ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ನಗರದ ಕೋಗಿಲು ಬಳಿಯ ಫಕೀರ್ ಕಾಲೋನಿಯಲ್ಲಿ ಜೆಸಿಬಿಗಳ ಘರ್ಜನೆ ನಡೆಸಿದ್ದು, ಅಕ್ರಮವಾಗಿ ನಿರ್ಮಿಸಿದ್ದ 110ಕ್ಕೂ ಹೆಚ್ಚು ಮನೆಗಳು ನೆಲಸಮ ಮಾಡಲಾಗಿದೆ.
2016 ರಲ್ಲಿ ಜಿಬಿಎ ಗೆ ಮಂಜೂರಾಗಿದ್ದ 14 ಎಕರೆ ಜಾಗದಲ್ಲಿ 300ಕ್ಕೂ ಹೆಚ್ಚು ಜನರು 110 ಮನೆಗಳನ್ನ ಅಕ್ರಮವಾಗಿ ನಿರ್ಮಿಸಿಕೊಂಡಿದ್ದರು. ಇಲ್ಲಿರುವರು ಯಾವುದೇ ದಾಖಲೆಗಳಿಲ್ಲದೆ ಮನೆಗಳ ನಿರ್ಮಾಣ ಮಾಡಿದ್ದರಿಂದ ಜಿಬಿಎ ಅಧಿಕಾರಿಗಳು, ಹಲವು ಬಾರಿ ಎಚ್ಚರಿಕೆ ನೀಡಿದ್ರೂ ಮನೆ ಖಾಲಿ ಮಾಡಿರಲಿಲ್ಲ.
ಜಿಬಿಎ ಈ ಜಾಗದಲ್ಲಿ ಹಸಿ ಕಸದಿಂದ ಬಯೋ ಗ್ಯಾಸ್ ಪ್ಲಾಂಟ್ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದು,
ಸ್ಯಾನಿಟರಿ ವೇಸ್ಟ್ ಬರ್ನಿಂಗ್ ಪ್ಲಾಂಟ್, ತೆಂಗಿನ ತ್ಯಾಜ್ಯ ಸಂರಕ್ಷಣಾ ಘಟಕ ನಿರ್ಮಾಣಕ್ಕೂ ಇದೆ ಜಾಗದಲ್ಲಿ ಸಿದ್ದತೆ ನಡೆಸಿದೆ. ಇದಕ್ಕಾಗಿ ಜಾಗದ ಸುತ್ತಲೂ ಈಗಾಗಲೆ ಕಾಂಪೌಂಡ್ ನಿರ್ಮಿಸಲಾಗಿತ್ತು.
ಆದರೆ ಒತ್ತುವರಿ ಇದ್ದ ಕಡೆ ಕಾಂಪೌಂಡ್ ನಿರ್ಮಾಣಕ್ಕೆ ತಡೆ ಉಂಟಾಗಿತ್ತು. ಹೀಗಾಗಿ ಇಂದು 500 ಕ್ಕೂ ಹೆಚ್ಚು ಜಿಲ್ಲಾಡಳಿತ, ಜಿಬಿಎ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ಮನೆಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಆದರೆ ಈ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸಲು ಸರ್ಕಾರವೇ ಅವಕಾಶ ನೀಡಿತ್ತು. ಸರ್ಕಾರದ ಸೂಚನೆಯಂತೆಯೇ ನಾವಿಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದೇವೆಂದು ಸಂತ್ರಸ್ತ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ ತೆರವುಗೊಳಿಸಲು ಮೂರು ತಿಂಗಳ ಮುನ್ನವೇ ನೋಟಿಸ್ ನೀಡಬೇಕು. ಭೂಮಿಯನ್ನು ಖಾಲಿ ಮಾಡುವಂತೆ ಸೂಚಿಸಬೇಕು. ಬಳಿಕ, ನಂತರದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿಯಮವಿದೆ. ಆದರೆ, ಫಕೀರ್ ಕಾಲೋನಿಯ ನಿವಾಸಿಗಳಿಗೆ ಈವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಅಧಿಕಾರಿಗಳು ಏಕಾಏಕಿ ಕಾಲೋನಿಗೆ ನುಗ್ಗಿ ಮನೆಗಳ ಮೇಲೆ ಬುಲ್ಲೋಜರ್ ಹತ್ತಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.



