೆ. ಹಾಗೆಯೇ ಆಮದು ಮಾಡಲಾಗುವ ಒಳಸುರಿಗಳು (inputs) ಅಗ್ಗದ ಬೆಲೆಯಲ್ಲಿ ದೊರೆಯುತ್ತವೆ.
ಔದ್ಯಮಿಕ ಲಾಭದ ದೃಷ್ಟಿಯಿಂದ ರಾಜ್ಯಗಳಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳು (Infrastructure) ಮತ್ತು ಉತ್ತಮ ಆಳ್ವಿಕೆ ನಿರ್ಣಾಯಕವಾಗಿ ಪರಿಣಮಿಸುತ್ತವೆ. ಸಿರಿವಂತ ರಾಜ್ಯಗಳು ಈ ಎರಡೂ ವಿಷಯಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು ಹೆಚ್ಚಿನ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುತ್ತವೆ. ಉತ್ತಮ ಆಳ್ವಿಕೆಯೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ನಿರ್ವಹಣೆಯನ್ನು ಅವಲಂಬಿಸುತ್ತದೆ. ಇದರಿಂದ ಹೆಚ್ಚು ಉತ್ಪಾದಕೀಯತೆ ನೀಡುವ ಶ್ರಮಿಕರ ಪಡೆ ಲಭ್ಯವಾಗುತ್ತದೆ. ಆದರೆ ಇದು ನಿರ್ಣಾಯಕವಾಗಲಾರದು, ಏಕೆಂದರೆ ಬಡ ರಾಜ್ಯಗಳಿಂದ ಸಿರಿವಂತ ರಾಜ್ಯಗಳಿಗೆ ಅಪಾರ ಪ್ರಮಾಣದ ವಲಸೆ ಇದ್ದೇ ಇರುತ್ತದೆ.
ಖಾಸಗಿ ಬಂಡವಾಳ ಹೂಡಿಕೆಯು ಒಟ್ಟು ಹೂಡಿಕೆಯ ಶೇಕಡಾ 75ರಷ್ಟನ್ನು ಆಕ್ರಮಿಸಿದೆ. 1991ರ ಹೊಸ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದ ನಂತರದಲ್ಲಿ ಮುಂಚೂಣಿ ಕ್ಷೇತ್ರವಾಗಿದ್ದ ಸಾರ್ವಜನಿಕ ವಲಯದ ಪಾತ್ರವು ಕ್ರಮೇಣ ಮಾರುಕಟ್ಟೆಯೆಡೆಗೆ ಚಲಿಸುತ್ತಿದೆ. ಹಾಗಾಗಿ ಹೆಚ್ಚಿನ ಬಂಡವಾಳಹೂಡಿಕೆಯು ಅತಿ ಹೆಚ್ಚು ಲಾಭ ಗಳಿಸಬಹುದಾದ ಸಿರಿವಂತ ರಾಜ್ಯಗಳಿಗೆ ಹರಿಯುತ್ತಿದೆ. ಅಷ್ಟೇ ಅಲ್ಲದೆ, ಬಂಡವಾಳ ಹೂಡಿಕೆಯನ್ನು ನಿರ್ದೇಶಿಸುವ ಹಣಕಾಸು ಕ್ಷೇತ್ರವು 1991ರ ನಂತರದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. ಪರಿಣಾಮವಾಗಿ ಕೌಟುಂಬಿಕ ಉಳಿತಾಯದ ಹೆಚ್ಚಿನ ಪ್ರಮಾಣವು ಬಡ ರಾಜ್ಯಗಳಿಂದ ದೂರವಾಗುತ್ತಾ ಸಿರಿವಂತ ರಾಜ್ಯಗಳೆಡೆಗೆ ಚಲಿಸುತ್ತಿದೆ ಏಕೆಂದರೆ ಈ ರಾಜ್ಯಗಳು ಹೆಚ್ಚಿನ ಲಾಭ ತಂದುಕೊಡುತ್ತವೆ. ಸಿರಿವಂತ ರಾಜ್ಯಗಳಿಗೆ ಹೋಲಿಸಿದರೆ ಬಡ ರಾಜ್ಯಗಳಲ್ಲಿ ಕಾಣುವ ಸಾಲ-ಠೇವಣಿ ಅನುಪಾತದ (Credit-Deposit Ration) ಕುಸಿತದಲ್ಲಿ ಇದನ್ನು ಗುರುತಿಸಬಹುದು. ಬಂಡವಾಳ ಹೂಡಿಕೆಯ ಈ ಪ್ರಮುಖ ತಿರುವು ಹೆಚ್ಚುತ್ತಿರುವ ಅಸಮಾನತೆಗಳಿಗೆ ಕಾರಣವೂ ಆಗಿದೆ.
