ತಮ್ಮ ವಿರುದ್ಧ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಮಾಡಿರುವ ಅಸಭ್ಯ, ಕೀಳು ಮಟ್ಟದ ಟೀಕೆಗಳಿಗೆ ತೀವ್ರ ರೀತಿಯ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು; ನನ್ನ ಜೇವನ ತೆರೆದ ಪುಸ್ತಕ. ನನಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಪ್ರಹಾರ ನಡೆಸಿದರು.
ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿಗಳು, ” ನನ್ನ ಬಗ್ಗೆ ಟೀಕೆ ಮಾಡಿರುವ ವ್ಯಕ್ತಿಯ ಹೇಳಿಕೆ, ಆತ ಬಲಿಸಿರುವ ಪದಪುಂಜಗಳು ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆತನ ಮಾತುಗಳೇ ಆತನ ಸಂಸ್ಕಾರ ಎಂಥದ್ದು ಎಂದು ತೋರಿಸುತ್ತದೆ ” ಎಂದರು.
ತಾಜ್ ವೆಸ್ಟೆಂಡ್ನಲ್ಲಿ ರಾಸಲೀಲೆ ಮಾಡಲು ನಾನು ಹೋಗುತ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ಸ್ವಲ್ಪ ಸಮಯ ವಿಶ್ರಾಂತಿ ಮಾಡಲು ಹೋಗುತ್ತಿದ್ದೆ. ನಾನು ಎಲ್ಲೇ ಹೋದರೂ ನನ್ನ ಪಿಎ ಜತೆಯಲ್ಲೇ ಇರುತ್ತಿದ್ದರು. ಈಗಲೂ ಇರುತ್ತಾರೆ. ಆಗ ನನ್ನ ಸಂಪುಟ ಸಹೋದ್ಯೋಗಿ ಆಗಿದ್ದ ಸಾ.ರಾ ಮಹೇಶ್ ಅವರೂ ಇರುತ್ತಿದ್ದರು. ಇನ್ನು ಅನೇಕ ಸ್ನೇಹಿತರು ಇರುತ್ತಿದ್ದರು. ನನ್ನದು ತೆರೆದ ಪುಸ್ತಕ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಈ ವ್ಯಕ್ತಿಯನ್ನು ನೋಡಿ ನಾನು ಕಲಿಯಬೇಕಿತ್ತಾ? ನನ್ನ ಬಗ್ಗೆ ಮಾತನಾಡುವ ಈತ ಗುಡಿಸಲಲ್ಲಿ ಇದ್ದರಾ? ಇಲ್ಲೇ ಯುಬಿ ಸಿಟಿ ಪಕ್ಕದಲ್ಲೇ ಇದ್ದರಲ್ಲ. ಅಲ್ಲೇನು ಅವರು ಮಜಾ ಮಾಡುತ್ತಿದ್ದರಾ? ನನ್ನ ಜೀವನದಲ್ಲಿ ಕದ್ದು ಮುಚ್ಚಿ ಯಾವುದೂ ಇಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ಆ ವ್ಯಕ್ತಿಯ ಕಥೆ ಮುಗಿದ ಅಧ್ಯಾಯ. ಚನ್ನಪಟ್ಟಣದಲ್ಲಿ ಕೆಲಸವೇ ಅಗಿಲ್ಲ ಅಂತ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನಿಜಕ್ಕೂ ಅಲ್ಲಿಗೆ ಬಂದು ನೋಡಲಿ. ಬಸ್ ನಿಲ್ದಾಣದ ಕರ್ಮಕಾಂಡ ಏನೂ ಎಂಬುದು ಎಲ್ಲರಿಗೂ ಗೊತ್ತಿದೆ. ಖಾಸಗಿ ಬಸ್ ನಿಲ್ದಾಣಕ್ಕೆ 30 ಕೋಟಿ ರೂ. ಯೋಜನೆ ಮಾಡಿ ಎಸ್ಟಿಮೇಟ್ ಮಾಡಿದ್ದಾರೆ. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದಾರೆ. ಅಲ್ಲಿ ಹೋಗಿ ನೋಡಿ ತಗಡು ಹೊಡೆಸಿ ಇಟ್ಟಿದ್ದಾರೆ. ಅಲ್ಲಿ ದುಡ್ಡು ಹೊಡೆಯೋಕೆ ನಾನು ಹಣ ಕೊಡಿಸಬೇಕಾ? ಎಂದು ಕುಮಾರಸ್ವಾಮಿ ಅವರು ಟೀಕಾಕಾರನ ಜನ್ಮ ಜಾಲಾಡಿದರು.
