ದೇಶದಾದ್ಯಂತ ಕೋವಿಡ್ ಎರಡನೇ ಅಲೆ ಕುರಿತಂತೆ ಆತಂಕ ಹೆಚ್ಚುತ್ತಿರುವಂತೆಯೇ, ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲ ಇಲಾಖೆಗಳು, ಸಂಘಸಂಸ್ಥೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಎಲ್ಲ ರೀತಿಯಲ್ಲಿ ತಯಾರಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಎಸ್ಸೆಸ್ಸೆಲ್ಸಿ ಪಾಠ ಪ್ರವಚನಗಳ ಪ್ರಗತಿ ಮತ್ತು ಪರೀಕ್ಷಾ ಸಿದ್ಧತೆ ಕುರಿತ ಸಭೆಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ‘ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರಾಗದಂತೆ ಕ್ರಮ ವಹಿಸಬೇಕು. ಶಿಕ್ಷಕರು ಅಥವಾ ಅಧಿಕಾರಿಗಳು ಇದೊಂದು ಸರ್ಕಾರಿ ಆದೇಶ ಎಂದು ತಿಳಿದುಕೊಳ್ಳುವುದಕ್ಕಿಂತ ಸ್ವಯಂಪ್ರೇರಣೆಯಿಂದ ಮಕ್ಕಳಿಗೆ ಪ್ರೇರೇಪಣೆ ನೀಡಬೇಕು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಬೇಕು ಎಂದು ಸಲಹೆ ನೀಡಿದ್ದಾರೆ.
‘ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಈ ಬಾರಿ ಗರಿಷ್ಠ 18 ರಿಂದ 20 ಮಕ್ಕಳಷ್ಟೇ ಇರಬೇಕು. ಪರೀಕ್ಷೆ ಬರೆಯಲು ಮಕ್ಕಳಿಗೆ ಯಾವುದೂ ತೊಂದರೆಯಾಗಬಾರದು. ಮಳೆಗಾಲದಲ್ಲಿ ಪರೀಕ್ಷೆ ನಡೆಯುವುದರಿಂದ, ಮಳೆ ನೀರು ಸೋರದಂತೆ ಕ್ರಮವಹಿಸಬೇಕು. ಸಣ್ಣಪುಟ್ಟ ವಿಷಯಗಳತ್ತಲೂ ಗಮನಹರಿಸಿ ಪರೀಕ್ಷೆಗಳು ಯಶಸ್ವಿಯಾಗುವಂತೆ ಗಮನಹರಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯಗಳು, ನೀರಿನ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಕುರಿತು ಗಮನಹರಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
‘ಕೆಲವು ಶಾಲೆಗಳಲ್ಲಿ ಪಠ್ಯಕ್ರಮ ಮುಗಿದು ಪುನರಾವರ್ತನೆ ಹಂತದಲ್ಲಿದ್ದರೆ, ಕೆಲವು ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಒಂದೆರಡು ಪಠ್ಯಗಳು ಬಾಕಿ ಇವೆ ಎಂಬ ಮಾಹಿತಿಯಿದೆ. ಸರ್ಕಾರಿ ಶಾಲೆಗಳಲ್ಲಿ ಯಾವುದೇ ವಿಷಯದ ಶಿಕ್ಷಕರ ಕೊರತೆಯಿದ್ದರೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಆ ಶಾಲೆಗಳಿಗೆ ನಿಯೋಜಿಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸುರೇಶ್ ಕುಮಾರ್ ನಿರ್ದೇಶಿಸಿದ್ದಾರೆ.