ರಾಜ್ಯ ಸರ್ಕಾರಿ ನೌಕರರ ಚಟುವಟಿಕೆಗಳನ್ನು ನಿರ್ಬಂಧಿಸಲು ರಾಜ್ಯ ಬಿಜೆಪಿ ಸರ್ಕಾರ ‘ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು-2020’ ಎಂಬ ಪರಿಷ್ಕೃತ ಕರಡು ನಿಯಮ ಪ್ರಕಟಿಸಿದೆ. ರಾಜ್ಯಪತ್ರದಲ್ಲಿ ಈ ಕುರಿತ ಅಧಿಸೂಚನೆ ಪ್ರಕಟವಾಗಿದ್ದು, ಆ ನಿಯಮಗಳಿಗೆ ಆಕ್ಷೇಪಗಳಿದ್ದಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ದೂರು ಸಲ್ಲಿಸಲು ಕಾಲಾವಕಾಶ ನೀಡಿದೆ.
ಈಗಾಗಲೇ ಇರುವ ಸರ್ಕಾರಿ ನೌಕರರ ನಡವಳಿಕೆ ಮತ್ತು ಸೇವಾ ಶಿಸ್ತಿನ ಕುರಿತ ನಿಯಮಗಳಿಗೆ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಮುಖ್ಯವಾಗಿ ಈವರೆಗೆ ನೌಕರರಿಗೆ ಮಾತ್ರ ಸೀಮಿತವಾಗಿದ್ದ ನಿಯಮಗಳನ್ನು ಇದೀಗ ಅವರ ಪತಿ/ ಪತ್ನಿ, ತಂದೆ/ತಾಯಿ, ಮಕ್ಕಳು ಮತ್ತು ರಕ್ತ ಸಂಬಂಧಿಗಳನ್ನೂ ಒಳಗೊಂಡಂತೆ ಅವರ ಕುಟುಂಬವರ್ಗದವರೆಲ್ಲರಿಗೂ ಅನ್ವಯವಾಗುವಂತೆ ವಿಸ್ತರಿಸಲಾಗಿದೆ. ಜೊತೆಗೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಯಾವುದೇ ರೀತಿಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮುಕ್ತ ಅವಕಾಶವಿಲ್ಲ. ಯಾವುದೇ ಬಗೆಯ ಹೋರಾಟ, ಪ್ರತಿಭಟನೆ, ಧರಣಿಗಳಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ಅಷ್ಟೇ ಅಲ್ಲ; ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಕವಿತೆ, ಕಥೆಯಿಂದ ಹಿಡಿದು, ಲೇಖನ, ವಿಮರ್ಶೆಯವರೆಗೆ ಯಾವುದೇ ಬರಹ, ಅಭಿಪ್ರಾಯಗಳನ್ನು ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಪೂರ್ವಾನುಮತಿ ಇಲ್ಲದೆ ಅವಕಾಶವಿಲ್ಲ!
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಾಗೆ ನೋಡಿದರೆ; ಸರ್ಕಾರಿ ನೌಕರರು ಸರ್ಕಾರದ ನೀತಿ- ನಿಲುವುಗಳ ಬಗ್ಗೆಯಾಗಲೀ, ಕಾರ್ಯಕ್ರಮಗಳ ಬಗ್ಗೆಯಾಗಲೀ, ಯಾವುದೇ ಬಗೆಯ ಅಭಿಪ್ರಾಯ, ಟೀಕೆ, ಟಿಪ್ಪಣಿ ಮಾಡುವಂತಿಲ್ಲ. ದೇಶ ಮತ್ತು ರಾಜ್ಯದ ಪ್ರಭುತ್ವ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ, ಅಪಮಾನ ಮಾಡುವಂತಹ ಹೇಳಿಕೆಗಳನ್ನಾಗಲೀ, ಚಟುವಟಿಕೆಗಳನ್ನಾಗಲೀ ನಡೆಸುವುದು ಅಪರಾಧ ಎಂಬಂತಹ ಮೂಲಭೂತ ಬದ್ಧತೆ ಮತ್ತು ಶಿಸ್ತಿನ ನಿಯಮಗಳು ಹಿಂದಿನಿಂದಲೂ ಇವೆ. ಅವುಗಳ ಬಗ್ಗೆ ಯಾರ ತಕರಾರೂ ಇಲ್ಲ. ಅಂತಹ ದೇಶದ ಹಿತ ಕಾಯುವ ಕರ್ತವ್ಯ ಕೇವಲ ಸರ್ಕಾರಿ ನೌಕರರದ್ದಷ್ಟೇ ಅಲ್ಲ; ದೇಶದ ಪ್ರತಿ ನಾಗರಿಕರದ್ದೂ ಕೂಡ.
