ಓಲಾ ಊಬರ್ ಟ್ಯಾಕ್ಸಿ ಹಾಗೂ ಆಟೋ ವಾಹನ ಚಾಲಕರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ಗಳಾದ ರ್ಯಾಪಿಡೊ ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಈಗ ಆಟೋ ಟ್ಯಾಕ್ಸಿ ಚಾಲಕ ಮಾಲಕರಿಗೆ ಭಾರೀ ಸಂತಸ ಉಂಟು ಮಾಡಿದೆ.
ಆಟೋ, ಕ್ಯಾಬ್ ಚಾಲಕ-ಮಾಲಕ ಹೋರಾಟಕ್ಕೆ ದಿಗ್ವಿಜಯ
ಬೈಕ್ ಟ್ಯಾಕ್ಸಿ ರ್ಯಾಪಿಡೋ ಮೇಲೆ ಆಟೋ ಮತ್ತು ಟ್ಯಾಕ್ಸಿ ಮಾಲಕ ಚಾಲಕರಿಗೆ ಭಾರೀ ಅಸಮಾಧಾನ ಉಂಟಾಗಿತ್ತು. ಆಗಾಗ್ಗೆ ಹೊಡೆದಾಟ ಬಡಿದಾಟ ಆಗಿದ್ದು ಇದೆ ಈ ವಿಚಾರಕ್ಕೆ ಸಂಬಂಧಿಸಿದ. ಇದೀಗ ಎಲ್ಲದಕ್ಕೂ ಬ್ರೇಕ್ ಹಾಕಿರುವ ಸಾರಿಗೆ ಇಲಾಖೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಕಾನೂನುಬಾಹಿರವಾದದ್ದು ಎಂದಿದ್ದು, ಕಾರ್ಯಾಚರಣೆ ತಕ್ಷಣವೇ ನಿಲ್ಲಿಸುವಂತೆ ಆದೇಶ ಹೊರಡಿಸಿದೆ.
ಕೊರೋನಾದಿಂದ ಹೈರಾಣಾಗಿ ಹೋಗಿದ್ದ ಆಟೋ, ಕ್ಯಾಬ್ ಕಾರ್ಮಿಕರು
ಕೊರೋನಾ ಕಾರಣದಿಂದ ವ್ಯವಹಾರದ ಮೇಲೆ ದೊಡ್ಡ ಮಟ್ಟದಲ್ಲಿ ಹೊಡೆತ ತಿಂದಿದ್ದ ಆಟೋ, ಓಲಾ ಊಬರ್ ಕಾರ್ಮಿಕರು ಕಂಗಾಲಾಗಿ ಹೋಗಿದ್ದರು. ಇದರ ನಡುವೆ ರ್ಯಾಪಿಡೋ ಎಂಬ ಬೈಕ್ ಟ್ಯಾಕ್ಸಿ ಕೂಡ ಇವರಿಗೆ ಸಿಗಬೇಕಾದ ಬಾಡಿಗೆಗೂ ಅಡ್ಡಗಾಲು ಹಾಕುತ್ತಿತ್ತು. ಇದರಿಂದಾಗಿ ಕೊರೋನಾ ಜತಜತೆಯಲ್ಲೇ ಮತ್ತಷ್ಟು ಸಂಕಷ್ಟ ಎದುರಿಸುವಂತಾಯ್ತು. ಇದರಿಂದಾಗಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಯಾವುದೇ ಕಂಪನಿಗಳಿಗೆ ಬಾಡಿಗೆಗಾಗಿ ನೀಡಬಾರದೆಂದುತ್ತು ಒಂದು ವೇಳೆ ಬಾಡಿಗೆ, ವಾಣಿಜ್ಯ ಚಟುವಟಿಕೆಗಳನ್ನು ಬಳಕೆ ಮಾಡಿದರೆ, ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆ ಹೊರಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಓಲಾ ಊಬರ್ ಸಂಘದ ಅಧ್ಯಕ್ಷ ತನ್ವೀರ್ ಸಾರಿಗೆ ಇಲಾಖೆ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೊರೋನಾ ಕಾರಣದಿಂದ ಆಟೋ, ಓಲಾ ಊಬರ್ ಕಾರ್ಮಿಕರು ಸಾಕಷ್ಟು ತೊಂದರೆಗೆ ಈಡಾಗಿದ್ದರು. ಇದರ ಜೊತೆಗೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಕೂಡ ಹೊಡೆತ ಕೊಡುತ್ತಿತ್ತು. ಇವರ ಸೇವೆ ಕಾನೂನುಬಾಹಿರವಾದದ್ದು ಎಂದು ಆರಂಭದಲ್ಲೇ ಹೋರಾಟ ಕೈಗೆತ್ತಿಕೊಂಡಿದ್ದೆವು. ಇದೀಗ ಅದು ಯಶಸ್ವಿಯಾಗಿದೆ ಎಂದಿದ್ದಾರೆ.
