ಬೆಂಗಳೂರು: ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಂಪೂರ್ಣ ಭಾಷಣ ಓದಿದರು.
ಕಳೆದ ವಾರ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ನಿಲುವು ಹೊಂದಿದ್ದ ಭಾಷಣ ಓದದೆ ವಿವಾದ ಸೃಷ್ಟಿಸಿದ್ದ ರಾಜ್ಯಪಾಲ ಗೆಹ್ಲೋಟ್ ಮೊದಲ ಹಾಗೂ ಕೊನೆಯ ಸಾಲು ಓದಿ ನಿರ್ಗಮಿಸಿದ್ದರು. ರಾಜ್ಯಪಾಲರ ನಡೆ ವಿವಾದ ಸೃಷ್ಟಿಸಿತ್ತು.

ಆದರೆ ಇಂದು ರಾಜ್ಯಪಾಲರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ 24 ಪುಟಗಳ ಭಾಷಣ ಓದಿದರು.
ನಮ್ಮ ಸರ್ಕಾರದ ಕಾರ್ಯಕ್ರಮ ಎಂದು ಭಾಷಣದಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಮಾತಾಡಿದ ರಾಜ್ಯಪಾಲ 20 ನಿಮಿಷದಲ್ಲಿ ತಮ್ಮ ಭಾಷಣ ಮುಗಿಸಿದರು.
ಮೊದಲಿಗೆ ಧ್ವಜಾರೋಹಣ ನೆರವೇರಿಸಿದ ಗೆಹ್ಲೋಟ್ ನಂತರ ವಂದನೆ ಸ್ವೀಕರಿಸಿ ಮಾತಾಡಿದರು. ಜನವರಿ 26ರಂದು ಭಾರತದ ಚರಿತ್ರೆಯಲ್ಲಿ ಒಂದು ಅತ್ಯಂತ ನಿರ್ಣಾಯಕ ದಿನ. ಇದು ಸಾವಿರಾರು ವರ್ಷಗಳಿಂದ ರೂಪುಗೊಂಡಿದ್ದ ರಾಜಪ್ರಭುತ್ವ ಹಾಗೂ 17 ನೇ ಶತಮಾನದಿಂದ ಅಸ್ತಿತ್ವಕ್ಕೆ ಬಂದಿದ್ದ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿ ಜನಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡ ದಿನ. ತಾರತಮ್ಯವನ್ನು ಆಧರಿಸಿದ್ದ ವಸಾಹತುಶಾಹಿಯನ್ನು ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವ ಭಾರತದ ಪರಿಕಲ್ಪನೆಯ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಗಣತಂತ್ರ ವ್ಯವಸ್ಥೆಯನ್ನು ರೂಪುಗೊಳಿಸಿಕೊಳ್ಳುವುದಕ್ಕಾಗಿ ಅಸಂಖ್ಯಾತ ಜನರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಅವರೆಲ್ಲರನ್ನೂ ಈ ಅಮೃತ ಗಳಿಗೆಯಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯವನ್ನು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೆಂದು ಮೂರು ಮಾದರಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ‘ನಾವು ಯಾವುದೇ ಕಾರಣಕ್ಕೂ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತುಷ್ಟಗೊಳ್ಳಬಾರದು. ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ, ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ಬದುಕಿನ ಸಿದ್ಧಾಂತವಾಗಿ ಗುರುತಿಸಿಕೊಂಡ ಒಂದು ಜೀವನ ಕ್ರಮವಾಗಿದೆ ಎಂದು ಹೇಳಿದರು.
ಸಮಾನತೆಯಿಲ್ಲದ ಸ್ವಾತಂತ್ರವು ಹಲವರ ಮೇಲೆ ಕೆಲವರ ಸರ್ವಾಧಿಕಾರವಾಗಿ ಮೆರೆಯುತ್ತದೆ. ಸ್ವಾತಂತ್ರವಿಲ್ಲದ ಸಮಾನತೆಯು ವ್ಯಕ್ತಿಗತ ಕ್ರಿಯಾಶೀಲತೆಯನ್ನು ಅಂತ್ಯಗೊಳಿಸುತ್ತದೆ. ಭಾತೃತ್ವವಿಲ್ಲದಿದ್ದರೆ, ಸ್ವಾತಂತ್ರ ಹಾಗೂ ಸಮಾನತೆಗಳು ಯಾವುದೇ ವಿಷಯದ ಸಹಜ ನಡೆಯಾಗುವುದಿಲ್ಲ ಎಂದಿದ್ದಾರೆ. ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ ₹1.12 ಲಕ್ಷ ಕೋಟಿಗಳನ್ನು ಖರ್ಚು ಮಾಡುತ್ತಿದೆ.
ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ₹1.13 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ. ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ.
ಇವೆಲ್ಲದರ ಜೊತೆಗೆ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆಯೆಂದು ಸಮೀಕ್ಷೆಗಳು ಹೇಳುತ್ತಿವೆ. ಈ ಸಂಗತಿಯು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.












