ಮಾರಕ ಕರೋನಾ ವಿರುದ್ಧ ಹೋರಾಡಲು ದೇಶಾದ್ಯಂತ ಬೃಹತ್ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ. ದಾಖಲೆ ಪ್ರಮಾಣದಲ್ಲಿ ಜನರಿಗೆ ಲಸಿಕೆ ನೀಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಕೇವಲ ಅಂಕಿಅಂಶ ತೋರಿಸುತ್ತಿದೆ. ಲಸಿಕಾ ಕೇಂದ್ರಕ್ಕೆ ಹೋದರೆ ಎಲ್ಲೂ ನಿಮಗೆ ವ್ಯಾಕ್ಸಿನ್ ಸಿಗೋದೆ ಇಲ್ಲ ಎಂದು ಕೆಂಡಕಾರುತ್ತಿದ್ದಾರೆ. ಹೀಗಿರುವಾಗಲೇ ಎರಡು ಡೋಸ್ ಲಸಿಕೆ ಪಡೆದವರು ಕೊರೋನಾದಿಂದ ಸೇಫ್ ಅಂಕಿ ಅಂಶವೊಂದು ಹೊರಬಿದ್ದಿದೆ.
ಹೌದು, ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದವರಿಗೆ ಬಿಬಿಎಂಪಿ ಕಡೆಯಿಂದ ಗುಡ್ನ್ಯೂಸ್ ಸಿಕ್ಕಿದೆ. ಲಸಿಕೆಯ ಮಹತ್ವದ ಬಗ್ಗೆ ಅಂಕಿ ಅಂಶವೊಂದು ಬಿಡುಗಡೆಯಾಗಿದ್ದು, ವ್ಯಾಕ್ಸಿನ್ ಪಡೆದವರಿಗೆ ಕೊರೋನಾ ಸೋಂಕು ತಗುಲಿದ್ರೂ ಸೇಫ್ ಅಂತಾ ಹೇಳಲಾಗುತ್ತಿದೆ. ಬಿಬಿಎಂಪಿ ಅಂಕಿಅಂಶಗಳ ಪ್ರಕಾರ ಎರಡೂ ಡೋಸ್ ಲಸಿಕೆ ಪಡೆದ ಒಬ್ಬ ವ್ಯಕ್ತಿಯೂ ICUಗೆ ದಾಖಲಾಗಿಲ್ಲವಂತೆ.
ಇನ್ನು, ಸೋಂಕು ತಗುಲಿದ್ರೂ ವ್ಯಾಕ್ಸಿನ್ ಪಡೆದವರಲ್ಲಿ ಗಂಭೀರ ಲಕ್ಷಣ ಕಾಣಿಸಿಕೊಂಡಿಲ್ಲ. ಇತ್ತೀಚಿಗೆ ಕೊರೋನಾದಿಂದ 32 ಮಂದಿ ಐಸಿಯುಗೆ ದಾಖಲಾಗಿದ್ದು, ಇದರಲ್ಲಿ 25 ಮಂದಿ ವ್ಯಾಕ್ಸಿನ್ ಪಡೆದಿರಲಿಲ್ಲ. ಇನ್ನು ಐಸಿಯುನಲ್ಲಿದ್ದ ಉಳಿದ 7 ಮಂದಿ ಕೇವಲ ಮೊದಲ ಡೋಸ್ ಮಾತ್ರ ಪಡೆದಿದ್ದರಂತೆ.
ಸದ್ಯ 2 ಡೋಸ್ ಲಸಿಕೆ ಪಡೆದವರು ಕೊರೊನಾದಿಂದ ಐಸಿಯುಗೆ ದಾಖಲಾಗಿಲ್ಲ. ಬಿಬಿಎಂಪಿಯ ಈ ಅಂಕಿಅಂಶಗಳು 2 ಡೋಸ್ ಲಸಿಕೆ ಪಡೆದವರಿಗೆ ಸೋಂಕು ತಗುಲಿದ್ರೂ ಸೇಫ್ ಎನ್ನುವುದು ಸಾರಿ ಹೇಳುತ್ತಿದೆ. ಬಿಬಿಎಂಪಿಯ ಇದೊಂದು ಅಂಕಿಅಂಶ ಲಸಿಕೆ ಬಗೆಗಿನ ಮಹತ್ವವನ್ನ ತೋರಿಸಿದೆ ಎನ್ನಲಾಗುತ್ತಿದೆ.