ಅಂತಿಮವಾಗಿ ಬಡ ರಾಜ್ಯಗಳು ಅತಿ ಹೆಚ್ಚಿನ ಪ್ರಮಾಣದ ಅಸಂಘಟಿತ ವಲಯವನ್ನು ಪ್ರತಿನಿಧಿಸುತ್ತವೆ, ಹಾಗಾಗಿ ಇಲ್ಲಿ ಉತ್ಪಾದಕೀಯತೆ ಮತ್ತು ಆದಾಯ ಎರಡೂ ಸಹ ಕಡಿಮೆ ಇರುತ್ತದೆ. ಹೊಸ ಆರ್ಥಿಕ ನೀತಿಯಲ್ಲಿ ಆಡಳಿತ ನೀತಿಗಳು ಸಂಘಟಿತ ವಲಯವನ್ನು ಹೆಚ್ಚು ಉತ್ತೇಜಿಸುವಂತಿವೆ. ಇದಕ್ಕೆ ಪೂರಕವಾಗಿ ಸರಕು ಸಾಗಣೆಯ ಕಾರಿಡಾರ್ಗಳು, ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದು, ಈ ಕ್ಷೇತ್ರವು ಒಳನಾಡಿನೊಳಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತವೆ. ಹಾಗಾಗಿ ಸಂಘಟಿತ ಕ್ಷೇತ್ರವು ಅಸಂಘಟಿತ ಕ್ಷೇತ್ರವನ್ನು ಹಿಂದಕ್ಕೆ ತಳ್ಳಿ ಮುನ್ನಡೆಯುತ್ತಿದ್ದು ಸಿರಿವಂತ ರಾಜ್ಯಗಳ ಶೀಘ್ರ ಅಭಿವೃದ್ಧಿಗೆ ಇಂಧನ ಒದಗಿಸುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹೊಸ ಆರ್ಥಿಕ ನೀತಿಗಳು ವಿವಿಧ ರಾಜ್ಯಗಳ ನಡುವೆ ಅಸಮಾನತೆಯ ಅಂತರ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ಇದನ್ನು EAC-PM ಸಮಿತಿಯ ವರದಿ ಸ್ಪಷ್ಟಪಡಿಸುತ್ತದೆ.
ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳನ್ನು ಇಲ್ಲಿ ವಿಶೇಷವಾಗಿ ಗಮನಿಸಬಹುದು. ಎರಡೂ ರಾಜ್ಯಗಳು ಪ್ರಬಲವಾದ ಎಡಪಂಥೀಯ ಚಳುವಳಿಗಳು, ಕಾರ್ಮಿಕರ ಉಗ್ರ ಹೋರಾಟಗಳಿಗೆ ಕೇಂದ್ರವಾಗಿದ್ದವು. ಹಾಗಾಗಿ ಖಾಸಗಿ ಕ್ಷೇತ್ರವು ಈ ರಾಜ್ಯಗಳಲ್ಲಿ ಸೀಮಿತ ಹೂಡಿಕೆಯನ್ನು ಮಾಡಿವೆ. ಭಾರತದ ಗಡಿ ರಾಜ್ಯಗಳು ರಾಜತಾಂತ್ರಿಕ ಕಾರಣಗಳಿಂದ ಕಡಿಮೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿವೆ. ಇವುಗಳಲ್ಲಿ ಹಲವು ರಾಜ್ಯಗಳು ಅಂತರಿಕ ಬಂಡಾಯದ ಚಳುವಳಿ, ಹೋರಾಟಗಳನ್ನು ಎದುರಿಸಬೇಕಾದ ಕಾರಣ ಖಾಸಗಿ ಕ್ಷೇತ್ರವು ಇಲ್ಲಿ ಪ್ರವೇಶಿಸಲು ಹಿಂಜರಿಯುತ್ತವೆ.
