ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025ಕ್ಕೆ ಅಂಕಿತ ಹಾಕದೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ವರ್ಗಾಯಿಸಿದ್ದಾರೆ.

ಕರ್ನಾಟಕ ಸರ್ಕಾರ ಸಲ್ಲಿಸಿರುವ ಈ ಪ್ರಸ್ತಾವಣೆಗೆ ಒಪ್ಪಿಗೆ ನೀಡದಿರುವುದಕ್ಕೆ ರಾಜ್ಯಪಾಲರು ಒಟ್ಟು 29 ಕಾರಣಗಳನ್ನು ದಾಖಲಿಸಿ ಕೇಂದ್ರಕ್ಕೆ ರವಾನಿಸಿದ್ದಾರೆ. ರಾಜ್ಯಪಾಲರು ನೀಡಿರುವ ಪ್ರಮುಖ ಕಾರಣಗಳ ಪ್ರಕಾರ, ಮಸೂದೆಯಲ್ಲಿ ದ್ವೇಷ ಭಾಷದ ವ್ಯಾಖ್ಯಾನವೇ ಸ್ಪಷ್ಟವಾಗಿಲ್ಲ. ಯಾವ ಮಾತು ಅಥವಾ ಕೃತ್ಯವನ್ನು ದ್ವೇಷ ಭಾಷಣ ಎಂದು ಪರಿಗಣಿಸಬೇಕು ಎಂಬ ಬಗ್ಗೆ ಗೊಂದಲ ಇರುವುದರಿಂದ, ಕಾಯ್ದೆಯ ದುರುಪಯೋಗಕ್ಕೆ ಅವಕಾಶ ಸೃಷ್ಟಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ.

ಮಸೂದೆ ತರುವ ಮುನ್ನ ಸಮಾಜದ ವಿವಿಧ ವರ್ಗಗಳು, ಸಾರ್ವಜನಿಕರು, ಕಾನೂನು ತಜ್ಞರು ಹಾಗೂ ಹಿತಾಸಕ್ತಿಗಳೊಂದಿಗೆ ಯಾವುದೇ ರೀತಿಯ ಚರ್ಚೆ ಅಥವಾ ಸಮಾಲೋಚನೆ ನಡೆಸಿರುವುದು ಕಂಡುಬಂದಿಲ್ಲ ಎಂಬುದನ್ನೂ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಹ ಸಂವಾದ ನಡೆದಿಲ್ಲ. ವಿಧಾನಸಭೆಯಲ್ಲಿ ಕೂಡ ಈ ಮಸೂದೆ ಕುರಿತು ವಿಸ್ತೃತ ಚರ್ಚೆ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.

ಮಸೂದೆಗೆ ವಿರೋಧವಾಗಿ ಸುಮಾರು 40 ಮನವಿಗಳು ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ. ಈ ಮನವಿಗಳಲ್ಲಿ, ಈ ಕಾಯ್ದೆಯನ್ನು ಬಳಸಿಕೊಂಡು ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು ಎಂಬ ಗಂಭೀರ ಆತಂಕ ವ್ಯಕ್ತಪಡಿಸಲಾಗಿದೆ. ರಾಜ್ಯಪಾಲರ ಅಭಿಪ್ರಾಯದಂತೆ, ದ್ವೇಷ ಭಾಷಣವನ್ನು ನಿಯಂತ್ರಿಸಲು ಈಗಾಗಲೇ ಭಾರತೀಯ ದಂಡ ಸಂಹಿತೆ (IPC)ಯಲ್ಲಿ ಹಲವು ವಿಧಿಗಳು ಅಸ್ತಿತ್ವದಲ್ಲಿವೆ. ಆದರೆ, ಈ ಹೊಸ ಮಸೂದೆಯಲ್ಲಿ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಅಲ್ಲದೇ ದ್ವೇಷ ಭಾಷಣ ನಿಯಂತ್ರಣದ ಹೆಸರಿನಲ್ಲಿ ಇಂಟರ್ನೆಟ್ ಹಾಗೂ ಡಿಜಿಟಲ್ ಮಾಧ್ಯಮಗಳ ಮೇಲೆ ಹೆಚ್ಚುವರಿ ನಿಯಂತ್ರಣ ಹೇರುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಅಂಶಗಳಿವೆ. ಇದು ನಾಗರಿಕರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗುವ ಸಾಧ್ಯತೆ ಇದೆ ಎಂಬುದನ್ನೂ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಈ ಎಲ್ಲಾಅಂಶಗಳ ಹಿನ್ನೆಲೆಯಲ್ಲಿ, ಮಸೂದೆಗೆ ರಾಜ್ಯಪಾಲರುಅಂಕಿತ ಹಾಕದೆ, ಭಾರತದ ರಾಷ್ಟ್ರಪತಿ ಅವರ ವಿವೇಚನೆಗೆ ಮಸೂದೆಯನ್ನು ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ. ಈಗ ಕರ್ನಾಟಕ ಸರ್ಕಾರ ತಂದಿರುವ ಈ ವಿವಾದಾತ್ಮಕ ಮಸೂದೆ ಕುರಿತು ಅಂತಿಮ ನಿರ್ಧಾರವನ್ನು ರಾಷ್ಟ್ರಪತಿ ಅವರು ತೆಗೆದುಕೊಳ್ಳಬೇಕಿದೆ.












