ಅಕಾಲಿಕ ಮಳೆ ಹಾಗೂ ನೆರೆಯಿಂದಾಗಿ ಹಾವೇರಿ ಜೆಲ್ಲೆಯ ಹಲವಾರು ಗ್ರಾಮಗಳ ನೂರಾರು ಕುಟುಂಬಗಳು ಸಂಕಟಕ್ಕೆ ಸಿಲುಕಿವೆ. ಕೆಲವು ಕಡೆ ದಾರಿ ಕಾಣದೇ ಹಲವು ಕುಟುಂಬಗಳು ಗ್ರಾಮ ಪಂಚಾಯಿತಿ ಅಂಗಳದಲ್ಲೇ ವಾಸ್ತವ್ಯ ಹೂಡಿ ವಿಶಿಷ್ಟ ಪ್ರತಿಭಟನೆಗೆ ಮುಂದಾಗಿದ್ದಾರೆ.
ಅತಿವೃಷ್ಟಿಯಿಂದಾಗಿ ಮನೆಗಳನ್ನ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರೋ ನೂರಾರು ಕಟುಂಬಗಳು ಈಗ ಬೀದಿಗೆ ಬಂದಿದ್ದು, ಇನ್ನೊಂದು ಕಡೆಗೆ ಅಧಿಕಾರಿಗಳ ಲಂಚಾವತಾರಕ್ಕೂ ಕುಟುಂಬಗಳು ಬಲಿಯಾಗಿವೆ. ಕೊನೆಗೆ ರೋಷಿಹೋದ ಸಿಎಂ ತವರು ಕ್ಷೇತ್ರದ ಜನರು ನಮಗೆ ನ್ಯಾಯ ಕೊಡಿ ಅಂತಾ ಗ್ರಾಮ ಪಂಚಾಯಿತಿಯನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.
ಶಿಗ್ಗಾವಿ ತಾಲೂಕಿನ ಕುಂದೂರು ನೀರಲಗಿ ಹಾಗೂ ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ಸಂತ್ರಸ್ತರು ಪಂಚಾಯತಿಗಳಿಗೇ ನುಗ್ಗಿದ್ದಾರೆ. ಅಲ್ಲಿಯೇ ವಾಸ್ತವ್ಯ ಹೂಡಿ ಅಡುಗೆಯನ್ನು ಮಾಡಿ ಟೆಂಟ್ ಮನೆಗಳನ್ನು ನಿರ್ಮಿಸಿಕೊಂಡು ಪರಿಹಾರಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ನೆರೆಯಿಂದ ಬಿದ್ದ ಮನೆಗಳಿಗೆ ಹಣ ಕೊಡೋದಕ್ಕೆ, ಹೊಸ ಮನೆಗಳ ಮಂಜೂರಾತಿಗೆ ಅಧಿಕಾರಿಗಳು ಕಮಿಷನ್ ಹಿಂದೆ ಬಿದ್ದಾರೆ. ಎ, ಬಿ ಹಾಗೂ ಸಿ ಕೆಟಗರಿಯಲ್ಲಿ ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬಂದಿವೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ ಸಂತ್ರಸ್ತರನ್ನ ಮನವೊಲಿಸುವುದಕ್ಕೆ ಪ್ರಯತ್ನಿಸಿ, ಗ್ರಾಮ ಪಂಚಾಯಿತಿಗಳನ್ನ ತೆರವು ಮಾಡುವಂತೆ ಮನವಿ ಮಾಡಿದ್ದಾರೆ.





