ಕರ್ನಾಟಕದಲ್ಲಿ (Karnataka) ಸದ್ಯ ನಡೆಯುತ್ತಿರುವ ಹಿಜಾಬ್ (Hijab) ವಿವಾದವೂ ಬಿಜೆಪಿಯ ಯೋಜಿತ ಕೃತ್ಯವಾಗಿದ್ದು, ಇದರಲ್ಲಿ ನಡೆಯುವ ಕೋಮುಧ್ರುವೀಕರಣವು ಬಿಜೆಪಿಗೆ (BJP) ಚೊಚ್ಚಲ ಮತದಾರರ ವೋಟ್‌ಬ್ಯಾಂಕ್ ಅನ್ನು ಸೃಷ್ಟಿಸಿಕೊಡಲಿದೆ. ಹಾಗಾಗಿಯೇ, ಮುಂದಿನ ಚುನಾವಣೆಗೆ ಮೊದಲ ಮತದಾರರಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ (Collage Students) ಸಂಬಂಧಿಸಿದ ಸಮಸ್ಯೆಯನ್ನೇ ಮುನ್ನೆಲೆಗೆ ತರಲಾಗಿದೆ ಎಂಬ ವಿಶ್ಲೇಷಣೆ ನಡೆಯುತ್ತಿದ್ದರೂ ಅದರಿಂದ ವ್ಯತಿರಿಕ್ತವಾದ ವಿಶ್ಲೇಷಣೆಯೂ ಈಗ ಚಾಲ್ತಿಗೆ ಬಂದಿದೆ.
ಮೂಲಗಳ ಪ್ರಕಾರ, ಹಿಜಾಬ್ ವಿವಾದವನ್ನು ಈ ಮಟ್ಟಿಗೆ ಬೆಳೆಯಲು ಬಿಟ್ಟಿರುವುದರಿಂದ ಕೇಂದ್ರ ಬಿಜೆಪಿಗೆ ರಾಜ್ಯ ಸರ್ಕಾರ (State Government) ಹಾಗೂ ರಾಜ್ಯ ಬಿಜೆಪಿ ಸಮಿತಿ ಮೇಲೆ ಅಸಮಾಧಾನವಿದೆ ಎನ್ನಲಾಗಿದೆ. ಈಗಾಗಲೇ, ವಿವಾದವನ್ನು ತಣ್ಣಗಾಗಿಸುವಂತೆ ದೆಹಲಿಯಿಂದ ಸೂಚನೆ ಬಂದಿದ್ದು, ಹೈಕೋರ್ಟ್ ತೀರ್ಮಾಣದ ಬಳಿಕ ಶಿಕ್ಷಣ ಇಲಾಖೆ ಫೆಬ್ರವರಿ 5 ರಂದು ಹೊರಡಿಸಿದ್ದ ನೋಟೀಸನ್ನು ಮಾರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಕರ್ನಾಟಕದ ಒಂದು ಮೂಲೆಯಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯರ ಸಣ್ಣ ಗುಂಪೊಂದು ಕೇಳಿದ ಬೇಡಿಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರ ಹಾಗೂ ಬಿಜೆಪಿಯ ಮಾನ ಕಳೆಯುತ್ತಿದೆ. ಈ ವಿವಾದವನ್ನು ಇಷ್ಟು ಬೆಳೆಯಲು ಬಿಡದೆ ಆರಂಭದಲ್ಲೇ ತಣ್ಣಗಾಗಿಸಬಹುದಿತ್ತು ಎಂದು ಬಿಜೆಪಿ ಹೈಕಮಾಂಡ್ (BJP High Command) ಭಾವಿಸಿದೆ ಎಂದು ಮೂಲಗಳು ಹೇಳಿವೆ.