ಆದರೆ, ಇದೀಗ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, ಸರ್ಕಾರಿ ನೌಕರರು ಮಾತ್ರವಲ್ಲ; ಅವರ ಕುಟುಂಬದವರು ಕೂಡ ಯಾವುದೇ ಸಂಘಟನೆ, ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗುವಂತಿಲ್ಲ. ಸರ್ಕಾರದ ವಿರುದ್ಧದ ಯಾವುದೇ ಪ್ರತಿಭಟನೆ, ಧರಣಿ, ಸತ್ಯಾಗ್ರಹದಲ್ಲಿ ಭಾಗಿಯಾಗುವಂತಿಲ್ಲ. ಸರ್ಕಾರದ ನೀತಿ-ನಿಲುವುಗಳು, ಕಾರ್ಯಕ್ರಮ- ಯೋಜನೆಗಳನ್ನಾಗಲೀ, ಯಾವುದೇ ಚಟುವಟಿಕೆಗಳನ್ನಾಗಲೀ ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸುವಂತಿಲ್ಲ; ವಿಮರ್ಶಿಸುವಂತಿಲ್ಲ. ಪತ್ರಿಕೆಗಳಿಗೆ ಲೇಖನ, ಟಿವಿ, ರೇಡಿಯೋಗಳಿಗೆ ಅಭಿಪ್ರಾಯ ನೀಡುವುದು ಕೂಡ ನಿಷೇಧಿತ. ಸರ್ಕಾರದ ವಿಷಯವಷ್ಟೇ ಅಲ್ಲದೆ, ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರುದ್ಧ ಕೂಡ ಯಾವುದೇ ಬಗೆಯ ಲಿಖಿತ, ಮೌಖಿಕ ಟೀಕೆ ಟಿಪ್ಪಣಿ ಮಾಡುವಂತಿಲ್ಲ.
ಸರ್ಕಾರ, ರಾಜಕೀಯ ಪಕ್ಷ, ರಾಜಕೀಯ ಸಿದ್ಧಾಂತ, ನಿಲುವುಗಳಿಗೆ ಹೊರತಾದ ಸಾಮಾನ್ಯ ಮಾನವ ಅಭಿವ್ಯಕ್ತಿಯ ಕವಿತೆ, ಕತೆ, ಕಾದಂಬರಿ, ಲೇಖನ, ಪ್ರಬಂಧಗಳನ್ನು ಪ್ರಕಟಿಸುವ ಮುನ್ನ ನೌಕರರು ಮತ್ತು ಅವರ ಅವಲಂಬಿತ ಕುಟುಂಬವರ್ಗದವರು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ! ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲು ಕೂಡ ನೌಕರರು ಮತ್ತು ಅವರ ಅವಲಂಬಿತರು ಸರ್ಕಾರದ ಅನುಮತಿ ಪಡೆಯಬೇಕು. ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಳ್ಳಲು, ದೇಣಿಗೆ ನೀಡಲು, ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು, ವ್ಯವಹಾರ- ಉದ್ಯೋಗ ನಡೆಸಲು ಕೂಡ ನೌಕರರು ಮತ್ತು ಅವರ ಅವಲಂಬಿತರು ಸರ್ಕಾರದ ಅನುಮತಿ ಪಡೆಯಬೇಕು! ಈ ನಿಯಮಗಳನ್ನು ಉಲ್ಲಂಘಿಸಿದರೆ ಅಮಾನತು, ವಜಾದಂತಹ ಗಂಭೀರ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ!
