ನವದೆಹಲಿ : ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ (Good News) ಕೃಷಿಯಿಂದ ಬರುವ ಆದಾಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಹವಾಮಾನ ವೈಪರೀತ್ಯ, ಪ್ರವಾಹ ಹಾಗೂ ಬರಗಾಲದಂತಹ ನೈಸರ್ಗಿಕ ವಿಕೋಪಗಳು ಬೆಳೆ ಹಾನಿಗೆ ಕಾರಣವಾಗಿ ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುತ್ತವೆ. ವಯಸ್ಸಾದಂತೆ ಸಕ್ರಿಯವಾಗಿ ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೆ ಆರ್ಥಿಕ ಭದ್ರತೆಯ ಕೊರತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ವೃದ್ಧಾಪ್ಯ ಜೀವನಕ್ಕೆ ಆಸರೆಯಾಗಲು ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ’ (PM Kisan Maandhan Yojana )ಯನ್ನು ಜಾರಿಗೆ ತಂದಿದೆ.
ತಿಂಗಳಿಗೆ ಪಾವತಿಸಬೇಕಾದ ವಂತಿಗೆ ಎಷ್ಟು?
ರೈತರು ಪ್ರತಿ ತಿಂಗಳು ಪಾವತಿಸಬೇಕಾದ ಕಂತಿನ ಮೊತ್ತವು ಅವರು ಯೋಜನೆಗೆ ಸೇರುವ ವಯಸ್ಸಿನ ಮೇಲೆ ನಿರ್ಧಾರವಾಗುತ್ತದೆ. 18 ರಿಂದ 40 ವರ್ಷದೊಳಗಿನ ಅರ್ಹ ರೈತರು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು. ವಯಸ್ಸಿಗೆ ಅನುಗುಣವಾಗಿ ರೈತರು ತಿಂಗಳಿಗೆ ಕನಿಷ್ಠ ₹55 ರಿಂದ ಗರಿಷ್ಠ ₹200 ವರೆಗೆ ವಂತಿಗೆ ಪಾವತಿಸಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಯೋಜನೆಗೆ ಸೇರಿದರೆ ಮಾಸಿಕ ಕಂತಿನ ಮೊತ್ತ ಕಡಿಮೆಯಾಗಿರುತ್ತದೆ.

ದಂಪತಿಗಳಿಗೆ ಪ್ರತ್ಯೇಕವಾಗಿ ಸಿಗಲಿದೆ ಪಿಂಚಣಿ ಲಾಭ
ಅರ್ಹ ಪತಿ-ಪತ್ನಿ ಇಬ್ಬರೂ ಈ ಯೋಜನೆಯಲ್ಲಿ ಪ್ರತ್ಯೇಕವಾಗಿ ಸದಸ್ಯರಾಗಲು ಅವಕಾಶವಿದೆ. ಇಬ್ಬರೂ ತಮ್ಮ ಹೆಸರಿನಲ್ಲಿ ನಿಗದಿತ ಮೊತ್ತವನ್ನು ನಿಯಮಿತವಾಗಿ ಪಾವತಿಸಬೇಕಾಗುತ್ತದೆ. 60 ವರ್ಷ ಪೂರೈಸಿದ ಬಳಿಕ ಪ್ರತಿಯೊಬ್ಬರಿಗೂ ತಲಾ ₹3,000 ಪಿಂಚಣಿ ಸಿಗಲಿದ್ದು, ದಂಪತಿಗಳಿಬ್ಬರೂ ಯೋಜನೆಯಲ್ಲಿದ್ದರೆ ಒಟ್ಟಾಗಿ ತಿಂಗಳಿಗೆ ₹6,000 ಪಿಂಚಣಿ ಪಡೆಯಬಹುದು.
ಯೋಜನೆಗೆ ಯಾರೆಲ್ಲ ಅರ್ಹರು?
18 ರಿಂದ 40 ವರ್ಷದೊಳಗಿನ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಗೆ ಸೇರಲು ಅರ್ಹರಾಗಿದ್ದಾರೆ. ರೈತರ ಹೆಸರಿನಲ್ಲಿ ಗರಿಷ್ಠ 2 ಹೆಕ್ಟೇರ್ (ಸುಮಾರು 5 ಎಕರೆ) ವರೆಗೆ ಮಾತ್ರ ಕೃಷಿ ಭೂಮಿ ಇರಬೇಕು ಎಂಬುದು ಮುಖ್ಯ ಷರತ್ತಾಗಿದೆ. ಸದಸ್ಯತ್ವ ಪಡೆದ ನಂತರ ನಿಗದಿತ ಮಾಸಿಕ ಕಂತನ್ನು 60 ವರ್ಷ ತುಂಬುವವರೆಗೆ ತಪ್ಪದೇ ಪಾವತಿಸುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳು ಹಾಗೂ ಜಮೀನಿನ ಪಹಣಿ (ಆರ್‌ಟಿಸಿ) ದಾಖಲೆಗಳು ಅಗತ್ಯವಾಗಿವೆ. 60 ವರ್ಷ ವಯಸ್ಸಿನ ನಂತರ ಖಚಿತ ಮಾಸಿಕ ಪಿಂಚಣಿ ಪಡೆಯಲು ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.






