ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಮಾಧ್ಯಮಗಳ ನಿರಂತರ ವರದಿ ಬಳಿಕ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಮಾಡಿದೆ. ಫೈನಾನ್ಸ್ಗಳ ಹಾವಳಿಗೆ ತಡೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಫೈನಾನ್ಸ್ ಕಾಟದಿಂದ ಜನರು ಪ್ರಾಣ ಕಳೆದುಕೊಳ್ತಿದ್ದು, ಇದಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸುಗ್ರಿವಾಜ್ಞೆ ತರಲು ಮುಂದಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ ಮಾಡಲಿದ್ದಾರೆ.
ವಿಜಯಪುರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಎದುರು ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ನಿಂದ ಆಗುತ್ತಿರುವ ಕಿರುಕುಳ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ತಾಳಿ ಮಾರಿ ಫೈನಾನ್ಸ್ಗೆ ಹಣ ಕಟ್ಟಿದ್ದೇನೆ. ಆದ್ರೂ ಕಿರುಕುಳ ತಪ್ಪುತ್ತಿಲ್ಲ ಎಂದು ಕಣ್ಣೀರಾಕಿದ್ದಾರೆ. ಸದ್ಯ ಸ್ಥಳದಲ್ಲೇ ಇದ್ದ ಎಎಸ್ಪಿಗೆ ನಾಗಲಕ್ಷ್ಮೀ ಕೂಡಲೇ ಫೈನಾನ್ಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ.. ಮಹಿಳೆಯರು ಧೈರ್ಯವಾಗಿರಬೇಕು. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಹೆದರದೇ ಪೊಲೀಸರಿಗೆ ದೂರು ಕೊಡಿ. ಮಹಿಳೆಯರಿಗೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡ್ತಿದ್ರೆ ಕೂಡಲೇ ಫೈನಾನ್ಸ್ರವರನ್ನ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಕೊಟ್ಟ ಸಾಲವನ್ನ ಬುದ್ದಿವಂತಿಕೆಯಿಂದ ವಾಪಸ್ ಪಡೆಯಲು ಮೈಕ್ರೋ ಫೈನಾನ್ಸ್ ಮುಂದಾಗಿದೆ. ಹಳೆ ಸಾಲ ಕೊಟ್ರೆ ದುಪ್ಪಟ್ಟು ಸಾಲ ವಾಪಸ್ ಮಾಡೋದಾಗಿ ಸಾಲಗಾರರಿಗೆ ಕಂಪನಿಗಳು ಮೆಸೇಜ್ ಮಾಡ್ತಿದೆ. ಮೆಸೇಜ್ ನಂಬಿ ಸಾಲ ಮರುಪಾವತಿ ಮಾಡಿದ್ರೆ ಫೈನಾನ್ಸ್ ಕಂಪನಿಗಳು ಸಾಲ ಕೊಡದೇ ಜಾರಿಕೊಳ್ತಿದೆ. ನಿಮ್ಮ ಸಿಬಿಲ್ ಸ್ಕೋರ್ ಇಲ್ಲ ಅಂತ ಹೇಳುತ್ತಾ ಜಾರಿಕೊಳ್ತಿದ್ದಾರೆ. ಇನ್ನ ಮಂಡ್ಯದ ಕಾಳೇನಹಳ್ಳಿಯ ಕೆಲವವರು ಸಾಲ ಮರುಪಾವತಿ ಮಾಡಿದ್ದು, ನಮಗೆ ಮತ್ತೆ ಸಾಲ ಕೊಡಿ ಅಂತ ಮನವಿ ಮಾಡಿಕೊಳ್ತಿದ್ದಾರೆ
ರಾಜ್ಯದಲ್ಲಿ ಫೈನಾನ್ಸ್ ಕಾಟ ಹೆಚ್ಚಾಗ್ತಿರುವ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸುಮಾರು ಕಡೆ ಕಿರುಕುಳ ಕೊಡುವ ವರದಿಗಳು ಬರ್ತಿವೆ. ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ. ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಈಗಾಗಲೇ ಡಿಸಿ ನೇತೃತ್ವದಲ್ಲಿ ಸಭೆ ನಡೆಸಿದ್ದೇನೆ. ಇದಕ್ಕೆ ಏನಾದ್ರೂ ಪರಿಹಾರ ಹುಡುಕುತ್ತೇವೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಫೈನಾನ್ಸ್ ಕಾಟಕ್ಕೆ ಕಠಿಣ ಕಾನೂನು ಕ್ರಮ ತರುವ ಕೆಲಸ ಮಾಡ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯದ ಹಲವಡೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಈಗ 2 ಸಾವಿರ ಗ್ಯಾರಂಟಿ ಹಣ ಕೊಟ್ರು. ಮತ್ಯಾಕೆ ಜನ ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಮಾಡ್ತವ್ರೆ. ನಾನು ಸಿಎಂ ಆಗಿದ್ದಾಗ ಬಿಲ್ ಪಾಸ್ ಮಾಡಿ ಒಂದು ಕಾನೂನು ತಂದೆ. ಆ ಬಿಲ್ ಏನಾಯ್ತು. ಬಡವರ ಮೇಲೆ ಯಾರಿಗೆ ಕಾಳಜಿಯಿದೆ ಅನ್ನೋದನ್ನ ಜನರು ಈಗಲಾದ್ರೂ ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಛಲವಾದಿ ನಾರಯಣಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.