ಇದೀಗ ಈ ಹೊಸ ಕರಡು ಅಧಿಸೂಚನೆ ವಿವಾದಕ್ಕೆಡೆಯಾಗಿದ್ದು, ಸರ್ಕಾರಿ ನೌಕರರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳೂ ಮತ್ತು ಹೋರಾಟಗಾರರು ಸರ್ಕಾರ ಇಂತಹ ಹೊಸ ನಿಯಮಗಳ ಮೂಲಕ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಮೇಲೆ ಸರ್ವಾಧಿಕಾರಿ ದಬ್ಬಾಳಿಕೆ ನಡೆಸುತ್ತಿದೆ. ಸರ್ಕಾರಿ ನೌಕರರನ್ನಷ್ಟೇ ಅಲ್ಲದೆ ಅವರ ಮನೆಮಂದಿಯನ್ನೂ ಆಡಳಿತದ ಗುಮಾರನ್ನಾಗಿಸುವ ಮೂಲಕ ವ್ಯವಸ್ಥೆಯಲ್ಲಿ ಯಾವುದೇ ಬಗೆಯ ಪ್ರತಿರೋಧ, ಭಿನ್ನಮತಗಳು ಹುಟ್ಟದಂತೆ ಬಗ್ಗುಬಡಿಯುವ ಯತ್ನ. ಸರ್ಕಾರಿ ನೌಕರರು ಎಂದರೆ ಯಾವುದೇ ಸ್ವಂತ ಅಭಿಪ್ರಾಯ, ಅಭಿರುಚಿ, ಅಭಿವ್ಯಕ್ತಿಗಳೇ ಇಲ್ಲದ ಯಂತ್ರಗಳು ಎಂಬಂತೆ ಸರ್ಕಾರ ನಡೆಸಿಕೊಳ್ಳಲು ಮುಂದಾಗಿದೆ. ಜೊತೆಗೆ ಅವರ ಕುಟುಂಬದವರನ್ನೂ ಈ ನಿಯಮಗಳಡಿ ಸರ್ಕಾರದ ಜೀತದಾಳುಗಳಂತೆ ನಡೆಸಿಕೊಳ್ಳಲು ನಡೆಸಿದ ಯತ್ನ ಈ ಹೊಸ ನಿಯಮಗಳು ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಹಾಗೆ ನೋಡಿದರೆ, ರಾಜ್ಯ ಸರ್ಕಾರದ ಈ ಹೊಸ ನಿಯಮಾವಳಿಗಳು ದಿಢೀರನೇ ಅಸ್ತಿತ್ವಕ್ಕೆ ಬಂದವುಗಳೇನಲ್ಲ. 1999ರಲ್ಲಿ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸರ್ಕಾರಿ ನೌಕರರು ಯಾವುದೇ ಮಾಧ್ಯಮಗಳಿಗೆ ಯಾವುದೇ ಬಗೆಯ ಹೇಳಿಕೆ, ಅಭಿಪ್ರಾಯ, ಲೇಖನಗಳನ್ನು ಬರೆಯುವುದು ಸರ್ಕಾರದ ವಿರುದ್ಧದ ನಡೆ. ಸಾರ್ವಜನಿಕ ಭಾಷಣವೂ ಸೇರಿದಂತೆ ಎಲ್ಲಾ ಬಗೆಯ ಅಂತಹ ಚಟುವಟಿಕೆಗಳಿಗೆ ಸರ್ಕಾರದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಯಾವುದೇ ಬಗೆಯ ಸಾಮಾಜಿಕ ಹೋರಾಟ, ಸಂಘಟನೆಗಳಲ್ಲಿ ಭಾಗಿಯಾಗಬಾರದು. ಉಪನ್ಯಾಸಕರು ಸೇರಿದಂತೆ ಎಲ್ಲಾ ನೌಕರರು ಯಾವುದೇ ವಿಷಯದ ಕುರಿತು ಯಾವುದೇ ಬರಹ, ಭಾಷಣಗಳನ್ನು ಪ್ರಕಟಿಸುವ, ಪ್ರಸಾರ ಮಾಡುವ ಮುನ್ನ ಅದಕ್ಕೆ ಸರ್ಕಾರದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂಬ ನಿಯಮ ಮಾಡಲಾಗಿತ್ತು. ಆಗ ದೊಡ್ಡ ಮಟ್ಟದಲ್ಲಿ ರಾಷ್ಟ್ರವ್ಯಾಪಿ ಚರ್ಚೆಯಾಗಿ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ.