ನೂರಾರು ಕೇಸರಿ ಧಾರಿ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬರುತ್ತಿದ್ದ ಒಂಟಿ ವಿದ್ಯಾರ್ಥಿನಿಯ ಮೇಲೆ ಮುಗಿ ಬೀಳುವ ದೃಶ್ಯ ಸೇರಿದಂತೆ, ಮುಸ್ಲಿಂ ವಿದ್ಯಾರ್ಥಿನಿಯರಿಗೆ (Muslim Students) ಮಾಧ್ಯಮಗಳು ಮುಗಿಬೀಳುತ್ತಿರುವ ವಿಡಿಯೋಗಳು, ನಡು ರಸ್ತೆಯಲ್ಲೇ ಬುರ್ಖಾ, ಹಿಜಾಬುಗಳನ್ನು ಕಳಚುವಂತೆ ಮುಸ್ಲಿಂ ವಿದ್ಯಾರ್ಥಿನಿ, ಶಿಕ್ಷಕಿಯರನ್ನು ಒತ್ತಾಯಪಡಿಸಿರುವುದು, ವಿದ್ಯಾರ್ಥಿನಿಯರು ಶಾಲೆ ಆವರನದ ಹೊರಗೆ ಕುಳಿತಿರುವ ದೃಶ್ಯಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಾಮಾನಗಳನ್ನು ಗಮನಿಸಿ ಅಮೆರಿಕಾದ ಮಾನವ ಹಕ್ಕುಗಳ ಸಂಘಟನೆ ಟೀಕಿಸಿದ್ದು, ಕುವೈಟ್ ಸಂಸದರು ಬಿಜೆಪಿ ಸದಸ್ಯರಿಗೆ ಕುವೈಟ್‌ಗೆ ಬಹಿಷ್ಕರಿಸಬೇಕು ಎಂದು ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸಿದ್ದೆಲ್ಲವೂ ಭಾರತ ಸರ್ಕಾರದ ಮಾನವನ್ನು ಹರಾಜು ಹಾಕಿದೆ. ಅವಮಾನ ತಾಳಲಾರದೆ ಇತ್ತೀಚೆಗಷ್ಟೇ, ವಿದೇಶಾಂಗ ಸಚಿವಾಲಯವು ಭಾರತದ ಆಂತರಿಕ ವಿಷಯದಲ್ಲಿ ಹೊರಗಿನವರು ಅಭಿಪ್ರಾಯ ಹೇಳಬಾರದೆಂದು ಹೇಳಿದೆ.
ಇನ್ನು, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಇತರೆ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳಾಗಲಿ, ಎನ್‌ಡಿಎ ಅಧಿಕಾರದಲ್ಲಿರುವ ರಾಜ್ಯಗಳಾಗಲಿ ಅಷ್ಟಾಗಿ ಉತ್ಸುಕತೆ ತೋರುತ್ತಿಲ್ಲ. ಬದಲಾಗಿ, ಅಲ್ಲಿನ ಸರ್ಕಾರದ ವಕ್ತಾರರು ಈ ಸಮಸ್ಯೆಯನ್ನು ಆ ರಾಜ್ಯದ ಸಮಸ್ಯೆ ಎಂದು ಪರಿಗಣಿಸುತ್ತಿಲ್ಲ.
ಎನ್‌ಡಿಎ ಅಧಿಕಾರದಲ್ಲಿರುವ ಬಿಹಾರದಲ್ಲಿ ಧಾರ್ಮಿಕ ಆಚರಣೆಯ ಕಾರಣಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ನಾವು ಕಸಿಯುವುದಿಲ್ಲ, ಹಿಜಾಬ್ ಇಲ್ಲಿ ಸಮಸ್ಯೆ ಅಲ್ಲ ಎಂದು ಸಿಎಂ ನಿತೀಶ್ ಕುಮಾರ್ ಈಗಾಗಲೇ ಹೇಳಿದ್ದಾರೆ.
