ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಲಾಗಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ಸಿ.ಹೆಚ್ ವಿಜಯ್ ಶಂಕರ್ ಭಾಗಿಯಾಗಿದ್ದರು. ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿದ್ರು. ಆ ಬಳಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿಜಯ್ ಶಂಕರ್ಗೆ ಮಠದಿಂದ ಸನ್ಮಾನ ಮಾಡಲಾಯ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ನಡೆದಾಡುವ ದೇವರು ಈ ರಾಷ್ಟ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ದನಿ ಇಲ್ಲದವರಿಗೆ ದನಿಯಾಗಿ, ತ್ರಿವಿಧ ದಾಸೋಹ ಕೊಟ್ಟಿದ್ದಾರೆ. ಇಡೀ ವಿಶ್ವಕ್ಕೆ ಮಾದರಿಯಾಗಿ ದೇಹ ತ್ಯಾಗ ಮಾಡಿದ್ದಾರೆ. ಸೂರ್ಯ ಚಂದ್ರ ಇರೋವರೆಗೂ ಇಡೀ ಭೂಪಟದಲ್ಲಿ ಶಿವಕುಮಾರ ಶ್ರೀಗಳ ಹೆಸರು ಇರುತ್ತದೆ. ಕಸ್ತೂರಿ ಮಾತ್ರೆ ಮಾರುತಿದ್ದ ಈ ಸಾಮಾನ್ಯ ಸೋಮಣ್ಣ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸಿದ್ದಗಂಗಾ ಮಠ ಕಾರಣ ಅಂತ ನೆನಪು ಮಾಡಿಕೊಂಡಿದ್ದಾರೆ.
ಇನ್ನು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನವನ್ನು ದಾಸೋಹ ದಿನ ಎಂದು ಆಚರಣೆ ಮಾಡಲು ನಮ್ಮ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಘೋಷಣೆ ಆಗಿಯೇ ಉಳಿದಿದೆ. ಶಿವಕುಮಾರ ಸ್ವಾಮೀಜಿ ಅವರ ಈ ದಿನವನ್ನು ರಾಜ್ಯ ಸರ್ಕಾರ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಕೆ.ಎನ್ ರಾಜಣ್ಣಗೆ ಈ ಬಗ್ಗೆ ಪತ್ರ ಬರೆಯುತ್ತೇನೆ. ದಾಸೋಹ ದಿನವನ್ನು ಇಡೀ ರಾಜ್ಯದಲ್ಲಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದಿಂದ ಕೊಡಮಾಡುವ “ಸಿದ್ದಗಂಗಾ ಶ್ರೀ” ಪ್ರಶಸ್ತಿಯನ್ನು ಈ ಬಾರಿ ನಾಡೋಜ ಗೋ.ರು ಚನ್ನಬಸಪ್ಪನವರಿಗೆ ಪ್ರಧಾನ ಮಾಡಲಾಯ್ತು. ಸಿದ್ದಲಿಂಗಸ್ವಾಮಿಜಿಗಳು, ಸುತ್ತೂರು ಶ್ರೀಗಳು, ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮೇಘಾಲಯ ರಾಜ್ಯಪಾಲ ವಿಜಯಶಂಕರ್, ಕೇಂದ್ರ ಸಚಿವ ವಿ ಸೋಮಣ್ಣ ಉಪಸ್ಥಿತರಿದ್ದರು.