ವೈಟ್ ಬೋರ್ಡ್ ಗಾಡಿಗಳನ್ನು ಸೇವೆಗೆ ಬಳಕೆ
ರ್ಯಾಪಿಡೋ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಹೆಸರಿನಲ್ಲಿ ವೈಟ್ ಬೋರ್ಡ್ ಬೈಕ್ಗಳಲ್ಲಿ ಅತಿ ಕಡಿಮೆ ದರಕ್ಕೆ ಸೇವೆ ನೀಡಲಾಗುತ್ತಿತ್ತು. ಕಾನೂನಿನಲ್ಲಿ ಇದ್ದಕ್ಕೆ ಅವಕಾಶವಿಲ್ಲ. ಆಟೋ ಚಾಲಕರು ಸರ್ಕಾರಕ್ಕೆ ಟ್ಯಾಕ್ಸ್ ಪಾವತಿಸಿ ಎಲ್ಲೋ ಬೋರ್ಡ್ ಆಟೋಗಳಲ್ಲಿ ಸೇವೆ ನೀಡುತ್ತಿದೆ. ತೆರಿಗೆ ಪಾವತಿಸುವ ನಾವು ಎಲ್ಲಿಗೆ ಹೋಗಬೇಕು?, ಯಾವುದೇ ಕಾರಣಕ್ಕೂ ಈ ಕಾನೂನು ಬಾಹಿರ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಬಾರದು ಎಂಬುದು ಆಟೋ ಚಾಲಕರು ಮನವಿಯಾಗಿತ್ತು. ಇದೀಗ ಮನವಿ ಪುರಸ್ಕಾರವಾಗಿದ್ದು ಕರಾಳ ಕೊರೋನಾದಿಂದ ಕಂಗೆಟ್ಟಿದ್ದ ಆಡೋ ಚಾಲಕರು ಕೂಡ ಸಾರಿಗೆ ಇಲಾಖೆಯ ಈ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಕೊರೋನಾ ಏನೋ ಎಲ್ಲರಿಗೂ ಸಮಸ್ಯೆ ಉಂಟು ಮಾಡಿತು. ಆದರೆ ಈ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳು ನಮ್ಮ ತಟ್ಟೆಗೆ ಕೈ ಹಾಕಿ ತಿನ್ನುತ್ತಿದ್ದರು. ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದೀಗ ನಿಷೇಧ ಹೇರಿರುವುದು ಸಂತಸದ ವಿಚಾರ ಎಂದು ಆಟೋ ಚಾಲಕ ರಂಗಸ್ವಾಮಿ ಹೇಳಿದ್ದಾರೆ.
ಒಟ್ಟಾರೆ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ಇನ್ಮುಂದೆ ಬಂದ್ ಮಾಡಲಾಗಿದ್ದು, ಕೂಡಲೇ ಸೇವೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಮೀರಿ ಸೇವೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ 500 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ ಚಾಲಕರಿಗೆ 10,500 ರೂ.ವರೆಗೆ ದಂಡ ವಿಧಿಸಿದ್ದರು.