ಚನ್ನಪಟ್ಟಣದ ಅಂಬೇಡ್ಕರ್ ಭವನದ ಕಥೆ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲಿ ಗುಂಡಿ ಬಿದ್ದು ನೀರು ನಿಂತಿದೆ. ಅದನ್ನು ನಾನು ಸ್ವಚ್ಚ ಮಾಡಿಸುತ್ತಿದೇನೆ. ನಾನೇನು ಕಣ್ಣೀರು ಹಾಕಿಕೊಂಡು ಹೋಗಿಲ್ಲ ಎಂದ ಅವರು; ನಾನು ಚನ್ನಪಟ್ಟಣಕ್ಕೆ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ಮೂವತ್ತು ವರ್ಷಗಳಲ್ಲಿ ಅಗದ ಪ್ರಗತಿ ನನ್ನ ಕಾಲದಲ್ಲಿ ಆಗಿದೆ. ಇಡೀ ರಾಜ್ಯಕ್ಕೆ ನಾನು ಸಿಎಂ ಆಗಿದ್ದೆ. ರಾಜ್ಯದ ಜನಕ್ಕೆ ನನ್ನ ಕೈಲಾದ ಸೇವೆ ಮಾಡಿದ್ದೇನೆ. ಈತ ನನಗೆ ಸರ್ಟಿಫಿಕೇಟ್ ಕೊಡೋದು ಬೇಕಿಲ್ಲ ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.
ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನು ಬೀದಿ ಪಾಲು ಮಾಡಿದ ಈ ವ್ಯಕ್ತಿ, ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ್ದು ಗೊತ್ತಿದೆ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ್ದು ತಿಳಿದಿದೆ. ಇಂಥ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡುತ್ತಾರೆಯೇ? ಎಂದು ಕುಮಾರಸ್ವಾಮಿ ಅವರು ಪ್ರಹಾರ ನಡೆಸಿದರು.
ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ, ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ. ದಲಿತರ ಜಮೀನು ಹೊಡೆದಿದ್ದೇನಂತೆ. ಬಂದು ತೋರಿಸಲಿ. ಮೆಗಾಸಿಟಿ ಯೋಜನೆ ಮಾಡಿ ಲೂಟಿ ಹೊಡೆದು ಜನ ಬೀದಿ ಪಾಲು ಮಾಡಿದ್ದನ್ನು ನೀತಿಗೆಟ್ಟ ವ್ಯಕ್ತಿ, ‘ ಸೈನಿಕ ‘ ಅಂತ ಸಿನಿಮಾ ಮಾಡಲು ಬೇರೆ ಹೋಗಿದ್ದ. ಇಂದಿಗೂ ಹಣ ಕೊಟ್ಟವರು ಬೀದಿಪಾಲಾಗಿದ್ದಾರೆ ಎಂದು ಯೋಗೇಶ್ವರ್ ಬಂಡವಾಳವನ್ನು ಮಾಜಿ ಸಿಎಂ ಬಿಚ್ಚಿಟ್ಟರು.
ಚನ್ನಪಟ್ಟಣದ ಜತೆಗೆ ನಮ್ಮ ಸಂಬಂಧ ಬಹಳ ಹಳೆಯದು. ಈ ವ್ಯಕ್ತಿ ಚಡ್ಡಿ ಹಾಕಿದ್ದನೋ ಇಲ್ಲವೋ ಗೊತ್ತಿಲ್ಲ. ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣ ಜತೆ ಬಾಂಧವ್ಯ ಇತ್ತು. ಮುಕ್ತ ಚರ್ಚೆಗೆ ಬರಲಿ. ಉತ್ತರ ನೀಡುತ್ತೇನೆ ಎಂದು ಅವರು ಸವಾಲು ಹಾಕಿದರು.