ಹುಬ್ಬಳ್ಳಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವನ ಬಂಧನ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಖಾಸಗಿ ಬಸ್‌ನಲ್ಲಿ ಅಕ್ರಮವಾಗಿ ಚಿನ್ನ,ಬೆಳ್ಳಿ ಸಾಗಿಸುತ್ತಿದ್ದ ವೇಳೆ ಧಾರವಾಡ ಎಸ್‌ಡಿಎಂ ಆಸ್ಪತ್ರೆ ಬಳಿ ದಾಳಿ ಮಾಡಿದ ಸಿಸಿಬಿ ಟೀಂ, ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಭಿಷೇಕ್ ಬಂಧಿತ ಆರೋಪಿ. 1 ಕೆಜಿ 101 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 450 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಮಾತನಾಡಿ, ಮುಂಬೈನಿಂದ ಹುಬ್ಬಳ್ಳಿಗೆ ಸಾಗಾಟ ಮಾಡಲಾಗ್ತಿತ್ತು. ಚಿನ್ನ ಸಾಗಾಟದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ವಿ, ಸಿಸಿಬಿ ತಂಡ ಹಾಗೂ ಧಾರವಾಡ ವಿದ್ಯಾಗಿರಿ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಮಾಡಿ ಅಭಿಷೇಕ್ ಎಂಬಾತನನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.

ಬಾಂಬೆಯಿಂದ ಹುಬ್ಬಳ್ಳಿಗೆ ಬಿಲ್ ಇಲ್ಲದೇ ಚಿನ್ನ ಸಾಗಾಟ ಮಾಡ್ತಿದ್ದ. ಅಭಿಷೇಕ್ ಮಹಾವೀರ ಕೊರಿಯರ್‌ನಲ್ಲಿ ಕೆಲಸ ಮಾಡ್ತಿದ್ದ. ಎಷ್ಟು ದಿನದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಬೇರೆ ಪ್ರಕರಣದಲ್ಲಿ ಭಾಗಿಯಾಗಿರೋ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಬೇಕಿದೆ ಅಂತಾನೂ ತಿಳಿಸಿದ್ದಾರೆ.