ಗೃಹ ಜ್ಯೋತಿ ಯೋಜನೆಯಡಿ ಶನಿವಾರದ ವರೆಗೆ 45.61661 ಗ್ರಾಹಕರು ನೋಂದಣಿಗೊಂಡಿದ್ದಾರೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಗೆ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 11,17,208 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಸರ್ವರ್ ಸಮಸ್ಯೆ ನಡುವೆಯೂ ಗೃಹ ಜ್ಯೋತಿ ಯೋಜನೆಗೆ ಕಳೆದ ಆರು ದಿನಗಳಲ್ಲಿ ಒಟ್ಟು 45.61 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಗ್ರಾಹಕರ ಸಂಖ್ಯೆ 2.14 ಕೋಟಿ ಇದೆ. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವು ನಿಗದಿಪಡಿಸದ ಕಾರಣ ಗ್ರಾಹಕರು ಆತಂಕಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದೆ. ಇ-ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುಚ್ಛಕ್ತಿ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಶುಕ್ರವಾರ(ಜೂನ್ 23) 10,93,606 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಶನಿವಾರ(ಜೂನ್ 24) ಸಂಜೆ 8 ಗಂಟೆಯವರೆಗೆ 11,17,208 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.