ಆ ಬಳಿಕ ಮೋದಿಯವರ ಸರ್ಕಾರ, ಕಳೆದ 2016ರಲ್ಲಿ ಕೂಡ ಕೇಂದ್ರ ಸರ್ಕಾರಿ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು, ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಮತ್ತು ಅದರ ಪಾಲಿಸಿಗಳ ವಿರುದ್ಧ ಯಾವುದೇ ಬಗೆಯ ವ್ಯತಿರಿಕ್ತ ಅಭಿಪ್ರಾಯ, ಟೀಕೆ-ಟಿಪ್ಪಣಿ ಮಾಡದಂತೆ ತಡೆಯಲು ಹೊಸ ನಿಯಮಾವಳಿಗಳನ್ನು ಸೇರಿಸಿತ್ತು. ಆಗಲೂ ಆ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಕರ್ನಾಟಕ ಸರ್ಕಾರ ಅದೇ ದಾರಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಈವರೆಗಿನ ವಿವಿಧ ಬಿಜೆಪಿ ಸರ್ಕಾರಗಳು ಕೇವಲ ಸರ್ಕಾರಿ ನೌಕರರನ್ನು ಗುರಿಯಾಗಿಟ್ಟುಕೊಂಡು ಅಂತಹ ನಿರ್ಬಂಧಗಳನ್ನು ಹೇರಿದ್ದರೆ, ಈ ಬಾರಿ ಸರ್ಕಾರಿ ನೌಕರರ ಜೊತೆ ಅವರನ್ನು ಅವಲಂಬಿಸಿರುವ ಇಡೀ ಕುಟುಂಬ ವರ್ಗವನ್ನೇ ಅಂತಹ ಕಡಿವಾಣದಲ್ಲಿ ಬಗ್ಗಿಸಲು ಯತ್ನಿಸಲಾಗಿದೆ.
