ಶಿರಾಡಿಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲು 1200 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಿಲು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಪ್ರತೀ ಮಳೆಗಾಲದ ವೇಳೆಯೂ ಭೂಕುಸಿತ, ಕಳಪೆ ಕಾಮಗಾರಿಯಿಂದ ಹೆದ್ದಾರಿ ಕೆಲವು ದಿನಗಳ ಮಟ್ಟಿಗಾದರೂ ಬಂದ್ ಆಗದ ಉದಾಹರಣೆಗಳೇ ಕಮ್ಮಿ. ಅಭಿವೃದ್ಧಿಯೇ ಕಾಣದ ಇಲ್ಲಿನ ರಸ್ತೆಗಳು ಹೆಚ್ಚಿನ ವಾಹನದಟ್ಟಣೆಯಿಂದ ಕೂಡಿದ್ದು, ಪ್ರವಾಸಿಗರಿಗೂ ನೆಚ್ಚಿನ ತಾಣವಾಗಿದೆ.
ಶಿರಾಡಿಘಾಟ್ ಅಪಘಾತಗಳಿಗೆ ಹಾಟ್ ಸ್ಪಾಟ್
ಭೀಕರ ರಸ್ತೆ ಅಪಘಾತಗಳಿಗೂ ಶಿರಾಡಿ ಘಾಟ್ ಸೆಕ್ಷನ್ ಕಾರಣವಾಗುತ್ತಲೇ ಇರುವುದು ಇಲ್ಲಿನ ಗ್ರಾಮಸ್ಥರ ನಿತ್ಯದ ಕೂಗಾಗಿದೆ. ಅದೆಷ್ಟೋ ಸರಣಿ ಅಪಘಾತಗಳು ಸಂಭವಿಸಿ, ಆಂಬುಲೆನ್ಸ್ ಗಳೇ ಸಿಗದೇ ಪರದಾಡಿದ ನಿದರ್ಶನಗಳು ಸಾಕಷ್ಟಿವೆ.
ಕೇಸರಿಕೋಟೆಯಲ್ಲಿ ಓಡಾಡುವುದೇ ಕಷ್ಟ
ಬಿಜೆಪಿಯ ಭದ್ರ ಕೋಟೆಯಾದ ಈ ಶಿರಾಡಿ ಭಾಗದಲ್ಲಿ ಅಭಿವೃದ್ಧಿಯ ಕಾರ್ಯಗಳು ಹೆಸರಿಗೆ ಮಾತ್ರವೇ ಎಂಬಂತಾಗಿದ್ದು, ಜನರ ಆಶೋತ್ತರಗಳಿಗೆ ಬೆಲೆಯೇ ಇಲ್ಲದಂತಾಗಿರುವುದು ವಿಷಾದನೀಯ. ಶಾಸಕರು ಬಾಯಿ ಮಾತಿಗೆ ಮಾತ್ರವೇ ಆಶ್ವಾಸನೆ ನೀಡುತ್ತಿದ್ದು, ಅದೇ ದಾರಿಯಲ್ಲಿ ಹೈಫೈ ವಾಹನಗಳಲ್ಲಿ ಓಡಾಡಿಕೊಂಡು ಕಾಲಹರಣ ಮಾಡುತ್ತಿರುವುದು ಸಾಮಾನ್ಯವಾಗಿದೆ.

ದಶಕಗಳ ಸಮಸ್ಯೆಗೆ ಫುಲ್ ಸ್ಟಾಪ್ ಸಿಗುತ್ತಾ
ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವುದನ್ನು ಬಿಟ್ಟು, ಶಿರಾಡಿ ಘಾಟ್ ಗೆ ಹೊಸ ರೂಪ ನೀಡಲು ಜಪಾನ್ ತಂತ್ರಜ್ಞಾನದಂತೆ, ಸುರಂಗ ಮಾರ್ಗ ಸುದ್ದಿ ಹಬ್ಬಿಸಿ ಚುನಾವಣೆ ಗೆದ್ದು ಹೋದ ಮೇಲೆ ಆ ಕಡೆ ತಲೆಹಾಕದ ಬೇಜಾವಾಬ್ದಾರಿ ನಾಯಕರುಗಳಿಂದ ದಶಕಗಳಿಂದ ಸಮಸ್ಯೆಯಾಗಿದೆ. ಆದರೆ, ಈಗ ನಿತಿನ್ ಗಡ್ಕರಿ ಶಿರಾಡಿ ಘಾಟ್ ಅಭಿವೃದ್ಧಿಗೆ ಕೈಹಾಕಿರುವುದು ಆಶಾದಾಯಕ ಬೆಳವಣಿಗೆ.
ಆಶ್ವಾಸನೆಗಳು ಮಾತಾಗಿಯೇ ಉಳಿದವು
2009ರಲ್ಲಿ 24 ಕಿ.ಮೀಗಳ ಉದ್ದದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರ 115 ಕೋಟಿ ರೂ. ತಾಂತ್ರಿಕ ಅನುಮೋದನೆ ನೀಡಿತ್ತು. ಜೊತೆಗೆ, ಓವರ್ ಲೋಡ್ ಕಮ್ಮಿ ಮಾಡಲು ತೂಗುಸೇತುವೆ ನಿರ್ಮಿಸುವುದಕ್ಕೂ ಆಗ ಕೇಂದ್ರದ ಸಚಿವರಾಗಿದ್ದ ಕಮಲ್ ನಾಥ್ ಅನುಮತಿ ನೀಡಿದ್ದರು. 2012ರಲ್ಲಿ ಉನ್ನತ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಅಭಿವೃದ್ಧಿ ಮಾಡಲು ಜಪಾನ್ ದೇಶ ಮುಂದೆ ಬಂದಿದೆ ಎಂದು ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡ ಹೇಳಿದ್ದರು. ಆದರೆ, ಅವರ ಮಾತು ಬರೀ ಮಾತಾಗಿಯೇ ಉಳಿಯಿತು.
ರಸ್ತೆ ಕಾಮಗಾರಿ ಶುರುವಾದರೂ ಮುಗಿಯೋದು ಸ್ಲೋ
ಎಚ್.ಸಿ.ಮಹದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದಾಗ ಎರಡು ಹಂತದಲ್ಲಿ ಶಿರಾಡಿ ಘಾಟಿಗೆ ಒಂದಷ್ಟು ಕಾಯಕಲ್ಪ ಸಿಕ್ಕಿತ್ತು. ಇದಾದ ಬಳಿಕ 2017-18ರಲ್ಲಿ ಮತ್ತೆ ಕಾಮಗಾರಿಗಾಗಿ ಸಂಚಾರ ಬಂದ್ ಮಾಡಲಾಯಿತು. ಇದೀಗ ಕೇಂದ್ರ ಸರಕಾರದಲ್ಲಿ ಆಕ್ಟೀವ್ ಸಚಿವರಾಗಿರುವ ನಿತಿನ್ ಗಡ್ಕರಿಯವರು ಶಿರಾಡಿ ಘಾಟ್ ಬಗ್ಗೆ ಒಲವು ತೋರಿಸಿದ್ದಾರೆ. ಇದು ಕೇವಲ ಭರವಸೆಯಾಗಿ ಉಳಿಯುತ್ತೋ ಅಥವಾ ಕಾರ್ಯರೂಪಕ್ಕೆ ಬರುತ್ತದೋ ಎನ್ನುವುದನ್ನು ಕಾದುನೋಡಬೇಕಾಗಿದೆ.