ಸಾರ್ವಜನಿಕ ಬಂಡವಾಳ ಹೂಡಿಕೆಯಲ್ಲಿ ಕೇಂದ್ರ ಸರ್ಕಾರವು ರಾಜಕೀಯ ಮಾಡುತ್ತಿದೆ ಎಂದು ವಿರೋಧ ಪಕ್ಷಗಳ ಸರ್ಕಾರಗಳಿರುವ ರಾಜ್ಯಗಳು ಆರೋಪಿಸುತ್ತವೆ. ಡಬಲ್ ಇಂಜಿನ್ ಸರ್ಕಾರ ಎಂಬ ಘೋಷಣೆಯ ಹಿನ್ನೆಲೆಯಲ್ಲಿ ಇದನ್ನು ಅರ್ಥೈಸಬಹುದು. ಅಷ್ಟೇ ಅಲ್ಲದೆ ಭಾರತದಲ್ಲಿ ಬಂಡವಾಳ ಆಪ್ತತೆ (Cronyism) ತೀವ್ರವಾಗುತ್ತಿರುವುದರಿಂದ ಬಂಡವಾಳ ಹೂಡಿಕೆಗಳೂ ರಾಜಕೀಯ ನಿರ್ದೇಶನಗಳಿಂದಲೇ ಪ್ರಭಾವಕ್ಕೊಳಗಾಗುತ್ತಿವೆ. ಇದು ಬಂಡವಾಳ ಹೂಡಿಕೆಯ ವಾತಾವರಣವನ್ನೇ ಕಲುಷಿತಗೊಳಿಸುವುದಲ್ಲದೆ ಆಪ್ತ ಬಂಡವಾಳಿಗರಿಗೆ ಇತರರಿಗಿಂತಲೂ ಹೆಚ್ಚಿನ ಅನುಕೂಲಗಳನ್ನು ಸೃಷ್ಟಿಸುತ್ತದೆ ಅಥವಾ ಅಪಾಯಗಳನ್ನು ಕಡಿಮೆ ಮಾಡುತ್ತದೆ. ತತ್ಪರಿಣಾಮವಾಗಿ ಒಟ್ಟಾರೆ ಬಂಡವಾಳ ಹೂಡಿಕೆಯ ಪ್ರಮಾಣವು ಕುಂಠಿತವಾಗಿ, ಬಡ ರಾಜ್ಯಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಬಡ ರಾಜ್ಯಗಳಲ್ಲಿ ಕರಾಳ ಆರ್ಥಿಕತೆಯೂ (Black Economy) ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಬಂಡವಾಳ ಹೂಡಿಕೆಯ ವಾತಾವರಣವನ್ನೇ ಕಲುಷಿತಗೊಳಿಸುತ್ತದೆ . ಇದಕ್ಕೆ ಆಡಳಿತ ನೀತಿಗಳ ವೈಫಲ್ಯ, ದುರ್ಬಲ ಆಳ್ವಿಕೆಯೂ ಕಾರಣವಾಗಿದ್ದು ಬಂಡವಾಳ ಹೂಡಿಕೆಯೂ ಕುಸಿಯುತ್ತದೆ. ತತ್ಪರಿಣಾಮವಾಗಿ ರಾಜ್ಯಗಳ ಅಭಿವೃದ್ಧಿ ಸಾಮರ್ಥ್ಯವೂ ಕುಸಿಯುತ್ತದೆ.
ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ
ವಿವಿಧ ರಾಜ್ಯಗಳ ಆರ್ಥಿಕ ಕಾರ್ಯ ನಿರ್ವಹಣೆಯಲ್ಲಿ ಇರುವ ಅಪಾರ ವ್ಯತ್ಯಯಗಳು ಒಕ್ಕೂಟ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹಾಗಾಗಿ ಆಡಳಿತ ನೀತಿಗಳ ಮೂಲಕ ಇದನ್ನು ಸರಿಪಡಿಸಬೇಕಿದೆ. ಇದೇ ಪ್ರಮಾಣದ ವ್ಯತ್ಯಾಯಗಳನ್ನೇ ಯಥಾಸ್ಥಿತಿಯಲ್ಲಿರಿಸುವುದೂ ಸಹ ಒಂದು ಆಯ್ಕೆಯಾಗುವುದಿಲ್ಲ. ಹಿಂದುಳಿದ ರಾಜ್ಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯ ಹೆಚ್ಚಳ, ಉತ್ತಮ ಮೂಲ ಸೌರ್ಕಯಗಳ ಲಭ್ಯತೆ ಮತ್ತು ಉತ್ತಮ ಆಳ್ವಿಕೆ ಅತ್ಯವಶ್ಯವಾಗಿರುತ್ತದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ರಾಜ್ಯಗಳ ಆಳ್ವಿಕೆಯಲ್ಲಿ ಸುಧಾರಣೆಯನ್ನು ತರುವುದೇ ಅಲ್ಲದೆ ತಮ್ಮ ತಮ್ಮ ವಲಯಗಳಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸಬೇಕಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಬೇಕಾಗಿದೆ. ಮಾರುಕಟ್ಟೆ ಆರ್ಥಿಕತೆಯ ವಾತಾವರಣದಲ್ಲಿ ಬಡ ರಾಜ್ಯಗಳಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಒತ್ತಾಯಿಸಲಾಗುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರವು, ಅಸಂಘಟಿತ ಕ್ಷೇತ್ರವನ್ನು ಕಡೆಗಣಿಸಿ, ಸಂಘಟಿತ ಕ್ಷೇತ್ರವನ್ನು ಉತ್ತೇಜಿಸುವ ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗುತ್ತದೆ. ಅಸಂಘಟಿತ ಕ್ಷೇತ್ರಕ್ಕೆ ಹೆಚ್ಚಿನ ಗಮನಹರಿಸುವುದೇ ಆದರೆ, ಅಲ್ಲಿ ಅಂಚಿನಲ್ಲಿರುವವರ ಆದಾಯ ಹೆಚ್ಚಾಗುತ್ತದಲ್ಲದೆ ಬಡ ರಾಜ್ಯಗಳಲ್ಲಿ ಉತ್ಪಾದನೆ ಮತ್ತು ಬೇಡಿಕೆ ಎರಡೂ ಸಹ ವೃದ್ಧಿಯಾಗುತ್ತದೆ. ಈ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾದಂತೆಲ್ಲಾ ಖಾಸಗಿ ಬಂಡವಾಳ ಹೂಡಿಕೆಯನ್ನೂ ಆಕರ್ಷಿಸಲು ಸಾಧ್ಯವಾಗುತ್ತದೆ.
ಬೇಡಿಕೆಯ ಕೊರತೆ ಎದುರಿಸುತ್ತಿರುವ ಸಂಘಟಿತ ಕ್ಷೇತ್ರವೂ ಇದರಿಂದ ಉಪಯೋಗ ಪಡೆಯಲು ಸಾಧ್ಯವಾಗುತ್ತದೆ. ಈ ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ವಿನಾಯಿತಿಗಳ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಹೊಂದಿರುತ್ತವೆ. ಆಡಳಿತ ನೀತಿಗಳ ಈ ಬದಲಾವಣೆಗಳಿಂದ ಸಿರಿವಂತ ರಾಜ್ಯಗಳು ಅಭಿವೃದ್ಧಿಯಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಬದಲಾಗಿ ಅಸಮಾನತೆಗಳು ಕಡಿಮೆಯಾಗುತ್ತವೆ ಎಂದು ಖಚಿತವಾಗಿ ಹೇಳಬಹುದು. ಕೆಳಸ್ತರದಿಂದ ಅಭಿವೃದ್ಧಿ ಹೊಂದುವ ಈ ಹಾದಿಯು ಒಕ್ಕೂಟ ವ್ಯವಸ್ಥೆಯನ್ನೂ ಬಲಪಡಿಸುತ್ತದೆ, ದೇಶದ ಏಕತೆ ಮತ್ತು ಅಖಂಡತೆಯನ್ನೂ ಕಾಪಾಡುತ್ತದೆ.
( ಮೂಲ ಲೇಖಕರು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಜೆಎನ್ಯು)
Indian Economyʼs Greatest Crisis : Impact of the Coronavirus and the Road ahead ಕೃತಿಯ ಕರ್ತೃ. )