ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ಗಿಂತ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ, ನರೇಂದ್ರ ಮೋದಿ ನಾಯಕತ್ವಕ್ಕೆ ಜನರು ಮತ ನೀಡ್ತಾರೆ ಎನ್ನುವುದು ಎನ್ಡಿಎ ಪಕ್ಷಗಳ ಅಂಬೋಣ. ಅದೇ ಕಾರಣಕ್ಕೆ 25 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುವ ಮಾತನಾಡ್ತಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಗೆಲುವು ತಂದುಕೊಡಲಿದೆ ಎನ್ನುವ ಬಲವಾದ ನಂಬಿಕೆ ಇದೆ. ಕಳೆದ ಬಾರಿ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದು, ಇದೇ ಗ್ಯಾರಂಟಿ ಯೋಜನೆಯ ಭರವಸೆ ಆಧಾರದಲ್ಲಿ ಎನ್ನುವುದು ಕಾಂಗ್ರೆಸ್ ನಂಬಿಕೆಗೆ ಕಾರಣ.

ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರನ್ನು ಕೇಂದ್ರೀಕರಿಸಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತು. ಅದರಲ್ಲಿ ಒಂದು ಗೃಹಲಕ್ಷ್ಮೀ ಯೋಜನೆ. ಪ್ರತಿತಿಂಗಳು ಮಹಿಳೆಯರ ಅಕೌಂಟ್ಗೆ 2 ಸಾವಿರ ರೂಪಾಯಿ ಕೊಡುವುದು. ಅದರಂತೆ ಶಕ್ತಿಯೋಜನೆ, ಇದರಲ್ಲಿ ಪ್ರತಿ ಮಹಿಳೆಗೂ ಸಾರಿಗೆ ಬಸ್ನಲ್ಲಿ ಉಚಿತ ಸಂಚಾರ ಸೌಲಭ್ಯ. ಈ ಎರಡೂ ಯೋಜನೆಗಳು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾಯ್ತು. ಇದರ ಜೊತೆಗೆ ಪಕ್ಷಬೇಧ, ಲಿಂಗಬೇಧ ಮರೆತು ಬೆಂಬಲ ಸಿಗುವಂತೆ ಮಾಡಿದ್ದು ಗೃಹಜ್ಯೋತಿ ಯೋಜನೆ. ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಕೊಟ್ಟಿದ್ದು, ಜನರ ಮನಸ್ಸಲ್ಲಿ ಉಳಿಯುವಂತಾಗಿದೆ.

ಗ್ಯಾರಂಟಿ ಯೋಜನೆಗಳ ನಡುವೆ ಹೆಚ್ಚು ಜನಪ್ರಿಯ ಆಗಿದ್ದು ಗೃಹಜ್ಯೋತಿ ಯೋಜನೆ. ಕಳೆದ ಆಗಸ್ಟ್ನಿಂದ ಯಾವುದೇ ಕುಟುಂಬಗಳಿಗೆ ಕರೆಂಟ್ ಬಿಲ್ ಬರ್ತಿಲ್ಲ. 200 ಯೂನಿಟ್ ಒಳಗೆ ಬಳಸುವ ಕುಟುಂಬಗಳಿಗೆ ಸರ್ಕಾರ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದೆ. ಬಹುತೇಕ ಶೇಕಡ 90ರಷ್ಟು ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ. ಕನಿಷ್ಟ 250 ರಿಂದ ಒಂದೂವರೆ ಸಾವಿರ ರೂಪಾಯಿ ಪ್ರತಿ ತಿಂಗಳು ಉಳಿತಾಯ ಆಗುತ್ತಿದೆ. ಇದರಲ್ಲಿ ಮಹಿಳೆ – ಪುರುಷ ಅನ್ನೋ ತಾರತಮ್ಯವಿಲ್ಲ. ಬಡವ ಶ್ರೀಮಂತ ಅನ್ನೋದು ಇಲ್ಲ. 200 ಯೂನಿಟ್ ಒಳಗೆ ಬಳಕೆ ಮಾಡುವ ಎಲ್ಲರಿಗೂ ಈ ಯೋಜನೆಯ ಲಾಭ ಲಭಿಸಿದೆ.

ಇಂಧನ ಸಚಿವ ಕೆ.ಜೆ ಜಾರ್ಜ್ ನೇತೃತ್ವದಲ್ಲಿ ಇಂಧನ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಉಚಿತ ವಿದ್ಯುತ್ ಕೊಡುತ್ತಿದ್ದರೂ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿರುವುದು ರೈತರು ಹಾಗು ಹಳ್ಳಿ ಭಾಗದ ಜನರ ನೆಮ್ಮದಿಗೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಲೋಡ್ ಶೆಡ್ಡಿಂಗ್ ಅನ್ನೂ ಭೂತದ ಕೈಗೆ ಸರ್ಕಾರಗಳು ಸಿಲುಕಿಕೊಂಡಿದ್ದವು. ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲದೆ ನಿತಂತರ ವಿದ್ಯುತ್ ಪೂರೈಕೆ, ಕೊಳವೆ ಬಾವಿಗಳನ್ನು ಓಡಿಸಲು ರೈತರಿಗೆ ತ್ರಿಫೇಸ್ ವಿದ್ಯುತ್ ಕೂಡ ನಿರಂತರವಾಗಿ ನೀಡುತ್ತಿರುವುದು ಬರಗಾಲದಲ್ಲೂ ಜನರು ಶಾಂತಿಯಿಂದ ಇರುವಂತೆ ಮಾಡಿದೆ.

ಮತದಾನ ಮಾಡಲು ಮತಕೇಂದ್ರಕ್ಕೆ ಬಂದಾಗ ಮತಪೆಟ್ಟಿಗೆ ಬಳಿಗೆ ಹೋಗುವ ತನಕ ಮತದಾರ ಯೋಚಿಸುತ್ತಾನೆ. ಒಂದು ಕ್ಷಣ ಕಾಂಗ್ರೆಸ್ ಸರ್ಕಾರ ನೀಡಿರುವ ಎಲ್ಲಾ ಅನುಕೂಲಗಳು ಕಣ್ಣ ಮುಂದೆ ಬಂದೇ ಬರುತ್ತವೆ ಎನ್ನುವುದು ಕಾಂಗ್ರೆಸ್ ನಾಯಕರ ವಿಶ್ವಾಸ. ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷದಲ್ಲಿ ಕೇವಲ ಭರವಸೆಗಳಿಗೆ ಸೀಮಿತ ಆಗಿದೆ. ಯಾವುದೇ ಉಪಯೋಗಕಾರಿ ಯೋಜನೆಗಳನ್ನು ಜಾರಿ ಮಾಡಿಲ್ಲ. ದರ ಏರಿಕೆ ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮತದಾರ ಎಲ್ಲವನ್ನೂ ತುಲನೆ ಮಾಡಿ ಮತ ಚಲಾಯಿಸ್ತಾನೆ ಎನ್ನೋದು ಕಾಂಗ್ರೆಸ್ ನಾಯಕರ ಮಾತು. ಮೇ 7ರಂದು ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದು, 14 ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ. ಎಲ್ಲದಕ್ಕೂ ಉತ್ತರ ಜೂನ್ 4ರಂದು ಹೊರ ಬೀಳಲಿದೆ.
ಕೃಷ್ಣಮಣಿ
