ಬೆಂಗಳೂರು : ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರವನ್ನು ಹಾಗೂ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಗ್ಯಾರಂಟಿ ಯೋಜನೆಯಲ್ಲಿ ಆಗಿರುವ ಲೋಪಗಳು ಅತ್ಯಂತ ಗಂಭೀರವಾದದ್ದು. ಇದರ ಉಸ್ತುವಾರಿ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಲೇ ರಾಜೀನಾಮೆ ನೀಡಬೇಕು. ವಾಲ್ಮೀಕಿ ನಿಗಮ ಹಗರಣದಂತೆ ಈ ಹಗರಣವನ್ನೂ ಸಹ ಕೇಂದ್ರ ತನಿಖಾ ದಳ (CBI) ತನಿಖೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ತೆರಿಗೆದಾರರ ಹಣವನ್ನು ಬೇರೆ ಯಾವುದೋ ಖಾತೆಗಳಿಗೆ ಹಾಕಿಕೊಂಡು ಭ್ರಷ್ಟಾಚಾರವೆಸಗುತ್ತಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಫಲಾನುಭವಿಗಳಲ್ಲದ ಖಾತೆಗಳಿಗೆ ಹೋಗಿರುವ ಹಣವನ್ನು ಕೂಡಲೇ ವಾಪಾಸ್ ಪಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕರ್ನಾಟಕದ 5 ಸಾಧಕರು; ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಸಾಧನೆಗೆ ರಾಷ್ಟ್ರದ ನಮನ
19,020 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದೇ ಖಾತೆಗೆ ಹಣಸಂದಾಯವಾಗಿದ್ದು, ಒಂದೇ ಬ್ಯಾಂಕ್ ಖಾತೆಗೆ ತಿಂಗಳಿಗೆ 3.8 ಕೋಟಿ ಗೃಹಲಕ್ಷ್ಮಿ ಹಣ ಜಮಾ ಆಗಿದೆ. 2024-25 ಸಿಎಜಿ (CAG) ವರದಿ ಗೃಹಲಕ್ಷ್ಮಿ ಲೋಪವನ್ನು ಬಹಿರಂಗಗೊಳಿಸಿದೆ.1 ವರ್ಷದಲ್ಲಿ 19,020 ಫಲಾನುಭವಿಗಳ ಒಂದೇ ಖಾತೆಗೆ 45 ಕೋಟಿ ದುಡ್ಡು, ಒಂದೇ ಬ್ಯಾಂಕ್ ಖಾತೆಯಲ್ಲಿ ಸಾವಿರಾರು ಫಲಾನುಭವಿಗಳ ಹೆಸರು ಲಿಂಕ್ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ 23,262 ಮಹಿಳೆಯರ ಬ್ಯಾಂಕ್ ಖಾತೆ ಇಲ್ಲದಿದ್ದರೂ ಗೃಹಲಕ್ಷ್ಮಿ ಹಣ ಸಂದಾಯವಾಗಿದೆ. ಬ್ಯಾಂಕ್ ಖಾತೆ ಇಲ್ಲದ ಫಲಾನುಭವಿಗಳ ದುಡ್ಡು ಯಾರದ್ದೋ ಖಾತೆಗೆ ಜಮೆ ಆಗಿದೆ. ಇನ್ನೂ 8,895 ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಹಣ ತಲುಪಿದೆ. ಕೆಲವು ನಿರ್ದಿಷ್ಟ ಖಾತೆಗಳಿಗೆ 1.8 ಕೋಟಿಯಷ್ಟು ಹಣ ಪದೇ ಪದೇ ಪಾವತಿಯಾಗಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಲು ಕೇಂದ್ರಿಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾ ಮಾಡಿದ್ದಾರೆ.






