ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada 12) ಈಗ ಫಿನಾಲೆ ಹಂತಕ್ಕೆ ಕಾಲಿಟ್ಟಿದೆ. ಆದರೆ ಫಿನಾಲೆಗೂ ಮುನ್ನವೇ ವೀಕ್ಷಕರ ನಡುವೆ ಭಾರೀ ಚರ್ಚೆ, ಆಕ್ರೋಶ ಮತ್ತು ವಿವಾದ ಹುಟ್ಟಿಕೊಂಡಿದೆ. ಕಾರಣ ಇಡೀ ಸೀಸನ್ ಎಂಟರ್‌ಟೈನ್‌ಮೆಂಟ್ ಕಿಂಗ್ ಅಂತ ಕರೆಸಿಕೊಂಡಿದ್ದ ಗಿಲ್ಲಿ ನಟನಿಗೆ(Gilli Nata )ಈ ಸೀಸನ್‌ನ ‘ಕಿಚ್ಚನ ಚಪ್ಪಾಳೆ’ ಸಿಗದೇ ಇರುವುದು.

ಗಿಲ್ಲಿ ನಟ ಪ್ರತಿ ಎಪಿಸೋಡ್‌ನಲ್ಲೂ ಕಾಮಿಡಿ, ಎಂಟರ್‌ಟೈನ್‌ಮೆಂಟ್ ಮೂಲಕ ವೀಕ್ಷಕರನ್ನು ರಂಜಿಸಿದ್ದರು. ಈ ಸೀಸನ್‌ನ ʻಒನ್ ಮ್ಯಾನ್ ಶೋ, ಮಾಸ್ಟರ್‌ಮೈಂಡ್, ಕಾಮಿಡಿ ಕಿಂಗ್ ಎಂದು ವೀಕ್ಷಕರು ಗಿಲ್ಲಿ ಬಗ್ಗೆ ಖುಷಿ ವ್ಯಕ್ತಪಡಿಸುತ್ತಿದ್ದು, ಈ ಬಾರಿ ಹೊಸದಾಗಿ ಆರಂಭವಾಗಿರುವ ಇಡೀ ಸೀಸನ್‌ನ ʻಕಿಚ್ಚನ ಚಪ್ಪಾಳೆʼ ಗಿಲ್ಲಿ ನಟನಿಗೆ ಬರುತ್ತೆ ಎಂದುಕೊಂಡಿದ್ದರು. ಆದರೆ ಗಿಲ್ಲಿ ಅಭಿಮಾನಿಗಳಿಗೆ ಮಾತ್ರವಲ್ಲ ಸಂಪೂರ್ಣ ಬಿಗ್ ಬಾಸ್ ಅಭಿಮಾನಿಗಳಿಗೆ ಈ ವೀಕೆಂಡ್ ನಿರಾಸೆ ಮೂಡಿದೆ.

ಈ ಬಾರಿಯ ಸೀಸನ್‌ನ ʻಕಿಚ್ಚನ ಚಪ್ಪಾಳೆʼ ಗಿಲ್ಲಿ ನಟ ಬದಲಾಗಿ ಧ್ರುವಂತ್‌ಗೆ ದೊರೆತಿದೆ. ಇದರಿಂದ ಗಿಲ್ಲಿ ಅಭಿಮಾನಿಗಳು ಭಾರೀ ನಿರಾಸೆ ವ್ಯಕ್ತಪಡಿಸುತ್ತಿದ್ದು, ವಾಹಿನಿ ಹಾಗೂ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ನೇರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದ್ರೆ ಈ ಕಿಚ್ಚನ ಚಪ್ಪಾಳೆ ವಿವಾದದ ಹಿನ್ನಲೆ ಏನು? ಗಿಲ್ಲಿಗೆ ಅನ್ಯಾಯವಾಯಿತಾ? ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ.

