ಸಾಂಸ್ಥಿಕ ರಚನೆಗಳ ವೈಜ್ಞಾನಿಕ ವರ್ಗೀಕರಣ (Taxonomy) ವರದಿ ಮೂಲಕ ಉಕ್ಕು ಕ್ಷೇತ್ರಕ್ಕೆ ಕೇಂದ್ರದ ಉತ್ತೇಜನ
||ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ಯಾಕ್ಸಾನಮಿ ವರದಿ ಅನಾವರಣ||
ನವದೆಹಲಿ: ಉಕ್ಕು ಕ್ಷೇತ್ರದಲ್ಲಿ ಮಾಲಿನ್ಯಕ್ಕೆ ಇತಿಶ್ರೀ ಹಾಡಲು ಹಾಗೂ ಪರಿಸರಪೂರಕವಾದ ಗ್ರೀನ್ ಸ್ಟೀಲ್ ತಯಾರಿಕೆಗೆ ಪ್ರಾಮುಖ್ಯತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ‘ಸಾಂಸ್ಥಿಕ ರಚನೆಗಳ ವೈಜ್ಞಾನಿಕ ವರ್ಗೀಕರಣ’ (Taxonomy) ವರದಿಯನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸಾಂಸ್ಥಿಕ ರಚನೆಗಳ ವೈಜ್ಞಾನಿಕ ವರ್ಗೀಕರಣ’ (Taxonomy) ವರದಿಯನ್ನು ಬಿಡುಗಡೆ ಮಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು; ಭಾರತವು ಪರಿಸರ ರಕ್ಷಣೆಗೆ ಎಲ್ಲಾ ಉಪಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ಹೆಚ್ಚು ಒತ್ತಾಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ಯಾಕ್ಸಾನಮಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ದೇಶದ ಅತ್ಯಂತ ಪ್ರಮುಖ ಉದ್ಯಮಗಳಲ್ಲಿ ಒಂದಾದ ಉಕ್ಕು ಉದ್ಯಮದ ಸುಸ್ಥಿರತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಟ್ಯಾಕ್ಸಾನಮಿ ಬಿಡುಗಡೆಯು ಒಂದು ಐತಿಹಾಸಿಕ ಹೆಜ್ಜೆ ಎಂದು ನಾನು ಹೇಳಬಯಸುತ್ತೇನೆ. ಏಕೆಂದರೆ, ಇದು ಉಕ್ಕಿನ ಉತ್ಪಾದನೆಯನ್ನು ಸಂಪೂರ್ಣವಾಗಿ ಮಾಲಿನ್ಯ ಮುಕ್ತಗೊಳಿಸಲು ಸಮಗ್ರವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ಪರಿಸರಕ್ಕೆ ಪೂರಕವಾಗಿ ಹೊಣೆಗಾರಿಕೆಯನ್ನು ಉತ್ತೇಜಿಸುವ ಕಾರ್ಯವನ್ನೂ ಮಾಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಉಕ್ಕಿನ ಕ್ಷೇತ್ರವು ತನ್ನ ಬೆಳವಣಿಗೆಯ ಪಥವನ್ನು ಮತ್ತಷ್ಟು ವಿಸ್ತೃತಗೊಳಿಸಿಕೊಂಡು, ಸುಸ್ಥಿರ ಜಾಗತಿಕ ಪರಿವರ್ತನೆಗೆ ನಾಂದಿ ಹಾಡಿದೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಗ್ರೀನ್ ಸ್ಟೀಲ್ ಮಿಷನ್ ನ ಕಾರ್ಯಸೂಚಿಯ ಪ್ರಕಾರ; ಹೈಡ್ರೋಜನ್ ಆಧಾರಿತ ಉಕ್ಕು ಉತ್ಪಾದನೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರುವುದು, ಸುಸ್ಥಿರ ಅಭಿವೃದ್ಧಿಗೆ ಹಸಿರುಪೂರಕ ತಂತ್ರಜ್ಞಾನಗಳನ್ನು ಉತ್ತೇಜಿಸುವುದು, ಉಕ್ಕಿನ ಮರು ಬಳಕೆ ಹೆಚ್ಚಳ ಮಾಡುವುದು ಮತ್ತು ಉತ್ತೇಜಿಸುವುದು, ಉಕ್ಕಿನ ಸುಸ್ಥಿರ ಉತ್ಪಾದನೆಗೆ ಸಂಶೋಧನೆ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ ಎಂದು ಕೇಂದ್ರ ಸಚಿವರು ಪ್ರಮುಖವಾಗಿ ಉಲ್ಲೇಖಿಸಿದರು.
ಈಗ ಬಿಡುಗಡೆಯಾಗಿರುವ ಟ್ಯಾಕ್ಸಾನಮಿಯು ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸುತ್ತದೆ. ಜಾಗತಿಕವಾಗಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಚೌಕಟ್ಟನ್ನು ರೂಪಿಸಲು ನೀಡಿದ ಕೊಡುಗೆಗಳಿಗಾಗಿ ಉಕ್ಕು ಉತ್ಪಾದಕರು, ನೀತಿ ನಿರೂಪಕರು ಮತ್ತು ಪರಿಸರ ತಜ್ಞರು ಸೇರಿದಂತೆ ಅನೇಕರಿಗೆ ಕೇಂದ್ರ ಸಚಿವರು ಕೃತಜ್ಞತೆ ಸಲ್ಲಿಸಿದರು.
ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ ಮತ್ತು ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರು ಸೇರಿದಂತೆ ಸಚಿವಾಲಯದ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.