ಮಧ್ಯಪ್ರದೇಶದ ಶಿಕ್ಷಣ ಸಚಿವ ಏಕರೂಪಿ ವಸ್ತ್ರಸಂಹಿತೆ ಬಗ್ಗೆ ಮಾತನಾಡಿದಾಗ, ಅಲ್ಲಿನ ಸಿಎಂ, ಗೃಹ ಸಚಿವರು ಈ ಹೇಳಿಕೆಯಿಂದ ದೂರ ಸರಿದು ನಿಂತಿದ್ದಾರೆ. ಬಳಿಕ ಶಿಕ್ಷಣ ಸಚಿವರೇ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹಿಜಾಬ್ ವಿವಾದವನ್ನು ರಾಜ್ಯದಲ್ಲಿ ಮುಂದುವರೆಸಲು ಆಸಕ್ತಿ ತೋರಲಿಲ್ಲ.
ಮತಾಂತರ ನಿಷೇಧ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆ ವಿಚಾರ ಗಮನಿಸಿದರೆ ಎಲ್ಲಾ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ಸರಿ ಸುಮಾರು ನಿಲುವುಗಳು ಒಂದೇ ತೆರನಾಗಿತ್ತು. ಆದರೆ, ಹಿಜಾಬ್ ವಿಚಾರದಲ್ಲಿ ಕರ್ನಾಟಕ ಬಿಟ್ಟರೆ ಯಾವ ರಾಜ್ಯವೂ ಕಠಿಣ ನಿಲುವು ತಳೆದಿಲ್ಲ, ಮಾತ್ರವಲ್ಲ, ಕರ್ನಾಟಕವೇ ಹಿಂದೆ ನೀಡಿದ ಆದೇಶಕ್ಕೆ ವ್ಯತಿರಿಕ್ತ ಆದೇಶ ಹೊರಡಿಸಲು ತಯಾರಾಗಿ ನಿಂತಿದೆ.
ಯೋಜನೆಯಂತೆ ಭೇಟಿ ಬಚಾವೋ-ಭೇಟಿ ಪಡಾವೋ, ತ್ರಿವಳಿ ತಲಾಖ್ ನಿಷೇಧ ಮೊದಲಾದವುಗಳಿಂದ ಮುಸ್ಲಿಂ ಮಹಿಳೆಯರ ರಕ್ಷಕ ಎಂದು ಮೋದಿಯನ್ನು ಬಿಂಬಿಸಬೇಕಾಗಿದ್ದ ಸಂಧರ್ಭದಲ್ಲಿ ಹಿಜಾಬ್ ವಿಚಾರ ಮುನ್ನಲೆಗೆ ಬಂದು ಎಲ್ಲಾ ಯೋಜನೆ ತಲೆಕೆಳಗಾಗಿದೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಲೋಕಸಭೆಯಲ್ಲಿ ಹಿಜಾಬ್ ವಿವಾದದ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದರೂ ಕೋಲಾರದ ಸಂಸದ ಎಸ್ ಮುನಿಸ್ವಾಮಿ ಅವರನ್ನು ಬಿಟ್ಟರೆ ಬೇರೆ ಯಾವ ಸಂಸದರೂ ಕರ್ನಾಟಕ ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಲು ಬಂದಿಲ್ಲ. ಮುಸ್ಲಿಮರ ವಿರುದ್ಧ, ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸುವ ತೇಜಸ್ವಿ ಸೂರ್ಯ ಕೂಡಾ ಈ ವಿಚಾರದಲ್ಲಿ ಮೌನವಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಅದಾಗ್ಯೂ, ಹಿಜಾಬ್ ವಿವಾದದ ಉಲ್ಬಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮಾತ್ರ ಗುರಿಮಾಡುವುದು ಸರಿಯಲ್ಲ ಎಂದು ಅವರ ಆಪ್ತರೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ. ಅವರ ಪ್ರಕಾರ, ಸಿಎಂ ಬೊಮ್ಮಾಯಿಗೆ ರಾಜ್ಯ ಬಿಜೆಪಿಯ ಸ್ಥಳೀಯ ಪದಾಧಿಕಾರಿಗಳ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ಪ್ರಭಾವ ಇಲ್ಲ. ಹಿಜಾಬ್ ವಿವಾದವನ್ನು ದೊಡ್ಡ ಸಮಸ್ಯೆಯಾಗಿ ಮಾಡಿದ್ದರ ಹಿಂದೆ ಸ್ಥಳೀಯ ನಾಯಕತ್ವದ ಕೈವಾಡವಿದೆ ಎಂದೂ ಹೇಳಲಾಗಿದೆ. ಇವೆಲ್ಲವನ್ನೂ ಕೇಂದ್ರ ಬಿಜೆಪಿ ಗಮನಿಸುತ್ತಿದೆ.
