ಬೆಂಗಳೂರು: ನಾಳೆ ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನವನ್ನು(Karnataka joint session) ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್( ಗೆಹ್ಲೋಟ್(Thawar Chand Gehlot) ಅವರು ನಿರಾಕರಿಸಿರುವುದು ರಾಜ್ಯ ಸರ್ಕಾರಕ್ಕೆ(State Government) ತೀವ್ರ ಅಸಮಾಧಾನ ಹಾಗೂ ಹೊಸ ರಾಜಕೀಯ ತಲೆನೋವಾಗಿದೆ.

ಕೇಂದ್ರ ಸರ್ಕಾರವು ಮನರೇಗಾ ಕಾಯಿದೆಯಲ್ಲಿ ಬದಲಾವಣೆ ಮಾಡಿ ವಿಬಿ ರಾಮ್ ಜಿ ಕಾಯಿದೆ ಜಾರಿಗೆ ತಂದಿರುವುದನ್ನು ವಿರೋಧಿಸಿ, ರಾಜ್ಯ ಸರ್ಕಾರ ಖಂಡನಾ ನಿರ್ಣಯ ಕೈಗೊಳ್ಳುವ ಉದ್ದೇಶದಿಂದ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನ ನಡೆಸಲು ನಿರ್ಧರಿಸಿದೆ. ಆದರೆ, ಈ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ಸಲ್ಲಿಸಿದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪೌರಾಯುಕ್ತೆಗೆ ಜೀವ ಬೆದರಿಕೆ: ಕಾಂಗ್ರೆಸ್‌ನಿಂದ ರಾಜೀವ್ ಗೌಡ ಅಮಾನತಿಗೆ ಶಿಫಾರಸು

ಮನರೇಗಾ ಕಾಯಿದೆಯಲ್ಲಿನ ಕೇಂದ್ರ ಸರ್ಕಾರದ ಬದಲಾವಣೆಗಳಿಗೆ ವಿರೋಧ ವ್ಯಕ್ತಪಡಿಸಲು ವಿಧಾನಮಂಡಲದ ಜಂಟಿ ಅಧಿವೇಶನ ಕರೆದಿರುವುದೇ ರಾಜ್ಯಪಾಲರ ನಿರಾಕರಣೆಗೆ ಕಾರಣವೆಂದು ತಿಳಿದುಬಂದಿದೆ. ಇದರಿಂದಾಗಿ ತಮಿಳುನಾಡು ಹಾಗೂ ಕೇರಳ ಬಳಿಕ ಕರ್ನಾಟಕದಲ್ಲಿಯೂ ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ ಎಂಬ ಸ್ಥಿತಿ ಉಂಟಾಗಿದೆ. ಇದೇ ರೀತಿಯ ಸಂಘರ್ಷಗಳು ಈಗಾಗಲೇ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿಯೂ ಮುಂದುವರಿದಿದೆ.

ಇನ್ನು ನಾಳೆಯ ವಿಧಾನಮಂಡಲದ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರನ್ನು ಮನವೊಲಿಸುವ ಉದ್ದೇಶದಿಂದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉನ್ನತಮಟ್ಟದ ನಿಯೋಗ ಇಂದು ರಾಜಭವನಕ್ಕೆ ಭೇಟಿ ನೀಡಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಲಿದೆ.

ಇನ್ನು ತಮಿಳುನಾಡಿನ ರಾಜ್ಯಪಾಲರು ಆರ್.ಎನ್.ರವಿ ಕೂಡ ನಿನ್ನೆ ರಾಜ್ಯ ಸರ್ಕಾರ ಸಿದ್ಧಪಡಿಸಿದ ನೀತಿ ಭಾಷಣವನ್ನು ಓದಲು ನಿರಾಕರಿಸಿ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಜ್ಯಪಾಲರು, ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸತತ ಮೂರನೇ ವರ್ಷವೂ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿರುವ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ ಎನ್ನುವ ಸ್ಥಿತಿ ಉಂಟಾಗಿದ್ದು, ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಆಡಳಿತದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.