ಸದ್ಯ ದೇಶಾದ್ಯಂತ 3ನೇ ಅಲೆ ಎದುರಿಸೋಕೆ ಸರ್ಕಾರದಿಂದ ತಯಾರಿ ನಡೀತಿದೆ. ಇತ್ತೀಚೆಗಷ್ಟೇ ಸಣ್ಣ ಸಣ್ಣ ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ತಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಅಕ್ಟೋಬರ್ ಅಂತ್ಯದ ವೇಳೆಗೆ ಮಕ್ಕಳಿಗೆ ಝೈಡಸ್ ಕ್ಯಾಡಿಲಾ ಲಸಿಕೆಯನ್ನ ನೀಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಮಕ್ಕಳ ತುರ್ತು ಬಳಕೆಗೆ ಈ ಲಸಿಕೆ ನೀಡಲು ತಯಾರಿ ನಡೆಸಲಾಗಿದ್ದು, 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ 1 ಕೋಟಿ ಡೋಸ್ ಸರಬರಾಜು ಮಾಡಲು ಸರ್ಕಾರ ತೀರ್ಮಾನಿಸಿದೆ. ಸದ್ಯ ಈ ಬಗ್ಗೆ ತಜ್ಞರು ಸೂಕ್ತ ಗೈಡ್ಲೈನ್ಸ್ಗಳನ್ನು ಹೊರಡಿಸಿದ ಬಳಿಕ ಲಸಿಕೆ ವಿತರಣೆಯನ್ನ ಕೇಂದ್ರ ಸರ್ಕಾರ ಆರಂಭಿಸಲಿದೆ.
ಇದೆಲ್ಲದರ ನಡುವೆ ದೇಶಾದ್ಯಂತ ಲಸಿಕೆ ವಿತರಣೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಿದ್ಧತೆ ನಡೀತಿದೆ. ಅಕ್ಟೋಬರ್ 7ರ ಒಳಗೆ ದೇಶದಲ್ಲಿ ನೂರು ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. ಹಾಗೇನಾದ್ರು ಆಗಿದ್ದೇ ಆದ್ರೆ, ದೇಶದಲ್ಲಿ ಲಸಿಕೆ ವಿತರಣೆ ಮಿಂಚಿನ ವೇಗದಲ್ಲಿ ಸಾಗುತ್ತೆ. ಅಲ್ಲದೆ 3ನೇ ಅಲೆಯ ವಿರುದ್ಧದ ಹೋರಾಟಕ್ಕೆ ಆನೆ ಬಲ ಸಿಕ್ಕಂತಾಗುತ್ತೆ.
ದೇಶದ ಒಟ್ಟಾರೆ ಕೋವಿಡ್ ಲಸಿಕೆ ನೀಡಿಕೆ ಪೈಕಿ 8 ರಾಜ್ಯಗಳಲ್ಲಿ ಶೇ.59.58ರಷ್ಟು ಲಸಿಕೆ ನೀಡಲಾಗಿದೆ. ಈ 8 ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಮತ್ತು ಕೇರಳ ಇದೆ. ಮಹಾರಾಷ್ಟ್ರ, ಛತ್ತೀಸ್ಗಢ, ಕರ್ನಾಟಕ, ಪಂಜಾಬ್, ತಮಿಳುನಾಡು, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿನ ಸೋಂಕಿತರ ಪ್ರಮಾಣವೂ ಕಡಿಮೆಯಾಗುತ್ತಿದೆ.