ಬೆಂಗಳೂರು: ಕಳೆದ ಒಂದು ವರ್ಷದಿಂದ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಈ ಗ್ಯಾರಂಟಿಗಳೇ ಅಧಿಕಾರಕ್ಕೂ ಕಾರಣ. ಈಗ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಾಗುತ್ತಿದೆ. ಈ ಮಧ್ಯೆ ಸರ್ಕಾರ ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಮೌಲ್ಯಮಾಪನಕ್ಕೆ ಸಿದ್ಧತೆ ನಡೆಸಿದೆ.
ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳ ಪರಿಣಾಮ ಕುರಿತು ಮೌಲ್ಯಮಾಪನಕ್ಕೆ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಅಧ್ಯಯನ ಮಾಡಿ, ಮೌಲ್ಯಮಾಪನ ವರದಿ ಸಲ್ಲಿಸುವಂತೆ ಸರಕಾರ ಪ್ರಾಧಿಕಾರಕ್ಕೆ ಸೂಚಿಸಿದೆ. ಅದರಂತೆ ಎರಡು ಸುತ್ತಿನ ಸಭೆ ನಡೆಸಿರುವ ಪ್ರಾಧಿಕಾರ, ಮೌಲ್ಯಮಾಪನ ಕ್ರಿಯೆಗೆ ಕೈ ಹಾಕಲಿದೆ.

ಐದು ಗ್ಯಾರಂಟಿಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 52,000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ನಾನಾ ದತ್ತಾಂಶ ಆಧರಿಸಿ ಪ್ರಾಧಿಕಾರವು ಮೌಲ್ಯಮಾಪನ ವಿಧಾನ ನಿಗದಿಪಡಿಸಲಿದೆ. ಅದೇ ವಿಧಾನವನ್ನು ಗ್ಯಾರಂಟಿಗಳ ಮೌಲ್ಯಮಾಪನಕ್ಕೂ ಬಳಸುವ ಸಾಧ್ಯತೆ ಇದೆ. ಶಕ್ತಿ ಯೋಜನೆಯಿಂದ ಹಿರಿಯ ನಾಗರಿಕರು, ಶಾಲಾ ಮಕ್ಕಳಿಗೆ ಪ್ರಯಾಣ ದುಸ್ತರವಾಗಿದೆ. ಸರಿಯಾಗಿ ಅಕ್ಕಿ ವಿತರಿಸಲು ಆಗದೆ, 170 ರೂ. ಹಣ ನೀಡಲಾಗುತ್ತಿದೆ. ಇನ್ನೂ ಹಲವರಿಗೆ ಗೃಹ ಲಕ್ಷ್ಮೀ ಯೋಜನೆ ಕೈ ಸೇರಿಲ್ಲ. ಒಂದೇ ಕುಟುಂಬದ ಹಲವರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಕುರಿತು ಮೌಲ್ಯಮಾಪನ ಮಾಡುವ ದೃಷ್ಟಿಯಿಂದ ಸರ್ಕಾರ ಈ ಸಮಿತಿಗೆ ಸೂಚಿಸಿದೆ. ಈ ಸಮಿತಿ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಸೇವೆ ಒದಗಿಸುವ ಸಂಬಂಧ ಶಿಫಾರಸು ಮಾಡಲಿದೆ. ಯಾವ ರೀತಿ ಸಮಿತಿ ವರದಿ ಸಲ್ಲಿಸಲಿದೆ ಎಂಬುವುದನ್ನು ನೋಡಬೇಕಿದೆ.