ಬೆಂಗಳೂರು: ಗಾಂಧಿ ಭಾರತದ ಪ್ರಜ್ಞೆ. ಗಾಂಧಿಯ ದೇಹ ಕೊಂದರೂ ವಿಚಾರಗಳನ್ನು ಕೊಲ್ಲಲು ಅಸಾಧ್ಯ. ಬಿಜೆಪಿಯವರಿಗೆ ಗೋಡ್ಸೆ ನಾಯಕ. ಗೋಡ್ಸೆ ಭಾರತ ಮಾಡುವ ಬಿಜೆಪಿ ಷಡ್ಯಂತ್ರವನ್ನು ಸೋಲಿಸೋಣಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ಕಛೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನಕ್ಕೆ ನೂರು ವರ್ಷಗಳ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ “ಗಾಂಧಿ ಭಾರತ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಐತಿಹಾಸಿಕವಾದದ್ದು. ಗಾಂಧಿ ಜಗತ್ತು ಕಂಡ ಅಪರೂಪದ ಸಂತ. ಇವರು ಭಾರತೀಯರ ಹೆಮ್ಮೆ ಎಂದರು.
ಗಾಂಧಿ ವಿಚಾರದಲ್ಲಿ ಬಿಜೆಪಿ ಬಹಳ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಗೋಡ್ಸೆ ಭಾರತ ಮಾಡಲು ಹೊರಟಿದೆ. ಈ ಷಡ್ಯಂತ್ರವನ್ನು ನಾವು ಸೋಲಿಸಬೇಕಿದೆ.
ಕೋಮು ದುಷ್ಟಶಕ್ತಿಗಳು ರಾಜ್ಯದ, ದೇಶದ ಅಭಿವೃದ್ಧಿಗೆ ಮಾರಕ. ಬಿಜೆಪಿ ಅಧಿಕಾರದಲ್ಲಿ ಇದ್ದಾಗೆಲ್ಲಾ ಸಮಾಜವನ್ನು, ಜಾತಿ, ಧರ್ಮದ ಹೆಸರಲ್ಲಿ ವಿಭಜಿಸುತ್ತಿದ್ದರೇ ಹೊರತು ಜನಪರವಾದ, ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ರೂಪಿಸಲೇ ಇಲ್ಲ. ಜಾರಿ ಮಾಡಲೂ ಇಲ್ಲ. ಬಿಜೆಪಿಗೆ ಜನಪರ ಪ್ರಗತಿ ಮುಖ್ಯ ಅಲ್ಲವೇ ಅಲ್ಲ ಎಂದರು.
ನಾವು ಸರ್ವ ಜಾತಿ, ಜನಾಂಗ, ಧರ್ಮದವರಿಗೆ ಮತ್ತು ಸರ್ವ ವರ್ಗದವರ ಏಳೆಗೆಗಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿದರೆ, ಈ ಜನಪರ ಕಾರ್ಯಕ್ರಮಗಳ ವಿರುದ್ಧ ತಪ್ಪು ಮಾಹಿತಿ ನೀಡಿ ಫಲಾನುಭವಿಗಳನ್ನು ಅವಮಾನಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ಅವರು ಬೆಳಗಾವಿ ಅಧಿವೇಶನದಲ್ಲಿ ಹಿಂದು-ಮುಸ್ಲಿಂ ಐಕ್ಯತೆ, ಗ್ರಾಮ ಸ್ವರಾಜ್ಯ, ಸರ್ವೋದಯದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಸಂದೇಶ ನೀಡಿದ್ದಾರೆ. ಇದು ಕಾಂಗ್ರೆಸ್ ನ ಸಿದ್ದಾಂತ ಮತ್ತು ಕಾರ್ಯಕ್ರಮಗಳಾಗಿವೆ ಎಂದರು.ಗಾಂಧಿ ಭಾರತದ ಆತ್ಮ. ಗಾಂಧಿ ಭಾರತದ ಪ್ರಜ್ಞೆ. ಗಾಂಧಿ ಭಾರತದ ಆಲೋಚನಾ ಕ್ರಮ. ಆದ್ದರಿಂದ ಗಾಂಧಿಯ ದೇಹವನ್ನು ಕೊಲ್ಲಬಹುದೇ ಹೊರತು, ಗಾಂಧಿತತ್ವಗಳು, ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ. ಗಾಂಧಿ ವಿಚಾರಗಳು ಈ ಮಣ್ಣಿನಲ್ಲಿ ಬೆರೆತಿವೆ ಎಂದರು.
ಹೀಗಾಗಿ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನದ ಶತಾಬ್ದಿ ಅರ್ಥಪೂರ್ಣವಾಗಿ ಇಡೀ ವರ್ಷ ನಡೆಯುತ್ತಿದೆ. ಇದರಲ್ಲಿ ಇಡೀ ರಾಜ್ಯದ ಎಲ್ಲಾ ವಯೋಮಾನದವರು ಭಾಗಿ ಆಗಿ ಅರ್ಥಪೂರ್ಣಗೊಳಿಸಿ ಎಂದು ಕರೆ ನೀಡಿದರು.
ಮನಮೋಹನ್ ಸಿಂಗ್ ಮತ್ತು ನರೇಗ:ನರೇಗಾ ಮತ್ತು ಅನ್ನಭಾಗ್ಯ ಕಾರ್ಯಕ್ರಮಗಳು ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನರನ್ನು ಹಸಿವಿನಿಂದ ರಕ್ಷಿಸಿ ಜೀವ ಉಳಿಸಿತು. ಹೀಗಾಗಿ ಮಾಜಿ ಪ್ರಧಾನಿ ಅವರು ಜಾರಿಗೆ ತಂದ ನರೇಗಾ ಮತ್ತು ಆಹಾರ ಭದ್ರತೆ ಕಾಯ್ದೆಯನ್ನು ನಾವು ಸ್ಮರಿಸಬೇಕು ಎಂದರು.
ಕಾನೂನು v/s ಕಾನ್ಸ್ಪಿರೆಸಿ:ಬಿಜೆಪಿ ರಾಜ್ಯದಲ್ಲಿ , ದೇಶದಲ್ಲಿ ಕಾನೂನು v/s ಕಾನ್ಸ್ಪಿರೆಸಿ ನಡೆಸುತ್ತಿದೆ. ಕಾನ್ಸ್ಪಿರೆಸಿ ಮೂಲಕ ಕಾನೂನನ್ನು ಸೋಲಿಸಲು ಯತ್ನಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆ. ಮಹಾತ್ಮ ಗಾಂಧಿ ಅವರು ಹೇಳಿದಂತೆ , “ಎಲ್ಲಾ ನ್ಯಾಯಾಲಯಗಳಿಗಿಂತ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು” .ಈ ಆತ್ಮಸಾಕ್ಷಿಗೆ ತಕ್ಕಂತೆ ನಡೆಯೋಣ ಎಂದರು.
KPCC ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಮತ್ತು ಹಾಲಿ, ಮಾಜಿ ಸಚಿವರು, KPCC ಯ ಹಾಲಿ, ಮಾಜಿ ಪದಾಧಿಕಾರಿಗಳಿ ಸೇರಿ ಹಲವಾರು ಪ್ರಮುಖರು, ನಿವೃತ್ತ ಸೇನಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.