ಬೆಂಗಳೂರು : ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಜಾಸ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರ ಸರ್ಕಾರದ ವಿಬಿಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ಉಭಯ ಸದನಗಳಲ್ಲಿ ಖಂಡನಾ ನಿರ್ಣಯ ಮಂಡಿಸಲು ಮುಂದಾಗಿದೆ. ರಾಜ್ಯಪಾಲರು ಸಂವಿಧಾನಾತ್ಮಕವಾಗಿಯೇ ನಡೆದುಕೊಂಡಿದ್ದಾರೆ, ರಾಜ್ಯಪಾಲರು ತಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಹೋಗಿಲ್ಲ ಎಂದು ವಿಪಕ್ಷ ಬಿಜೆಪಿ ಸಮರ್ಥನೆ ಮಾಡುತ್ತಿದೆ. ಅಲ್ಲದೆ ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಸಂವಿಧಾನಬಾಹಿರ ಎಂದು ಆರೋಪಿಸಿದೆ.

ಇದನ್ನೂ ಓದಿ : BIG BREAKING: ಅಮೆಜಾನ್‌ನಿಂದ ಮತ್ತೆ 16 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್
ರಾಜ್ಯಪಾಲರು ಭಾಷಣ ಮುಗಿಸಿ ಹೊರಡುವ ವೇಳೆ ಅವರನ್ನು ಅಡ್ಡಗಟ್ಟಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಬಿಜೆಪಿ ಕೆಂಡಕಾರಿದೆ. ಇದು ರಾಜ್ಯಪಾಲರಿಗೆ ಮಾಡಿರುವ ಅವಮಾನವಾಗಿದೆ, ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಈ ಹಿಂದಿನ ಅಧಿವೇಶನದಲ್ಲಿ ಸದನಕ್ಕೆ ಅಗೌರವ ನೀಡಿರುವ ಆರೋಪದಲ್ಲಿ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈಗ ರಾಜ್ಯಪಾಲರಿಗೆ ಅವಮಾನ ಮಾಡಿ, ಅವರೊಂದಿಗೆ ಅಗೌರವದಿಂದ ನಡೆದುಕೊಂಡಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಆಗ್ರಹಿಸಿದೆ. ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ತಮ್ಮ ಸದಸ್ಯರ ವರ್ತನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಇದು ಕೂಡ ದೋಸ್ತಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವಿಬಿಜಿ ರಾಮ್‌ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಸರ್ಕಾರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸುತ್ತಲೇ ಇದ್ದು, ಕೇಂದ್ರದ ಬಿಲ್ ಬಗ್ಗೆ ನಮ್ಮದು ಯಾವುದೇ ತಕರಾರಿಲ್ಲ ಎಂದು ಬಿಜೆಪಿ ಮೋದಿ ಸರ್ಕಾರದ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮುಂದುವರೆಸಿದೆ. ಈ ನಡುವೆಯೇ ಇಂದೂ ಕೂಡ ಸದನದಲ್ಲಿ ರಾಜ್ಯಪಾಲರ ನಡವಳಿಕೆ ಕುರಿತು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ “ಗೋ ಬ್ಯಾಕ್ ಗವರ್ನರ್” ಎಂಬ ಅಭಿಯಾನಕ್ಕೂ ಮುಂದಾಗಿದೆ. ಈ ಮೂಲಕ ರಾಜ್ಯಪಾಲರನ್ನು ಕೇಂದ್ರ ವಾಪಸ್ ಕರೆಯಿಸಿಕೊಳ್ಳಬೇಕು ಎಂಬ ಆಗ್ರಹವನ್ನು ಮಾಡುತ್ತಿದೆ.

ಒಂದೆಡೆ ಮನ್ರೇಗಾ ಕಾಯ್ದೆಯ ಪುನರ್ ಸ್ಥಾಪನೆಗೆ ಕಾಂಗ್ರೆಸ್ ಆಗ್ರಹಿಸುತ್ತಿದೆ. ಇನ್ನೊಂದೆಡೆ ಬಿಜೆಪಿಯು ವಿಬಿಜಿ ರಾಮ್‌ಜಿ ಕಾಯ್ದೆಯು ಯಾವುದೇ ಕಾರಣಕ್ಕೂ ಹಿಂಪಡೆಯಬಾರದೆಂದು ಒತ್ತಾಯಿಸುತ್ತಿದೆ. ರಾಮ್‌ಜಿ ಕಾಯ್ದೆಯ ವಿರುದ್ಧ ಸಾಧಕ-ಬಾಧಕಗಳನ್ನು ಚರ್ಚಿಸುವುದರ ಜೊತೆಗೆ ವಿಧಾನಸಭೆಯಯಲ್ಲಿ ನಿರ್ಣಯ ಕೈಗೊಳ್ಳಲು ಯೋಚಿಸಿದೆ. ಹೀಗಾಗಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಸಮರ ಮುಂದುವರೆಯಲಿದೆ ಎನ್ನಲಾಗಿದೆ.











