ಧಾರವಾಡ: ಕ್ಷೇತ್ರದ ಜನರ ಸೇವೆ ಮಾಡಲು ಈ ಬಾರಿ ಅವಕಾಶ ನೀಡಿ. ಜಾತಿ, ಧರ್ಮ, ಜನಾಂಗ ಎಂಬ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡ ಪಕ್ಷ ಕಾಂಗ್ರೆಸ್. ಬಸವಣ್ಣನವರ ತತ್ವದಂತೆ ನಡೆಯುವ ಪಕ್ಷ. ಅವರ ಹಾದಿಯಲ್ಲೇ ನಾವೆಲ್ಲ ನಡೆಯೋಣ ಎಂದು ಧಾರವಾಡ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಹೇಳಿದರು.
ನರಗುಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗಾಯತ ಪಂಚಮಸಾಲಿ ಮುಖಂಡರ ಹಾಗೂ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು.
ಲಿಂಗಾಯತರು ಮತ್ತು ಪಂಚಮಸಾಲಿ ಸಮುದಾಯದ ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿನಯ್ ಕುಲಕರ್ಣಿ ಅವರು ಮನವಿ ಮಾಡಿದರು.
ಲಿಂಗಾಯತ ಹಾಗೂ ಪಂಚಮಸಾಲಿ ರಾಜಕಾರಣಿಗಳ ಭವಿಷ್ಯವನ್ನು ಬಿಜೆಪಿ ಮುಗಿಸುತ್ತಾ ಸಾಗಿದೆ. ಆದ್ದರಿಂದ ಸಮಾಜದ ಬಾಂಧವರು ಲಿಂಗಾಯತ ಮತ್ತು ಪಂಚಮಸಾಲಿ ವಿರೋಧಿ ಪಕ್ಷ ತಿರಸ್ಕರಿಸಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಹೊಣೆ ಎಲ್ಲಾ ನಾಯಕರದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೋಹನ ಲಿಂಬಿಕಾಯಿ, ಡಾ. ಸಂಗಮೇಶ ಕೊಳ್ಳಿ, ಪ್ರವೀಣ ಯಾವಗಲ್, ಬಾಪುಗೌಡ ಪಾಟೀಲ, ಸದುಗೌಡ ಪಾಟೀಲ, ಆರ್ ಎಚ್ ಕೋನರಡ್ಡಿ, ನೀಲಕಂಠ ಅಸೂಟಿ, ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ಮುತ್ತಣ್ಣವರ, ಶಿವಾನಂದ ಭೂಮಣ್ಣವರ ಮತ್ತು ನವಲಗುಂದ, ನರಗುಂದ ತಾಲ್ಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರು, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.