ಹಿಜಾಬ್ ವಿಚಾರದಲ್ಲಿ ರಾಷ್ಟ್ರ ಬಿಜೆಪಿಯು ಕಠಿಣ ನಿಲುವು ತಳೆಯದೇ ಮಧ್ಯಮ ಮಾರ್ಗ ತಳೆದಿದೆ. ಯುನಿಫಾರ್ಮ್ ಇರುವ ಸಂಸ್ಥೆಗಳಲ್ಲಿ ಯುನಿಫಾರ್ಮ್ ಬಣ್ಣದ ಶಾಲನ್ನೇ ಹಿಜಾಬ್ ಆಗಿ ಬಳಸುವ ಅವಕಾಶ ನೀಡುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗಾಗಲೇ ಸೂಚನೆ ಬಂದಿದೆ ಎನ್ನಲಾಗಿದೆ.
ಹಿಜಾಬ್ ಸಮಸ್ಯೆಯನ್ನು ವರ್ಧಿಸದಂತೆ ಹಿರಿಯ ನಾಯಕತ್ವದ ನಿರ್ದೇಶನವಿದೆ ಎಂದು ಪದಾಧಿಕಾರಿಯೂ ಆಗಿರುವ ಪಕ್ಷದ ಹಿರಿಯ ನಾಯಕರೊಬ್ಬರು ಒಪ್ಪಿಕೊಂಡಿದ್ದಾರೆ.
“ಇದು ಎಂದಿಗೂ ಬಿಜೆಪಿ ವಿಷಯವಾಗಿರಲಿಲ್ಲ, ಪಕ್ಷವು ಈ ಸಮಸ್ಯೆಯನ್ನು ಸೃಷ್ಟಿಸಲು ಬಯಸಲಿಲ್ಲ. ಇದು ಸ್ಥಳೀಯ ಸದಸ್ಯರ ಸಮಸ್ಯೆ” ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಈ ಒಟ್ಟಾರೆ ಹಿನ್ನೆಲೆ ಇಟ್ಟು ಗಮನಿಸಿದರೆ ರಾಷ್ಟ್ರೀಯ ಬಿಜೆಪಿಗೆ ಹಿಜಾಬ್ ಒಂದು ವಿವಾದವಾಗಿ ಬೇಡ. ಈಗಾಗಲೇ ಮುಸ್ಲಿಂ ವಿರೋಧಿ ನಿಲುವು ಎಂದು ಬಿಜೆಪಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಛೀಮಾರಿ ಹಾಕುವುದರಿಂದ ಬೇಸತ್ತು ಹೋಗಿದೆ ಎನ್ನಲಾಗಿದೆ. ಯಾವುದಕ್ಕೂ, ಕರ್ನಾಟಕ ಹೈಕೋರ್ಟ್ ತೀರ್ಪಿನ ಬಳಿಕ ಕರ್ನಾಟಕ ಸರ್ಕಾರ ಯಾವ ನಿಲುವು ತಳೆಯಲಿದೆ ಅನ್ನುವುದರ ಮೇಲೆ ವಿಷಯ ಅವಲಂಬಿತವಾಗಿದೆ.