ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಿಗೆ ಗ್ರೇಟರ್ ಬೆಂಗಳೂರು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿತ್ತು. ಆದರೆ ಸದನದಲ್ಲಿ ಈ ಬಗ್ಗೆ ಚರ್ಚಿಸಲು ಸದನ ಸಮಿತಿ ರಚಿಸುವ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಆದರೆ ಸದನ ಸಮಿತಿ ರಚನೆಗೂ ಮುನ್ನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಿ ಹೋಯ್ತಾ..? ಅನ್ನೋ ಅನುಮಾನಕ್ಕೆ ಕಾರಣವಾಗಿದೆ ಸರ್ಕಾರದ ನಡೆ. ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರ ಹೆಸರು ನಮೂದು ಮಾಡಲಾಗಿದೆ. ಅಧ್ಯಕ್ಷರ ಹೆಸರು ನಮೂದಿಸಿರುವ ಆಹ್ವಾನ ಪತ್ರಿಕೆ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಆಹ್ವಾನ ಪತ್ರಿಕೆ ಮೂಲಕ ಸರ್ಕಾರಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇನ್ನೂ ರಚನೆ ಆಗಿಲ್ಲ. ಆದರೆ ಇದಕ್ಕಾಗಲೇ ಒಬ್ಬರು ಅಧ್ಯಕ್ಷರು ನಾಮಕರಣ ಆಗಿಬಿಟ್ಟಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವುದು ಎಂದರೆ ಇದೇನಾ..? ಎಂದು ಕಿಚಾಯಿಸಿದ್ದಾರೆ. ಬೆಳೆಯುತ್ತಿರುವ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಮತ್ತು ಉತ್ತಮ ಆಡಳಿತಕ್ಕಾಗಿ ಸಮನ್ವಯತೆ ಸಾಧಿಸಲು ಪ್ರಾಧಿಕಾರ ರಚನೆ ಅಗತ್ಯ ಎಂದು ಸರ್ಕಾರಕ್ಕೆ ಅನಿಸಿದೆ. ಕಳೆದ ಜುಲೈನಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಯಿತು. ಹಾಲಿ ಇರುವ ಬೆಂಗಳೂರು ಆಡಳಿತ ಕುರಿತ ಕಾಯ್ದೆಯನ್ನು ಬದಲಿಸಲು. ನಾನೂ ಸೇರಿದಂತೆ ಅನೇಕ ಶಾಸಕರು ಈ ಬಹಳ ದೊಡ್ಡ ಗಾತ್ರದ ವಿಧೇಯಕವನ್ನು ಅಧ್ಯಯನ ಮಾಡಲು ಮತ್ತು ವಿಸ್ತೃತ ಚರ್ಚೆ ಮಾಡಲು ಈ ವಿಧೇಯಕವನ್ನು ಸದನ ಸಮಿತಿಗೆ ಕಳಿಸಬೇಕು ಎಂದು ಆಗ್ರಹ ಮಾಡಿದ್ದೆವು. ಬಳಿಕ ಉಪಮುಖ್ಯಮಂತ್ರಿಗಳ ಮೂಲಕ ಸದನ ಸಮಿತಿಗೆ ಸಮ್ಮತಿ ಸಿಕ್ಕಿತ್ತು. ಆದರೆ ಈಗಾಗಲೇ ಅಧ್ಯಕ್ಷರ ನೇಮಕದ ಉದ್ದೇಶ ಏನು..? ಎಂದಿದ್ದಾರೆ.
ನನಗೆ ತಿಳಿದಿರುವಂತೆ ಈವರೆಗೆ ಈ ವಿಧೇಯಕ ಕುರಿತ ಸಂಬಂಧಪಟ್ಟ ಸದನ ಸಮಿತಿ ರಚನೆಯಾಗಿಲ್ಲ. ವಿಧೇಯಕವೂ ಈವರೆಗೆ ಕಾಯಿದೆಯಾಗಿಲ್ಲ ಅಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.