ಆದರೆ, ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟ ಮತ್ತು ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಮಾಜಿಕ ಹೋರಾಟಗಾರರು, ಚಳವಳಿಗಾರರು, ವಿವಿಧ ಮಾಧ್ಯಮಗಳ ದಿಟ್ಟ ಪತ್ರಕರ್ತರು ಮುಂತಾದವರನ್ನೇ ಗುರಿಯಾಗಿಸಿಕೊಂಡು ಜಾರಿಗೆ ತರಲು ಹೊರಟಿರುವ ಈ ಹೊಸ ನಿಯಮಗಳು, ಮೂಲಭೂತವಾಗಿ ಸಂವಿಧಾನ ವಿರೋಧಿ ಎಂಬುದು ತ್ರಿಪುರಾ, ಕೇರಳ ಸೇರಿದಂತೆ ಹಲವು ಹೈಕೋರ್ಟ್ಗಳ ಇತ್ತೀಚಿನ ತೀರ್ಪುಗಳ ಹಿನ್ನೆಲೆಯಲ್ಲಿ ಗಮನಾರ್ಹ. ಯಾವುದೇ ಸರ್ಕಾರಿ ನೌಕರನ ಅಭಿವ್ಯಕ್ತಿ ಸ್ವಾತಂತ್ರ ಹರಣ ಮಾಡುವ ಇಂತಹ ನಿರ್ಬಂಧಗಳು ಸಂವಿಧಾನದ 14 ಮತ್ತು 19ನೇ ವಿಧಿಗಳ ಉಲ್ಲಂಘನೆಯಾಗುತ್ತದೆ. ಪ್ರತಿ ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಅದನ್ನು ಕಿತ್ತುಕೊಳ್ಳುವುದು ಸಂವಿಧಾನಿಕ ಕರ್ತವ್ಯಗಳ ನೆಪವೊಡ್ಡಿ ಸಂವಿಧಾನ ಮತ್ತು ಸಂವಿಧಾನಿಕ ಹಕ್ಕುಗಳನ್ನು ದಮನ ಮಾಡಿದಂತೆಯೇ ಎಂಬ ಅಭಿಪ್ರಾಯ ಕೇಳಿಬಂದಿದೆ.
ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ವಕೀಲ ಕೆ ಪಿ ಶ್ರೀಪಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಎಲ್ಲಾ ಬಗೆಯ ಸಾಂಸ್ಕೃತಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು, ಅವರ ಸಾಹಿತ್ಯಕ ಮತ್ತು ಸಾಮಾಜಿಕ ಕ್ರಿಯಾಶೀಲತೆಯನ್ನು ಕಿತ್ತುಕೊಳ್ಳುವ ಸರ್ಕಾರದ ಉದ್ದೇಶಿತ ನಿಯಮಗಳು ಖಂಡಿತವಾಗಿಯೂ ದೇಶವನ್ನು ಸರ್ವಾಧಿಕಾರಿ ಪ್ರಭುತ್ವಕ್ಕೆ ಒಗ್ಗಿಸುವ ಬಿಜೆಪಿ ಮತ್ತು ಸಂಘಪರಿವಾರದ ಅಜೆಂಡಾದ ಭಾಗವೇ. ಸರ್ಕಾರ ತನ್ನ ವಿರುದ್ಧ ಮಾತ್ರವಲ್ಲದೆ, ಒಟ್ಟೂ ವ್ಯವಸ್ಥೆಯ ವಿರುದ್ಧ ಯಾರೂ ದನಿ ಎತ್ತಬಾರದು, ಯಾವ ಬಗೆಯ ಪ್ರತಿರೋಧವನ್ನೂ ಒಡ್ಡಬಾರದು ಎಂಬ ಉದ್ದೇಶದಿಂದಲೇ ಇಂತಹ ಸಂವಿಧಾನವಿರೋಧಿ ಕ್ರಮಗಳಿಗೆ ಮುಂದಾಗಿದೆ. ಇದನ್ನು ಪ್ರತಿಭಟಿಸದೇ ಇದ್ದರೆ ಸಮಾಜದ ಬಹುಪಾಲು ಮಂದಿ ಸಂವಿಧಾನಿಕ ಹಕ್ಕನ್ನೇ ಕಳೆದುಕೊಂಡು ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ತ್ರಿಪುರಾ ಸರ್ಕಾರ, 2017ರಲ್ಲಿಅಲ್ಲಿನ ಮೀನುಗಾರಿಕಾ ಇಲಾಖೆಯ ನೌಕರರೊಬ್ಬರನ್ನು ರಾಜಕೀಯ ಪಕ್ಷವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಆ ಕುರಿತು ಫೇಸ್ ಬುಕ್ ನಲ್ಲಿ ಫೋಸ್ಟ್ ಹಂಚಿಕೊಂಡದ್ದಕ್ಕಾಗಿ ಅವರ ನಿವೃತ್ತಿಗೆ ನಾಲ್ಕು ದಿನಗಳ ಮುನ್ನ ವಜಾ ಮಾಡಿತ್ತು. ಆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಪೀಠ, “ಸರ್ಕಾರಿ ನೌಕರರು ಎಂಬ ಕಾರಣಕ್ಕೆ ವ್ಯಕ್ತಿಯ ಸಂವಿಧಾನಿಕ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗದು. ಆಕೆಗೆ ತನ್ನದೇ ಆದ ರಾಜಕೀಯ ದೃಷ್ಟಿಕೋನ, ನಂಬಿಕೆ ಮತ್ತು ನಿಲುವು ಹೊಂದಲು ಅರ್ಹಳು ಮತ್ತು ಅಂತಹ ರಾಜಕೀಯ ನಿಲುವು ವ್ಯಕ್ತಪಡಿಸುವ ಮುಕ್ತ ಸ್ವಾತಂತ್ರ್ಯವನ್ನು ಕೂಡ ಆಕೆ ಸರ್ಕಾರಿ ಸೇವಕಿ ಎಂಬ ಕಾರಣಕ್ಕೆ ಕಿತ್ತುಕೊಳ್ಳಲಾಗದು” ಎಂದು ಹೇಳಿತ್ತು.
ಅಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಕೂಡ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿತ್ತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅಲ್ಲಿನ ಸರ್ಕಾರಿ ಸಾರಿಗೆ ಬಸ್ ಕಂಡಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿತ್ತು. ಆ ಪ್ರಕರಣದಲ್ಲಿ “ಆತ ಸರ್ಕಾರಿ ನೌಕರ ಎಂಬ ಕಾರಣಕ್ಕೆ ತನ್ನ ವೈಯಕ್ತಿಕ ನಿಲುವುಗಳನ್ನು ಅಭಿವ್ಯಕ್ತಿಗೊಳಿಸುವ ಹಕ್ಕನ್ನು ಕಿತ್ತುಕೊಳ್ಳಲಾಗದು. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರತಿ ಸರ್ಕಾರಿ ವ್ಯವಸ್ಥೆಯೂ ಪ್ರಜಾಸತ್ತಾತ್ಮಕ ಸೂತ್ರಗಳ ಮೇಲೆಯೇ ನಡೆಯಬೇಕು. ಆರೋಗ್ಯಕರ ಟೀಕೆ- ಟಿಪ್ಪಣಿಗಳು ಯಾವುದೇ ವ್ಯವಸ್ಥೆಗೆ ಪೂರಕ” ಎಂದು ನ್ಯಾಯಮೂರ್ತಿ ಮಹಮ್ಮದ್ ಮುಸ್ತಾಕ್ ಹೇಳಿದ್ದರು.
ಅದೇ ನ್ಯಾಯಾಧೀಶರ ಮುಂದೆ ಬಂದಿದ್ದ ಮತ್ತೊಂದು ಪ್ರಕರಣದಲ್ಲಿ, ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿವಿ ನೌಕರರೊಬ್ಬರನ್ನು ವಿವಿಯ ಬಗ್ಗೆ ವಿಂಡಬನಾತ್ಮಕ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕಾಗಿ ಅಮಾನತುಗೊಳಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾ. ಮುಸ್ಕಾಕ್, “ಶಿಸ್ತು ಮತ್ತು ಗುಲಾಮಗಿರಿ ನಡುವೆ ವ್ಯತ್ಯಾಸವಿದೆ. ಸಂಸ್ಥೆಯ ಒಟ್ಟಾರೆ ಹಿತಾಸಕ್ತಿಗೆ ಪೂರಕವಾಗಿ ಇಂತಹ ವಿಡಂಬನೆಯ ಹೇಳಿಕೆಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದು ತಪ್ಪಲ್ಲ. ಅದು ಆ ವ್ಯಕ್ತಿಯ ಮುಕ್ತ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ. ಮುಕ್ತ ವಾಕ್ ಸ್ವಾತಂತ್ರ್ಯ ಎಂಬುದು ಪ್ರಜಾಸತ್ತೆಯ ಅಡಿಗಲ್ಲು. ಹಾಗಾಗಿ ಎಲ್ಲಾ ಸಾಂಸ್ಥಿಕ ವ್ಯವಸ್ಥೆಗಳಲ್ಲೂ ಅದರ ಭಾಗವಾಗಿರುವ ವ್ಯಕ್ತಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮುಕ್ತ ಸ್ವಾತಂತ್ರ್ಯ ಇರಬೇಕಾದುದು ಅಗತ್ಯ” ಎಂದು ಹೇಳಿದ್ದರು.
