ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಕೊರತೆ ಇದ್ದುದ್ದೇ ಇದು; ಆತ್ಮವಿಶ್ವಾಸದ ಕೊರತೆ. ಆದರೆ ಬಿಜೆಪಿಯ ಅಬ್ಬರ, ಆಮ್ ಆದ್ಮಿ ಪಕ್ಷದ ಸತತ ಪರಿಶ್ರಮ, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರವೇಶಗಳ ನಡುವೆಯೂ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಗೆಲ್ಲಲಿದ್ದೇವೆ ಎಂಬ ಭರವಸೆ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಕಾರ್ಯತಂತ್ರವನ್ನೂ ರೂಪಿಸುತ್ತಿದ್ದಾರೆ. ಗೋವಾ ಘಟಕದಿಂದಲೇ ಅಭಿಪ್ರಾಯ ಪಡೆದು ಅಲ್ಲಿನ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ ಹಾಗೂ ಹೈಕಮಾಂಡಿನ ನಾಯಕರು ಎಲ್ಲೂ ಎಡವಟ್ಟು ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ನಾಯಕರಲ್ಲಿ ಇಂಥದೊಂದು ಆತ್ಮವಿಶ್ವಾಸ ಮೂಡಲು ಕೆಲವು ಸಕಾರಣಗಳಿವೆ. ಬಿಜೆಪಿಗೆ ಅಲ್ಲಿ ಆಡಳಿತ ವಿರೋಧಿ ಅಲೆ ಇದೆ. ಜೊತೆಗೆ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಗ ಉತ್ಪಲ್ ಪರಿಕ್ಕರ್ ಈಗ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದಾರೆ. ಸಜ್ಜನನ ಸೋಗಿನಲ್ಲಿದ್ದ ಮನೋಹರ್ ಪರಿಕ್ಕರ್ ಜನಪ್ರಿಯವೂ ಆಗಿದ್ದರು. ಹಾಗಾಗಿ ಅವರ ಪುತ್ರ ಉತ್ಪಲ್ ಪರಿಕ್ಕರ್ ಬಿಟ್ಟಿರುವುದು ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪಣಜಿ ಕ್ಷೇತ್ರದ ಆಚೆಗೂ ಬಿಜೆಪಿಗೆ ಮಾರಕವಾಗುತ್ತಿದೆ. ಕಡೆಪಕ್ಷ ಅಕ್ಕ ಪಕ್ಕದ ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದಲ್ಲದೆ ಗೋವಾದ ಮಾಜಿ ಮುಖ್ಯಮಂತ್ರಿ ಲಕ್ಷೀಕಾಂತ ಪರ್ಸೇಕರ್ ಅವರು ಬಿಜೆಪಿ ಬಿಟ್ಟಿರುವುದು ಕೂಡ ಸ್ವಲ್ಪ ಸಮಸ್ಯೆಯಾಗುತ್ತಿದೆ.
ಕಳೆದ ಬಾರಿ ಬಿಜೆಪಿ ಜೊತೆಗಿದ್ದ ಅಲ್ಲಿನ ಸ್ಥಳೀಯ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನೆ ಮತ್ತು ಎನ್ ಸಿಪಿಗಳ ಮೈತ್ರಿ ಸರ್ಕಾರ ಇರುವುದರಿಂದ ಗೋವಾದಲ್ಲಿ ಈ ಮೂರು ಪಕ್ಷಗಳು ಹೊಂದಾಣಿಕೆಯ ಹೋರಾಟ ಮಾಡುತ್ತಿವೆ. ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಆಗುತ್ತಿತ್ತು. ಪರಸ್ಪರ ಗೆದ್ದು ಬಿಜೆಪಿಯನ್ನು ಸೋಲಿಸಬೇಕೆಂಬ ಹೊಂದಾಣಿಕೆಯ ಹೋರಾಟ ಕಾಂಗ್ರೆಸ್ ಪಕ್ಷಕ್ಕೆ ವರವಾಗಬಹುದಾದ ವಾತಾವರಣ ಸೃಷ್ಟಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪಾರ ನಿರೀಕ್ಷೆಯೊಂದಿಗೆ ಹೋರಾಟ ಮಾಡಿ ದೊಡ್ಡ ನಿರಾಸೆ ಅನುಭವಿಸಿದ ಆಮ್ ಆದ್ಮಿ ಪಕ್ಷ ಈ ಬಾರಿಯೂ ಭಾರೀ ಪರಿಣಾಮ ಬೀರುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಜೊತೆಗೆ ಅದು ಗಳಿಸುವ ಮತಗಳೆಲ್ಲವೂ ಕಾಂಗ್ರೆಸ್ ಮತಗಳೇ ಆಗಿರುವುದಿಲ್ಲ. ಹಲವೆಡೆ ಬಿಜೆಪಿ ಮತಬುಟ್ಟಿಗೂ ಕೈಹಾಕುತ್ತದೆ. ವಿಶೇಷವಾಗಿ ಈ ಬಾರಿ ಆಮ್ ಆದ್ಮಿ ಪಕ್ಷ ಅಮಿತ್ ಪಾಲೇಕರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಬಿಜೆಪಿಗೆ ಪೆಟ್ಟು ನೀಡುವ ಸಾಧ್ಯತೆ ಇದೆ.