ಆದರೆ ಆಗಸ್ಟ್ 15ರ ಸ್ವಾತಂತ್ರೋತ್ಸವಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಆಡಳಿತ ಹೊರಡಿಸಿರುವ ಆಹ್ವಾನ ಪತ್ರಿಕೆ ನನ್ನ ಗಮನಕ್ಕೆ ಬಂದಿದ್ದು, ಈ ಆಹ್ವಾನ ಪತ್ರಿಕೆಯ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಶ್ರೀ ಜಿ.ಎನ್. ನಟರಾಜು ಗಾಣಕಲ್ ಎಂಬುವರ ಹೆಸರನ್ನು ನಮೂದಿಸಿದ್ದಾರೆ. ಇವರೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಎಂದು ಸಂಬೋಧಿಸಲಾಗಿದೆ. ನನಗೆ ನಿಜಕ್ಕೂ ಆಶ್ಚರ್ಯ ಹಾಗೂ ದಿಗ್ಭ್ರಮೆ ಉಂಟು ಮಾಡಿರುವ ಸಂಗತಿ ಇದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನೂ ಸದನ ಸಮಿತಿಯೇ ರಚನೆಯಾಗಿಲ್ಲ. ಹೀಗಿರುವಾಗ, ಸದನ ಸಮಿತಿಯಲ್ಲಿ ಚರ್ಚೆಯಾಗಿ ವಿಧೇಯಕವನ್ನು ಸದನದಲ್ಲಿ ಮಂಡಿಸಿಲ್ಲ. ಇನ್ನೂ ವಿಧೇಯಕವು ಕಾಯ್ದೆಯಾಗಿಲ್ಲ. ಹಾಗಾದರೆ ಗ್ರೇಟರ್ ಬೆಂಗಳೂರು ರಚನೆ ಆಗಿಲ್ಲ. ಇನ್ನೂ ರಚನೆಯಾಗದ ಒಂದು ಪ್ರಾಧಿಕಾರಕ್ಕೆ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡಿದ್ಯಾ..? ಈ ರೀತಿ ರಚನೆಯಾದ ಒಂದು ಪ್ರಾಧಿಕಾರಕ್ಕೆ ಅಧ್ಯಕ್ಷ ಎನ್ನುವ ಓರ್ವ ವ್ಯಕ್ತಿಯನ್ನು ಜಿಲ್ಲಾಡಳಿತ ನಡೆಸಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯನ್ನಾಗಿ ಕರೆದಿರುವ ಕ್ರಮಕ್ಕೆ ಸರ್ಕಾರದ ಸಮ್ಮತಿ ಇದೆಯೇ..? ಒಂದೊಮ್ಮೆ ರಚನೆಯಾಗದಿರುವ ಪ್ರಾಧಿಕಾರಕ್ಕೆ ಈ ವ್ಯಕ್ತಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಎಂದು ತನ್ನನ್ನು ತಾನೇ ಘೋಷಿಸಿಕೊಂಡರೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ..? ಸಾಮಾಜಿಕ ಜಾಲತಾಣಗಳ ನಕಲಿ ಸುದ್ದಿಗಳನ್ನು ಕಂಡುಹಿಡಿಯಲು ಸರ್ಕಾರದಲ್ಲಿ Fact Check ವ್ಯವಸ್ಥೆ ಜಾರಿಗೆ ಬಂದಿದೆ. ಅದು ಏನು ಮಾಡುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವ್ಯಕ್ತಿಯ ಸಾಮಾಜಿಕ ಜಾಲತಾಣದ ವಿವರಗಳನ್ನು ಸರ್ಕಾರ Fact Check ಮಾಡಿ ಕ್ರಮ ಕೈಗೊಳ್ಳುವುದೇ..? ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ. ಆದರೆ ಇನ್ನೂ ರಚನೆಯೇ ಆಗದೆ ಇರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿ ಇರುತ್ತಾರೆ ಎಂದು ಹೇಳಲಾಗಿದೆ. ಇನ್ನು ಉಳಿದ ಶಾಸಕರು, ಪಾಲಿಕೆ ಸದಸ್ಯರು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸದ್ಯಸ್ಯ ಸ್ಥಾನ ಪಡೆಯುತ್ತಾರೆ ಎನ್ನಲಾಗಿದೆ. ಇದೀಗ ರಾಮನಗರ ಜಿಲ್ಲಾಡಳಿತ ಆಹ್ವಾನ ಪತ್ರಿಕೆ ಮಾಡಿಸುವಾಗ ಈ ರೀತಿಯ ತಪ್ಪನ್ನು ಮಾಡಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಂಬಂಧ ಪಟ್ಟವರು ಸ್ಪಷ್ಟನೆ ಕೊಡಬೇಕಿದೆ. ಹುದ್ದೆ ಹೆಸರು ಬದಲಾಗಿ ಪ್ರಿಂಟ್ ಆಗಿದ್ಯಾ ಅನ್ನೋದನ್ನಾದರೂ ತಿಳಿಸಬೇಕಿದೆ. ಇಲ್ಲದಿದ್ದರೆ ಗೊಂದಲದ ಗೂಡಾಗಲಿದೆ.
ಕೃಷ್ಣಮಣಿ