ಈ ನ್ಯಾಯಾಲಯಗಳ ಆದೇಶ ಮತ್ತು ನಿರ್ದೇಶನಗಳ ಹಿನ್ನೆಲೆಯಲ್ಲಿ ಕೂಡ ಕರ್ನಾಟಕ ಸರ್ಕಾರ ಈಗ ತರಲು ಹೊರಟಿರುವ ನಿಯಮಾಗಳಿಗಳು ಸ್ಪಷ್ಟವಾಗಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ ಮತ್ತು ವ್ಯಕ್ತಿಗಳಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ದಮನವಾಗಿದೆ ಎಂಬುದನ್ನು ತಳ್ಳಿಹಾಕಲಾಗದು. ತಮ್ಮ ಆಡಳಿತದ ವಿರುದ್ಧ ದನಿ ಎತ್ತುವವರನ್ನು ಯುಎಪಿಎ, ದೇಶದ್ರೋಹ ಮತ್ತಿತರ ಅಮಾನುಷ ಕಾನೂನು ಮೂಲಕ ಬಗ್ಗುಬಡಿಯುವ, ಪ್ರತಿರೋಧವನ್ನು ಹತ್ತಿಕ್ಕುವ ವರಸೆಗಳ ಮುಂದುವರಿದ ಭಾಗ ಎಂಬುದು ಈಗ ವ್ಯಕ್ತವಾಗುತ್ತಿರುವ ಆತಂಕ.
ಆ ಹಿನ್ನೆಲೆಯಲ್ಲಿ ನೋಡಿದರೆ, ಸರ್ಕಾರದ ಈ ಕ್ರಮಗಳು ಕೇವಲ ಬಿಡಿ ಯತ್ನವಲ್ಲ. ದೇಶದ ಬದಲಾಯಿಸುವ ಉದ್ದೇಶದಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಸಾರ್ವಜನಿಕವಾಗಿಯೇ ಹೇಳಿಕೊಳ್ಳುವ ಬಿಜೆಪಿ ಮತ್ತು ಅದರ ಪರಿವಾರದ ಆಶಯದಂತೆ ಈಗಾಗಲೇ ದೇಶದಲ್ಲಿ ಆಗಿರುವ ಕಾರ್ಮಿಕ ಕಾನೂನು ತಿದ್ದುಪಡಿ, ಭೂ ಸುಧಾರಣಾ ಮಸೂದೆ ತಿದ್ದುಪಡಿ ಮುಂತಾದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಜೆಗಳಿಗೆ ನೀಡಿರುವ ಹಕ್ಕು ಮತ್ತು ಅವಕಾಶಗಳನ್ನು ಕಿತ್ತುಕೊಳ್ಳುವ ಯತ್ನಗಳ ಮುಂದುವರಿದ ಭಾಗವಾಗಿ ಈ ಹೊಸ ನಿಯಮ ಜಾರಿಗೆ ಯತ್ನ ನಡೆದಿದೆ.