ಏಕೆಂದರೆ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ ಈ ಹಿಂದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಭಂಡಾರಿ ಸಮುದಾಯದವರು. ಭಂಡಾರಿ ಸಮುದಾಯ ಅತಿದೊಡ್ಡ ಮತದಾರರನ್ನು ಹೊಂದಿದೆ. ಅದು ‘ತನ್ನ ಜಾತಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಪಕ್ಷಕ್ಕೆ ಬೆಂಬಲ ನೀಡಲಾಗುವುದು’ ಎಂದು ಬಹಳ ಹಿಂದೆಯೇ ಹೇಳಿತ್ತು. ಅದೇ ಕಾರಣಕ್ಕಾಗಿಯೇ ಆಮ್ ಆದ್ಮಿ ಪಕ್ಷ ಅಮಿತ್ ಪಾಲೇಕರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು. ಈಗ ಆಮ್ ಆದ್ಮಿ ಪಕ್ಷದ ನಡೆ ಬಿಜೆಪಿಗೆ ಹೊಡೆತ ನೀಡುತ್ತಿದೆ.
ಆಮ್ ಆದ್ಮಿ ಪಕ್ಷಕ್ಕೆ ಹೋಲಿಸಿಕೊಂಡರೆ ಈಗಷ್ಟೇ ರಾಜ್ಯ ಪ್ರವೇಶ ಮಾಡಿರುವ ಟಿಎಂಸಿಯಿಂದ ಕಾಂಗ್ರೆಸಿಗೆ ಹೆಚ್ಚು ನಷ್ಟವಾಗಬೇಕಿತ್ತು. ಆದರೆ ತೃಣಮೂಲ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಮಟ್ಟಕ್ಕೆ ನೆಲೆ ವಿಸ್ತರಿಸಿಕೊಂಡಿಲ್ಲ. ಈ ವಾಸ್ತವ ಗೊತ್ತಾಗಿರುವುದರಿಂದಲೇ ಟಿಎಂಸಿ ಈಗ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಟಿಎಂಸಿಯ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿ ‘ತನ್ನ ಗೆಲುವಿನ ವಿಶ್ವಾಸವನ್ನು’ ಹೊರಹಾಕಿದೆ.
ಇನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರ ತಂದಿರುವ ಮತಾಂತರ ನಿಷೇಧ ಕಾಯ್ದೆ ಗೋವಾದಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಗೋವಾದಲ್ಲಿ ಕ್ರೈಸ್ತ ಸಮುದಾಯವೇ ನಿರ್ಣಾಯಕ. ಈಗ ನೆರೆ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತಂದಿರುವುದು ಸಹಜವಾಗಿ ಅಲ್ಲಿನ ಕ್ರೈಸ್ತರು ಬಿಜೆಪಿ ವಿರುದ್ಧ ಸಿಡಿದೇಳುವಂತೆ ಮಾಡಿದೆ. ಈ ಪರಿಸ್ಥಿತಿಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಈಗ ಮತ್ತೊಂದು ಕಾರ್ಯತಂತ್ರ ಹೂಡಿದೆ. ಗೋವಾ ಚುನಾವಣೆಗೆ ಬಿಡುಗಡೆ ಮಾಡಿರುವ 30 ಮಂದಿ ಪೈಕಿ ಸ್ಟಾರ್ ಪ್ರಚಾರಕರ ಪೈಕಿ 9 ಮಂದಿ ಕರ್ನಾಟಕದವರು.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಕರ್ನಾಟಕದ ಕಾಂಗ್ರೆಸ್ ನಾಯಕರಾದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ ಮತ್ತು ಆರ್.ವಿ. ದೇಶಪಾಂಡೆ ಅವರನ್ನು ಗೋವಾದಲ್ಲಿ ಮತಾಂತರ ನಿಷೇಧ ಕಾಯಿದೆ ಬಗ್ಗೆ ಪ್ರಸ್ತಾಪ ಮಾಡಲೆಂದೇ ನಿಯೋಜಿಸಲಾಗಿದೆ. ಬಿಜೆಪಿ ಬಳಿ ಈ ವಿಷಯವನ್ನು ಸಮರ್ಥಿಸಿಕೊಳ್ಳಲು ಯಾವ ಅಸ್ತ್ರವೂ ಇಲ್ಲ.
ಹೀಗೆ ಹಲವು ಸಂಗತಿಗಳು ತಮಗೆ ಪೂರಕವಾಗಿರುವುದರಿಂದ ಕಾಂಗ್ರೆಸ್ ಉತ್ಸಾಹ ಇಮ್ಮಡಿಯಾಗಿದೆ. ಫೆಬ್ರವರಿ 4ರಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗೋವಾದಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಳಿಗ್ಗೆ 10:30ಕ್ಕೆ ಸದಾ ಮತ್ತು ಮೊರ್ಮುಗೋವ್ ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಡೊನಾ ಪೌಲಾದ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ 2.15ಕ್ಕೆ ಡೊನಾ ಪೌಲಾದಲ್ಲಿ ಪ್ರವಾಸೋದ್ಯಮದ ಪ್ರತಿನಿಧಿಗಳು, ಶಾಕ್ ಮಾಲೀಕರು ಮತ್ತು CII ಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ 4.15ಕ್ಕೆ ಸಂಖಾಲಿ ಮುನ್ಸಿಪಲ್ ಗ್ರೌಂಡ್ ನಲ್ಲಿ ಆಯೋಜಿಸಿರುವ “ನಿರ್ಧರ್” ಎಂಬ ವರ್ಚುವಲ್ ರ್‍ಯಾಲಿ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೊನ್ನೆ ಸಂಸತ್ ಅಧಿವೇಶನದಲ್ಲಿ ಅದ್ಭುತವಾಗಿ ಮಾತನಾಡಿದ್ದ ರಾಹುಲ್ ಗಾಂಧಿ ಈಗ ಗೋವಾ ಪ್ರವಾಸ ಮಾಡುತ್ತಿರುವುದು ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಚೈತನ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 14ರಂದು ಗೋವಾದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.