ಬಿಗ್ ಬಾಸ್ ಕನ್ನಡ 12 ಜಗಳ, ತಂತ್ರ, ಟಾಸ್ಕ್‌ಗಳ ಜೊತೆಗೆ ಎಂಟರ್‌ಟೈನ್‌ಮೆಂಟ್‌ಗೆ ಸಾಕ್ಷಿಯಾದ ಸೀಸನ್. ಈ ಸೀಸನ್‌ನ ಆರಂಭದಿಂದಲೇ ವೀಕ್ಷಕರ ಗಮನ ಸೆಳೆದ ಸ್ಪರ್ಧಿ ಅಂದ್ರೆ – ಗಿಲ್ಲಿ ನಟ, ಪ್ರತಿಯೊಂದು ಎಪಿಸೋಡ್‌ನಲ್ಲೂ ತನ್ನ ನ್ಯಾಚುರಲ್ ಕಾಮಿಡಿ, ಪ್ರೆಸೆನ್ಸ್ ಆಫ್ ಮೈಂಡ್, ಪಂಷ್ ಡೈಲಾಗ್, ಸಾಮಾನ್ಯ ನಡೆ ನುಡಿ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದರು. ಜಗಳ ಇರಲಿ, ಟಾಸ್ಕ್ ಇರಲಿ, ನಾಮಿನೇಷನ್ ಇರಲಿ – ಯಾವುದೇ ಸಂದರ್ಭದಲ್ಲೂ ತನ್ನತನವನ್ನು ಬಿಟ್ಟು ಕೊಡದೇ, ತಾವು ತಾವಾಗಿಯೇ ಆಟ ಆಡಿದ ಸ್ಪರ್ಧಿ ಅನ್ನೋ ಹೆಸರು ಗಿಲ್ಲಿಗೆ ಸಿಕ್ಕಿತ್ತು. ಇದೇ ಕಾರಣಕ್ಕೆ ಸೀಸನ್‌ನ ಆರಂಭದಲ್ಲೇ ಗಿಲ್ಲಿಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕಿತ್ತು. ಅದಾದ ಬಳಿಕವೂ ಹಲವು ಬಾರಿ ಗಿಲ್ಲಿಯ ಆಟವನ್ನು ವೀಕ್ಷಕರು ‘ಒನ್ ಮ್ಯಾನ್ ಶೋ’, ‘ಮಾಸ್ಟರ್‌ಮೈಂಡ್’ ಅಂತ ಕರೆದಿದ್ದರು.

ಆದರೆ ಈ ವೀಕೆಂಡ್ ಎಪಿಸೋಡ್ ವೀಕ್ಷಕರಿಗೆ ದೊಡ್ಡ ಶಾಕ್ ನೀಡಿದೆ. ಕಾರಣ, ಇಡೀ ಸೀಸನ್‌ನ ‘ಕಿಚ್ಚನ ಚಪ್ಪಾಳೆ’ ಧ್ರುವಂತ್‌ಗೆ ಸಿಕ್ಕಿದೆ. ಧ್ರುವಂತ್ ಕೂಡ ಈ ಸೀಸನ್‌ನಲ್ಲಿ ಎಂಟರ್‌ಟೈನ್ ಮಾಡಿದ್ದಾರೆ ಅನ್ನೋದರಲ್ಲಿ ಅನುಮಾನ ಇಲ್ಲ. ಆದರೆ ಇಡೀ ಸೀಸನ್ ತುಂಬಾ ನಿರಂತರವಾಗಿ ಎಂಟರ್‌ಟೈನ್‌ಮೆಂಟ್ ಕೊಟ್ಟ ಗಿಲ್ಲಿಯನ್ನು ಕಡೆಗಣಿಸಲಾಗಿದೆ ಅನ್ನೋ ಅಭಿಪ್ರಾಯ ವೀಕ್ಷಕರಲ್ಲಿ ಮೂಡಿದೆ.

