ಹೊಸ ಕಾಂಗ್ರೆಸ್ ಸರ್ಕಾರ ಮೊದಲ ದಿನವೇ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಿದೆ. ಜನರಿಗೆ ಯಾವ ಗ್ಯಾರೆಂಟಿ ಹೇಳಿದ್ದರೊ ಅದನ್ನು ಅನುಷ್ಠಾನ ಮಾಡುವಲ್ಲಿ ಮೋಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮಿ ಮನೆಯಲ್ಲಿ ಯಾರು ಯಜಮಾನಿ ಅಂತ ಹೇಳಿ ಮನೆಗಳಲ್ಲಿ ಗಲಾಟೆ ಶುರುವಾಗುವಂತೆ ಮಾಡಿದ್ದಾರೆ. ಗೃಹ ಜ್ಯೋತಿ ಯೋಜನೆ ಘೋಷಿಸಿ ಮೂರು ಪಟ್ಟು ಬಿಲ್ ಏರಿಸಿ ಜನರಿಗೆ ಭಾರ ಮಾಡಿದ್ದಾರೆ. ಬಸ್ ಗಳಲ್ಲಿ ಗೊಂದಲ ಹೆಚ್ಚಾಗಿದೆ. ಶಾಲಾ ಮಕ್ಕಳಿಗೆ ಬಸ್ ಇಲ್ಲ. ಕಿಟಕಿಯಲ್ಲಿ ಬಸ್ ಹತ್ತುವಂತಾಗಿದೆ.
ಯುವ ನಿಧಿ ಏನಾಗಿದೆ ಗೊತ್ತಿಲ್ಲ. ಅಕ್ಕಿಯಲ್ಲಿ ದೊಡ್ಡ ಗೊಲ್ ಮಾಲ್ ನಡೆಯುತ್ತಿದೆ. ಎಷ್ಟು ಅಕ್ಕಿ ಕೊಡುತ್ತಾರೆ ಗೊತ್ತಿಲ್ಲ. ಈ ಸರ್ಕಾರದ ಮುಖವಾಡ ಬಯಲಾಗಿದೆ. ಇವರ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು
ಗ್ಯಾರೆಂಟಿ ಯೋಜನೆಗಳ ಗೊಂದಲಗಳ ಕುರಿತು ಚರ್ಚಿಸಲು ನಾವು ಅವಕಾಶ ಕೇಳಿದ್ದೇವೆ. ಅದಕ್ಕೆ ಅವಾಕಶ ಕೊಡದೇ ಸರ್ಕಾರ ಹಠಮಾರಿತನ, ಮೊಂಡತನ ಮಾಡುತ್ತಿದೆ. ಸಭಾಧ್ಯಕ್ಷರ ಮೇಲೆ ಒತ್ತಡ ತಂದು ಅವಕಾಶ ಕೊಡದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಇದೆಲ್ಲದರ ಬಗ್ಗೆ ಚರ್ಚೆ ಮಾಡಬೇಕಿದೆ. ಸರ್ಕಾರ ಮೊದಲ ದಿನವೇ ವಿರೋಧ ಪಕ್ಷವನ್ನು ಬಾವಿಗೆ ತಳ್ಳುವ ಕೆಲಸ ಮಾಡಿದೆ.
ಸರ್ಕಾರ ದೊಖಾ ಮಾಡಿದೆ. ನಮ್ಮ ಬೇಡಿಕೆ ಇಷ್ಟೆ ನೀವು ಕೊಟ್ಟ ಭರವಸೆ ಈಡೇರಿಸಿ ಎಂದು ಆಗ್ರಹಿಸಿದ್ದೇವೆ ಎಂದರು.
ಈ ಸರ್ಕಾರ ಮುಂದಿನ ಕಲಾಪದ ಬಗ್ಗೆ ಚರ್ಚೆ ಮಾಡುವ ಕುರಿತು ಕಲಾಪ ಸಲಹಾ ಸಮಿತಿ ಸಭೆ ಕರೆದಿದೆ. ಈಗಿನ ಗೊಂದಲ ಬಗೆ ಹರಿಸದೇ ಮುಂದಿನ ಕಲಾಪದ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಹೀಗಾಗಿ ನಾವು ಬಿಎಸ್ ಸಿ ಬಹಿಷ್ಕಾರ ಮಾಡಿದ್ದೇವೆ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
ಇನ್ನು ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುವ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಪರ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ ಅವು ಕಾಂಗ್ರೆಸ್ ನವರಿಗೆ ಬೇಡವಾಗಿರಬಹುದು. ಜನ ಬಯಸಿದ್ದನ್ನು ನಾವು ಮಾಡಿದ್ದೇವು ಎಂದು ಹೇಳಿದರು.