ಸಾಮಾನ್ಯವಾಗಿ ಕಿಚ್ಚನ ಚಪ್ಪಾಳೆ ಅಂದ್ರೆ ಕೇವಲ ಒಂದು ವಾರದ ಪ್ರದರ್ಶನಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಇಡೀ ಸೀಸನ್‌ಗೆ ಒಟ್ಟಾಗಿ ಪ್ರಶಂಸೆ ನೀಡಲಾಗಿದೆ. ಇದೇ ವಿಚಾರ ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ #JusticeForGilli, #GilliDeservesCup ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಈ ಮೂಲಕ ಗಿಲ್ಲಿಯ ಜನಪ್ರಿಯತೆಯನ್ನು ಕಡಿಮೆ ಮಾಡಿ ತಮ್ಮಿಷ್ಟದ ಸ್ಪರ್ಧಿಯನ್ನು ಗೆಲ್ಲಿಸುವ ಹುನ್ನಾರವನ್ನು ವಾಹಿನಿ ಮಾಡುತ್ತಿದೆ ಎನ್ನುವ ಆರೋಪ ಜೋರಾಗಿದೆ.

ನಿರೂಪಕ ಕಿಚ್ಚ ಸುದೀಪ್, ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರ ಅಭಿಮಾನಿಗಳಿಗೆ ಸಮಾಧಾನವಾಗಲಿ ಅಂತ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ. ಇದು ಟಿಆರ್‌ಪಿ ಗಿಮಿಕ್. ಆದರೆ ಒಂದು ಚಪ್ಪಾಳೆ ಇಡೀ ಸೀಸನ್‌ಗೆ ಕೊಡಬೇಕು ಅಂದ್ರೆ, ಗಿಲ್ಲಿಯ ಹೆಸರೇ ಮೊದಲು ಬರಬೇಕು. ಗಿಲ್ಲಿ ಬಿಟ್ಟರೆ ರಕ್ಷಿತಾ ಶೆಟ್ಟಿ. ಯಾಕೆಂದರೆ ಈ ಇಬ್ಬರೂ ಪ್ರತಿಯೊಂದು ಎಪಿಸೋಡ್‌ನಲ್ಲೂ ಎಂಟರ್‌ಟೈನ್ ಮಾಡಿದರೆ, ಆದರೆ ಈ ಇಬ್ಬರನ್ನೂ ಬಿಟ್ಟು ಸೀಸನ್‌ನ ‘ಕಿಚ್ಚನ ಚಪ್ಪಾಳೆ’ ಬೇರೆಯವರಗೆ ನೀಡಿರುವುದು ಇದು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಫಲಿತಾಂಶ ಬದಲಿಸಲು ಮಾಡಿದ ಮೊದಲ ಹೆಜ್ಜೆ ಎಂದು ಪ್ರೇಕ್ಷಕರು ನೇರವಾಗಿ ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಅನೇಕ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದೀಗ ಬಿಗ್ ಬಾಸ್ 12 ಫಿನಾಲೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈ ಹಂತದಲ್ಲಿ ವಿನ್ನರ್ ಯಾರು ಅನ್ನೋ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ. ಸೀಸನ್ ಆರಂಭದಿಂದಲೂ ಗಿಲ್ಲಿಯೇ ವಿನ್ನರ್ ಅನ್ನೋ ಅಭಿಪ್ರಾಯ ಬಹುತೇಕ ವೀಕ್ಷಕರಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಗೌಡ ವಿನ್ನರ್ ಆಗಬಹುದು ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಟಾಸ್ಕ್‌ಗಳಲ್ಲಿ ಪರ್ಫಾರ್ಮೆನ್ಸ್, ವೋಟಿಂಗ್ ಪ್ಯಾಟರ್ನ್, ಪ್ರೇಕ್ಷಕರ ಬೆಂಬಲ – ಈ ಎಲ್ಲ ಅಂಶಗಳನ್ನು ನೋಡಿದಾಗ ಗಿಲ್ಲಿ ಇನ್ನೂ ರೇಸ್‌ನಲ್ಲಿ ಬಲಿಷ್ಠ ಸ್ಪರ್ಧಿ ಅನ್ನೋದರಲ್ಲಿ ಅನುಮಾನ ಇಲ್ಲ. ಆದರೆ ಕಿಚ್ಚನ ಚಪ್ಪಾಳೆ ವಿಚಾರ ಗಿಲ್ಲಿ ಅಭಿಮಾನಿಗಳ ಮನಸ್ಸಿನಲ್ಲಿ ಗೆಲುವಿಗಾಗಿ ಗಿಮಿಕ್ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿಸಿದೆ.











